ಕೆಲಸಕ್ಕೆ ಬಾರದ ಬಿಜೆಪಿ ನಾಯಕರಿಂದ ಸಚಿವೆ ಹೆಬ್ಬಾಳ್ಕರ್ ಪಾಠ ಕಲಿಯಬೇಕಾಗಿಲ್ಲ – ದೀಪಕ್ ಕೋಟ್ಯಾನ್
ಉಡುಪಿ: ಇಡೀ ದೇಶಕ್ಕೆ ಮಾದರಿಯಾಗುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಏಕೈಕ ಕ್ರಿಯಾಶೀಲ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಬಡವರ ಮನೆಯನ್ನು ಬೆಳಗಿಸಿದನ್ನು ನೋಡಲು ಸಾಧ್ಯವಾಗದೆ ಹೊಟ್ಟೆ ಉರಿದುಕೊಳ್ಳೂತ್ತಿರುವ ಬಿಜೆಪಿಗರಿಗೆ ಬಡವರನ್ನು ಬಡವರಾಗಿಯೇ ಕಾಣುವ ಚಾಳಿ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ತಿರುಗೇಟು ನೀಡಿದ್ದಾರೆ.
ಸಂಸದರಾಗಿ ಎರಡು ಬಾರಿ ಉಡುಪಿ-ಚಿಕ್ಕಮಗಳೂರಿನಲ್ಲಿ ಅಧಿಕಾರ ಹೊಂದಿದ್ದ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲೆಗೆ ಮಾಡಿದ ಅಭಿವೃದ್ಧಿ ಏನು ಎನ್ನುವುದು ಸಂತೆಕಟ್ಟೆ, ಮಲ್ಪೆ, ಇಂದ್ರಾಳಿ ರಸ್ತೆಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಇನ್ನೂ ವರ್ಷಗಳೇ ಉರುಳಿದರೂ ಕೂಡ ಇಂದ್ರಾಳಿಯ ರೈಲ್ವೇ ಸೇತುವೆ ಕಾಮಗಾರಿ ಒಂದಿಂಚು ಆಗಿಲ್ಲ. ಸಂತೆಕಟ್ಟೆ ರಸ್ತೆಯಲ್ಲಿ ಒಮ್ಮೆ ಸಾಗಿದರೆ ಆಸ್ಪತ್ರೆ ಸೇರುವುದು ಗ್ಯಾರಂಟಿ ಎನ್ನುವುದು ಬಿಜೆಪಿಗರಿಗೆ ಕಾಣುತ್ತಿಲ್ಲವೇ? ಸಂಸದರಾಗಿದ್ದ ವೇಳೆ ಉಡುಪಿ ಜಿಲ್ಲೆಗೆ ಅಪರೂಪರಾಗಿದ್ದ ಅವರು ಯಡಿಯೂರಪ್ಪ ಅವರ ಹಿಂದೆ ಅಧಿಕಾರಕ್ಕಾಗಿ ಸುತ್ತಿದ್ದು ಬಿಟ್ಟರೆ ಯಾವುದೇ ಅಭಿವೃದ್ಧಿಾಪರ ಚಿಂತನೆ ನಡೆಸಿಲ್ಲ. ಅವರ ಎರಡು ಅವಧಿಯ ಸಂಸತ್ ಸದಸ್ಯರಾಗಿ ಏನೂ ಕೂಡ ಸಾಧನೆ ತೋರದೆ ಇದ್ದದ್ದು ಅವರದ್ದೇ ಪಕ್ಷದ ಸದಸ್ಯರು ಗೋ ಬ್ಯಾಕ್ ಎಂಬ ಹೇಳಿಕೆ ಕೊಟ್ಟ ಪರಿಣಾಮ ಹೇಳದೆ ಕೇಳದೆ ಉಡುಪಿ ಕ್ಷೇತ್ರ ಬಿಟ್ಟು ಬೆಂಗಳೂರಿಗೆ ಓಡಿಹೋಗಿದ್ದಾರೆ.
ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ತನ್ನ ಕ್ಷೇತ್ರದಷ್ಠೆ ಉಡುಪಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಗಮನ ಹರಿಸಿದ್ದು ಬಿಜೆಪಿಗರ ಕುರುಡು ಕಣ್ಣಿಗೆ ಕಾಣುತ್ತಿಲ್ಲ ಕಾರಣ ಬಿಜೆಪಿಗರಿಗೆ ಅಭಿವೃದ್ಧಿಯ ಬದಲು ಕಾಣುವುದು ಕೇವಲ ಧರ್ಮ ಹಾಗೂ ಹೆಣ ರಾಜಕಾರಣ. ಅದೇ ಹೆಣದ ಮೇಲೆ ರಾಜಕಾರಣ ಮಾಡಿ ಉಡುಪಿ ಜಿಲ್ಲೆಯ ಶಾಂತಿ ನೆಮ್ಮದಿಯನ್ನು ಹಾಳು ಮಾಡಿದವರು ಶೋಭಾ ಕರಂದ್ಲಾಜೆ ಎನ್ನುವುದು ಜಿಲ್ಲೆಯ ಜನರಿಗೆ ಸ್ಪಷ್ಟವಾಗಿ ತಿಳಿದ ವಿಚಾರವಾಗಿದೆ. ಇಲ್ಲಿನ ಶಾಂತಿ ನೆಮ್ಮದಿಯನ್ನು ಕೆಡಿಸಿ ಈಗ ರಾಜ್ಯ ರಾಜಧಾನಿಯಲ್ಲಿ ಅದೇ ಕೆಲಸವನ್ನು ಅವರು ಮಾಡುತ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಇಲಾಖೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯ ಪಾಲಿಗೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಆಶಾಕಿರಣವಾಗಿದ್ದಾರೆ. ಗೃಹಲಕ್ಷ್ಮೀ ಹಣದ ಮೂಲಕ ಇಂದು ರಾಜ್ಯದ ಮಹಿಳೆಯರು ಸ್ವಾವಲಂಬಿ ಬದುಕು ಕಾಣುತ್ತಿದ್ದಾರೆ ಇದು ಬಿಜೆಪಿಗರ ಹೊಟ್ಟೆಗೆ ಬೆಂಕಿ ಇಟ್ಟಂತಾಗಿದೆ. ಬಿಜೆಪಿಗರು ಎಂದೂ ಕೂಡ ಬಡವರ ಉದ್ದಾರವನ್ನು ಸಹಿಸದವರಲ್ಲ ಬಡವರ ಮನೆಯ ಮಕ್ಕಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡು ರಾಜಕೀಯ ಮಾಡುವುದಷ್ಠೆ ಅವರ ಉದ್ದೇಶವಾಗಿದೆ. ಇಂತಹ ಕೆಲಸಕ್ಕೆ ಬಾರದ ಬಿಜೆಪಿ ನಾಯಕರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪಾಠ ಬೇಕಾಗಿಲ್ಲ. ಅವರೊಬ್ಬ ಜವಾಬ್ದಾರಿಯುತ ಸಚಿವೆ ಎನ್ನುವುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಜಿಲ್ಲೆಯ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವ ಅವರ ಕಾರ್ಯ ವೈಖರಿಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗಿಲ್ಲ. ಅವರಿಗೆ ಸಾಧ್ಯವಾದರೆ ಜಿಲ್ಲೆಯಲ್ಲಿ ಅವರದ್ದೇ ಬಿಜೆಪಿಯ 5 ಮಂದಿ ಶಾಸಕರಾಗಿದ್ದು ಯಾವುದೇ ರೀತಿಯ ಅಭಿವೃದ್ಧಿಯನ್ನು ಮಾಡದೆ ಕೇವಲ ಹೇಳಿಕೆಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದು ಅವರ ಕಿವಿ ಹಿಂಡುವ ಕೆಲಸ ಮಾಡಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
            
