ಕೆಂಪು ಕಲ್ಲು, ಮರಳು ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಬೃಹತ್ ಮೆರವಣಿಗೆ , ಪ್ರತಿಭಟನಾ ಪ್ರದರ್ಶನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ)ಸಿಡಬ್ಲ್ಯುಎಫ್‌ಐ -ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಬೃಹತ್ ಮೆರವಣಿಗೆ ಮಂಗಳೂರಿನ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದ ತನಕ ನಡೆಯಿತು.
ಬಳಿಕ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿದ ಫೆಡರೇಶನ್ ರಾಜ್ಯ ಸಮಿತಿಯ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಅವರು ಲಕ್ಷಾಂತರ ಜನತೆಗೆ ಸಂಬಂಧಿಸಿ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ನಾಟಕ ಮಾಡುತ್ತಿರುವುದು ಖಂಡನೀಯ ಎಂದರು.
ಕಳೆದ ಮೂರುವರೆ ತಿಂಗಳಿನಿಂದ ಈ ಸಮಸ್ಯೆಯನ್ನು ಪರಿಹರಿಸದೆ ಇರುವುದು ಆಕ್ಷೇಪಾರ್ಹವಾಗಿದೆ. ಕೆಲಸ ಕಳೆದುಕೊಂಡು ತೊಂದರೆಗೊಳಗಾದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಒಂದು ಕಡೆಯಾದರೆ, ಮನೆ ಕಟ್ಟಲು ಸಾಧ್ಯವಾಗದೆ ಕಚ್ಚಾ ವಸ್ತುಗಳಿಗೆ ವಿಪರೀತ ಬೆಲೆ ತೆರಬೇಕಾದ ಜನಸಾಮಾನ್ಯರ ಪರಿಸ್ಥಿತಿ ಚಿಂತಾಜನಕವಾಗಿದೆ. ಆಳುವ ಪಕ್ಷದವರು ಸಮಸ್ಯೆ ಇತ್ಯರ್ಥವಾಗಿದೆ ಎಂದು ಡಂಗುರ ಸಾರುತ್ತಿದ್ದಾರೆ. ಇದರ ಲಾಭವನ್ನು ಅನಧಿಕೃತ ವ್ಯಕ್ತಿ ಸಂಸ್ಥೆಗಳು ಪಡೆಯುವಂತಾಗಿದೆ ಎಂದರು.
ಏರಿಕೆಯಾದ ಕೆಂಪು ಕಲ್ಲಿನ ದರ ಮತ್ತು ಮರಳಿನ ದರವನ್ನು ಜನಪರವಾಗಿ ನಿರ್ಧರಿಸಲು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಹತ್ತು ದಿನಗಳಾದರೂ ದಿವ್ಯ ಮೌನವೇ ಉತ್ತರವಾಗಿದೆ. ಸಾಮಾನ್ಯ ಜನರ ತಾಳ್ಮೆಗೂ ಮಿತಿ ಇರಲಿ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ತನಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಲಾ ಮಾಸಿಕವಾಗಿ ಹತ್ತು ಸಾವಿರ ರೂ.ನಂತೆ ಪರಿಹಾರ ಮೊತ್ತ ನೀಡಬೇಕೆಂದು ಒತ್ತಾಯಿಸಿದರು.
ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಚಂದ್ರಹಾಸ ಪಿಲಾರ್‌ರವರು ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಅನಗತ್ಯ ಕಿರುಕುಳ ನೀಡುವುದರ ಬದಲು ಎಲ್ಲಾ ನೋಂದಾಯಿತ ಕಾರ್ಮಿಕರಿಗೆ ನೀಡಬೇಕಾದ ಸವಲತ್ತನ್ನು ಸರಳವಾಗಿ ಮತ್ತು ನಿರಂತರವಾಗಿ ನೀಡುತ್ತಿರಬೇಕು. ಜಿಲ್ಲಾಡಳಿತದ ಕಾನೂನು ಕ್ರಮ ಕಟ್ಟುನಿಟ್ಟಿನ ನಿಯಮಗಳು ಅಭಿನಂದನಾರ್ಹವಾಗಿದ್ದರೂ ಕೆಂಪು ಕಲ್ಲು ಮತ್ತು ಮರಳು ಲಭ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾದರೆ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.