ಕೇರಳಕ್ಕೆ ಅಕ್ರಮ ಜಾನುವಾರು ಸಾಗಾಟ ಪತ್ತೆ: 4 ಆರೋಪಿಗಳ ಬಂಧನ, 27 ಕೋಣಗಳ ರಕ್ಷಣೆ

Spread the love

ಕೇರಳಕ್ಕೆ ಅಕ್ರಮ ಜಾನುವಾರು ಸಾಗಾಟ ಪತ್ತೆ: 4 ಆರೋಪಿಗಳ ಬಂಧನ, 27 ಕೋಣಗಳ ರಕ್ಷಣೆ

ಮಂಗಳೂರು: ಕರ್ನಾಟಕ ರಾಜ್ಯದ ಹಾವೇರಿಯಿಂದ ಕೇರಳ ರಾಜ್ಯದ ತಲಿಪರಂಬು ಕಡೆಗೆ ಯಾವುದೇ ದಾಖಲೆಗಳಿಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸರು ಪತ್ತೆಹಚ್ಚಿ ನಾಲ್ವರು ಆರೋಪಿಗಳನ್ನು ಬಂಧಿಸಿ 27 ಕೋಣಗಳನ್ನು ರಕ್ಷಿಸಿದ್ದಾರೆ.

ದಿನಾಂಕ 16-05-2026 ರಂದು ಬೆಳಿಗ್ಗೆ 6.00 ಗಂಟೆಗೆ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗೆರಿ ಇಂಡಿಯಾನ ಹಾಲ್ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮಂಗಳೂರು ಹೈವೇ ಪೆಟ್ರೋಲ್ ಪೊಲೀಸರು ಹಾಗೂ ಮಾರ್ನಿಂಗ್ ಗಸ್ತು ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಪೊಲೀಸರು ಈಚರ್ ಲಾರಿಯಲ್ಲಿ ಸುಮಾರು 27 ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದರು.

ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಜಾನುವಾರುಗಳನ್ನು ರಕ್ಷಿಸಿ, ಅಕ್ರಮ ಸಾಗಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಾನುವಾರು ಸಾಗಾಟಕ್ಕೆ ಬಳಸಿದ ವಾಹನವನ್ನು ಸಹ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳನ್ನು: ಸಯ್ಯದ್ ಮೆಹಬೂಬ್ ಅಲಿ (28), ಅಶ್ರಯ ಬಡಾವಣೆ, ಬೊಮ್ಮನಕಟ್ಟೆ, ಶಿವಮೊಗ್ಗ, ಅರುಣ ಚಂದ್ರಪ್ಪ ಜಾವಳಿ (32), ನಿಟ್ಟೂರು ಅಡವಿ, ಹಿರೇಕೆರೂರು ತಾಲೂಕು, ಹಾವೇರಿ ಜಿಲ್ಲೆ, ಹಿರಿಯಣ್ಣ ಗೌಡ (46), ಮಾದೇವರಳ್ಳಿ ಗ್ರಾಮ, ಅರಸಿಕೇರೆ ತಾಲೂಕು, ಹಾಸನ ಜಿಲ್ಲೆ ಸುನೀಲ್ ಲಕ್ಷ್ಮಪ್ಪ ಜಾವಳ್ಳಿ (24), ನಿಟ್ಟೂರು ಅಡವಿ, ಹಿರೇಕೆರೂರು ತಾಲೂಕು, ಹಾವೇರಿ ಜಿಲ್ಲೆ ಎಂದು ಗುರುತಿಸಲಾಗಿದೆ.

ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 59/2026ರಂತೆ ಪ್ರಾಣಿ ಹಿಂಸಾ ತಡೆ ಕಾಯ್ದೆ 1960ರ ಕಲಂ 11(A), 11(D), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 6 ಹಾಗೂ 3(5) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ರಕ್ಷಿಸಲಾದ ಕೋಣಗಳನ್ನು ಗೋಶಾಲೆಯ ವಶಕ್ಕೆ ನೀಡಲಾಗಿದೆ.


Spread the love
Subscribe
Notify of

0 Comments
Inline Feedbacks
View all comments