ಕುಂದಾಪುರ ನೆಹರೂ ಮೈದಾನದಲ್ಲಿ ಪಟಾಕಿ ಅಂಗಡಿ ತ್ಯಾಜ್ಯ ವಿಲೇವಾರಿ ವಿಳಂಬ: ಸ್ಥಳೀಯರ ಆಕ್ರೋಶ
ಕುಂದಾಪುರ: ದೀಪಾವಳಿ ಹಾಗೂ ತುಳಸಿ ಹಬ್ಬದ ಸಂಭ್ರಮಕ್ಕಾಗಿ ನೆಹರೂ ಮೈದಾನದಲ್ಲಿ ಹಾಕಿರುವ ಪಟಾಕಿ ಅಂಗಡಿಗಳಿಂದ ರಾಶಿ ಬಿದ್ದಿರುವ ತ್ಯಾಜ್ಯಗಳು ವಿಲೇವಾರಿ ಆಗದಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟಾಕಿ ಮಾರಾಟಗಾರರು ತಾತ್ಕಾಲಿಕವಾಗಿ ನಿರ್ಮಿಸುವ ಪ್ರತಿ ಪಟಾಕಿ ಅಂಗಡಿಗಳ ಮಾರಾಟ ಪೂರ್ವದಲ್ಲಿ ಪರವಾನಿಗೆ ಹಾಗೂ ಅನುಮತಿ ಸಂದರ್ಭದಲ್ಲಿ ತಲಾ ₹3,000 ಶುಲ್ಕ ವಸೂಲು ಮಾಡುವ ಪುರಸಭೆ ಹಬ್ಬದ ಗೌಜು ಮುಗಿದು ಬಹುತೇಕ ಅಂಗಡಿಯವರು ಜಾಗ ತೆರವು ಮಾಡಿದ್ದರೂ, ಇಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳಿಗೆ ಇನ್ನೂ ಮುಕ್ತಿ ದೊರಕಿಲ್ಲ ಎನ್ನುವುದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಅವರ ಆಕ್ಷೇಪ.
ನಗರದ ಸೌಂದರ್ಯ ಹಾಗೂ ಶುಚಿತ್ವಕ್ಕೆ ಪುರಸಭಾ ವ್ಯಾಪ್ತಿಯ ಬಡ ಬೀದಿ ಬದಿಯ ವ್ಯಾಪಾರಿಗಳು ಕಾರಣರಾಗುತ್ತಾರೆ ಎಂದು ಬೊಟ್ಟು ಮಾಡುವ ಪುರಸಭೆಯ ಅಧಿಕಾರಿಗಳು ಹಾಗೂ ಆಡಳಿತಕ್ಕೆ ಕಣ್ಣೆದುರು ರಾಶಿ ಬಿದ್ದಿರುವ ಪ್ರಾಣಿ ಹಾಗೂ ಮನುಷ್ಯರ ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕ ಮಿಶ್ರಿತ ಪಟಾಕಿ ತ್ಯಾಜ್ಯ ಕಣ್ಣಿಗೆ ಬೀಳದೆ ಇರುವುದು ವಿಪರ್ಯಾಸ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ದಿನವೂ ನಗರ ಶುಚಿಯಾಗಿಡಬೇಕು ಎನ್ನುವ ನಿಲುವು ಮತ್ತು ಕಾನೂನು ಕೇವಲ ಸಾರ್ವಜನಿಕರಿಗೆ ಮಾತ್ರ ಅನ್ವಯಿಸುತ್ತದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.












