ಕಾರ್ಕಳ: ಭಾರತ ಲಂಕಾ ಪ್ರೇಮಿಗಳಿಗೆ ಕಂಕಣ ಭಾಗ್ಯ ಕರುಣಿಸಿದ ಕುವೈಟ್; ಅಂಕೆ ಮೀರಿದ ಗಂಡನ ಪಡೆಯಲು ಲಂಕೆ ಹಾರಿದ ಪತ್ನಿ!

Spread the love

ಕಾರ್ಕಳ: ಭಾರತದ ಯುವಕ ಹಾಗೂ ಶ್ರೀಲಂಕಾ ದೇಶದ ಯುವತಿಯ ನಡುವೆ ದೂರದ ಕುವೈಟ್ ದೇಶದಲ್ಲಿ ಪ್ರೇಮಾಂಕುರವಾಗಿ ಬಳಿಕ ಮದುವೆಯಾಗಿ ಯುವಕ ಭಾರತಕ್ಕೆ ಬಂದವ ಮರಳಿ ಕುವೈಟಿಗೆ ಬಾರದ ಹಿನ್ನಲೆಯಲ್ಲಿ ಗಂಡನ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾದು ಕೊನೆಗೂ ಗಂಡನ ಹುಡುಕಿಕೊಂಡು ಭಾರತಕ್ಕೆ ಬಂದು ಗಂಡ ತನಗೆ ಮೋಸ ಮಾಡಿದ್ದು ಆತನೇ ಬೇಕೆಂದು ಹಠ ಹಿಡಿದು ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿರುವ ಕುತೂಹಲಕಾರಿ ಘಟನೆ ನಡೆದಿದೆ.

IMG-20160113-WA0027 srilanka_karkala 14-01-2016 09-57-32

ಘಟನೆಯ ವಿವರ:
ಮೂಲತಃ ಶ್ರೀಲಂಕಾ ದೇಶದವಳಾದ ಕಪೂರುದ್ದೀನ್ ರಾವಿಯತ್ ಆಫಿಯಾ ಎಂಬ ಯುವತಿ ಕುವೈಟಿನಲ್ಲಿ ಬ್ಯೂಟಿಶಿಯನ್ ಹಾಗೂ ಟೈಲರಿಂಗ್ ಆಗಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಈಕೆ ಕೆಲಸ ಮಾಡುವ ಸಮೀಪವೇ ಇರುವ ಕೆ.ಓ.ಸಿ ಆಯಿಲ್ ಫಿಲ್ಟರ್ ಕಂಪೆನಿಗೆ 2007ರಲ್ಲಿ ಕಾರ್ಕಳದ ಜೋಡುಕಟ್ಟೆಯ ಸಯ್ಯದ್ ಮೊಬಿನ್ ಯುಸೂಫ್ ಉದ್ಯೋಗ ಸೇರಿದ್ದ. ಬಳಿಕ ಇವರಿಬ್ಬರಿಗೂ ಪರಿಚಯವಾಗಿ ನಂತರ ಪರಿಚಯ ಪ್ರೇಮಕ್ಕೆ ತಿರುಗಿದ ಪರಿಣಾಮ ಇವರಿಬ್ಬರೂ ಹೆತ್ತವರಿಗೆ ತಿಳಿಸದೇ ಕುವೈಟ್ ದೇಶದ ನ್ಯಾಯಿಕ ಸಚಿವಾಲಯದಲ್ಲಿ 2013ರ ನವೆಂಬರ್ 29ರಂದು ಮದುವೆಯಾಗಿದ್ದರು.ಮದುವೆಯ ಬಳಿಕ ಒಂದು ವರ್ಷದವರೆಗೆ ಇಬ್ಬರೂ ಕುವೈಟಿನಲ್ಲೇ ಉದ್ಯೋಗ ಮಾಡಿಕೊಂಡು ವಾಸವಿದ್ದರು. ಕಳೆದ 2014 ನವೆಂಬರ್‍ನಲ್ಲಿ ಸಯ್ಯದ್ ಮೊಬಿನ್ ಯುಸೂಫ್ ತನ್ನ ತಂಗಿಯ ಮದುವೆಗೆ ಊರಿಗೆ ಹೋಗಿ ಬರುವುದಾಗಿ ಹೇಳಿ ಕಾರ್ಕಳದ ಜೋಡುಕಟ್ಟೆಗೆ ಬಂದಿದ್ದ. ಇದೇ ಸಂದರ್ಭದಲ್ಲಿ ಆತನಿಗೆ ಮದುವೆ ಮಾಡುವ ವಿಚಾರದಲ್ಲಿ ಮನೆಯವರು ಹುಡುಗಿಯ ಹುಡುಕಾಟದಲ್ಲಿದ್ದರೂ ಆತ ಈ ಮೊದಲು ಮದುವೆಯಾದ ವಿಚಾರ ತಿಳಿಸದೇ ಎರಡನೇ ಮದುವೆಗೆ ಒಪ್ಪಿದ ಪರಿಣಾಮ ಕಾಪುವಿನ ಯುವತಿಯನ್ನು 2014ರ ಡಿಸೆಂಬರ್‍ನಲ್ಲಿ ಮದುವೆಯಾಗಿದ್ದ. ಮದುವೆಯ ಬಳಿಕ ಈತನ ವೀಸಾದ ಅವಧಿ ಮುಗಿದ ಹಿನ್ನಲೆಯಲ್ಲಿ ಆತ ಕುವೈಟಿಗೆ ಹೋಗದೇ ಊರಿನಲ್ಲೇ ವಾಸ್ತವ್ಯ ಹೂಡಿದ್ದ. ಇತ್ತ ಆತನ ಮೊದಲ ಪತ್ನಿ ಶ್ರೀಲಂಕಾದ ಕೆ.ಆರ್.ಆಫೀಯಾ ಗಂಡ ಯುಸೂಫ್ ಬರುವಿಕೆಗಾಗಿ ಕಾದುಕಾದು ಸುಸ್ತಾಗಿದ್ದಳು. ತೈಲ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆತನ ಸ್ನೇಹಿತರಲ್ಲಿ ಈ ಕುರಿತು ವಿಚಾರಿಸಿದಾಗ ಆತನಿಗೆ ಊರಿನಲ್ಲಿ ಮದುವೆಯಾಗಿದೆ ಎಂದಾಗ ಈಕೆ ದಂಗಾಗಿ ಹೋಗಿದ್ದಳು. ವಿಷಯ ತಿಳಿದು ಕಳೆದ 2015 ಡಿಸೆಂಬರ್‍ನಲ್ಲಿ ಆಫೀಯಾ ಒಬ್ಬಂಟಿಯಾಗಿ ಕುವೈಟಿನಿಂದ ನೇರವಾಗಿ ಯುಸೂಫ್‍ನನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾಳೆ. ಬಳಿಕ ಧಾರ್ಮಿಕ ಮುಖಂಡರೊಂದಿಗೆ ನ್ಯಾಯ ಒದಗಿಸುವಂತೆ ಕೋರಿದ್ದಳು. ಆದರೆ ಯುಸೂಫ್‍ನ ಎರಡನೇ ಪತ್ನಿ ಮೊದಲ ಪತ್ನಿ ಆಫೀಯಾಳನ್ನು ಗಂಡನ ಜತೆ ವಾಸಿಸಲು ವಿರೋಧಿಸಿದ ಹಿನ್ನಲೆಯಲ್ಲಿ ಆಫೀಯಾ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಮೊರೆಹೋಗಿದ್ದಾಳೆ.

ಆಫೀಯಾಳ ಜತೆ ಸಂಸಾರ ಮಾಡುವೆ: ಯುಸೂಫ್ : ಆಫೀಯಾ ನೀಡಿರುವ ದೂರಿನಂತೆ ಕಾರ್ಕಳ ಎಎಸ್‍ಪಿ ಡಾ .ಸುಮನಾ ಅವರು ಯುಸೂಫ್‍ನನ್ನು ಕರೆಯಿಸಿ ಆಫೀಯಾ ಸಮ್ಮುಖದಲ್ಲಿ ಆತನಿಂದ ಹೇಳಿಕೆ ಬರೆಯಿಸಿದ್ದು, ಅದರಂತೆ ಆತ ಫೆಬ್ರವರಿಯಲ್ಲಿ ಮತ್ತೆ ಕುವೈಟಿಗೆ ಹೋಗಿ ನೌಕರಿ ಮಾಡಿ ಬಂದ ಹಣದಲ್ಲಿ ಇಬ್ಬರೂ ಜತೆಯಾಗಿ ಸಂಸಾರ ಮಾಡುವುದಾಗಿ ಹೇಳಿಕೆ ನೀಡಿದ್ದಾನೆ.

ಹೇಳಿಕೆಯ ಬಳಿಕ ಉಲ್ಟಾ ಹೊಡೆದ ಯುಸೂಫ್: ಆಫೀಯಾ ನೀಡಿದ ದೂರಿನ ಬಳಿಕ ಯುಸೂಫ್ ತಾನು ಆಫೀಯಾಳನ್ನು ನೋಡಿಕೊಳ್ಳುವುದಾಗಿ ಎಎಸ್ಪಿ ಸಮ್ಮುಖದಲ್ಲಿ ಹೇಳಿ ನೀಡಿದ ಬಳಿಕ ತನ್ನ ಎರಡನೇ ಪತ್ನಿ ಒತ್ತಡದಿಂದ ಯುಸೂಫ್ ಇದೀಗ ಮತ್ತೆ ಉಲ್ಟಾ ಹೊಡೆದಿರುವ ಹಿನ್ನಲೆಯಲ್ಲಿ ಆಫೀಯಾ ಕಂಗಾಲಾಗಿದ್ದು, ತನಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಮತ್ತೆ ಮನವಿ ಮಾಡಿದ್ದಾಳೆ.

ಈ ಪ್ರಕರಣದ ಕುರಿತು ಕಾರ್ಕಳ ಎಎಸ್ಪಿ ಡಾ.ಸುಮನಾ ಮಾತನಾಡಿ, ಆಫೀಯಾಳನ್ನು ಪತ್ನಿಯಾಗಿ ಸ್ವೀಕರಿಸಲು ಯುಸೂಫ್ ಒಪ್ಪಿದ ಬಳಿಕ ಮತ್ತೆ ತಕರಾರು ಎತ್ತಿದ್ದು, ಈ ಕುರಿತು ತಾನು ಎರಡನೇ ಪತ್ನಿಯ ಹೇಳಿಕೆ ಪಡೆದ ಬಳಿಕ ಇಬ್ಬರನ್ನು ಕರೆಯಿಸಿ ವಿಚಾರಿಸಿ ಕಾನೂನಿನ ಪ್ರಕಾರ ಈ ಪ್ರಕರಣದಲ್ಲಿ ಆಫೀಯಾಳಿಗೆ ನ್ಯಾಯ ಒದಗಿಸುವುದಾಗಿ ಹೇಳಿದ್ದಾರೆ.
ಗಂಡನನ್ನು ಪಡೆಯುವ ಸಲುವಾಗಿ ಕುವೈಟಿನಿಂದ ಭಾರತಕ್ಕೆ ಏಕಾಂಗಿಯಾಗಿ ಬಂದಿರುವ ಆಫೀಯಾ ಸಧ್ಯ ಯುಸೂಫ್‍ನ ಸಂಬಂಧಿಕರ ಮನೆಯಲ್ಲಿದ್ದು, ನ್ಯಾಯ ಸಿಗುವವರೆಗೂ ಭಾರತ ಬಿಟ್ಟು ಹೋಗಲಾರೆ ಎಂದು ಪಟ್ಟು ಹಿಡಿದಿದ್ದಾಳೆ.

ಒಟ್ಟಿನಲ್ಲಿ ಗಂಡ ಮಾಡಿರುವ ಎಡವಟ್ಟಿನಲ್ಲಿ ಪತ್ನಿ ತನ್ನ ಗಂಡನನ್ನು ಪಡೆಯಲು ಹೆತ್ತವರನ್ನು, ಉದ್ಯೋಗವನ್ನು ಬಿಟ್ಟು ದೇಶ ಬಿಟ್ಟು ಭಾರತಕ್ಕೆ ಬರುವಂತಾಗಿರುವುದು ವಿಪರ್ಯಾಸ.


Spread the love