ಕೊರಗ ಸಮುದಾಯ ಅಹೋರಾತ್ರಿ ಧರಣಿ ಸ್ಥಳಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ
ಉಡುಪಿ: ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂಭಾಗದಲ್ಲಿ ಕಳೆದ 6 ದಿನಗಳಿಂದ ಕೊರಗ ಸಮುದಾಯದ ಯುವ ಜನರಿಗೆ ಸರಕಾರಿ ಉದ್ಯೋಗ ನೇರ ನೇಮಕಾತಿ ಒತ್ತಾಯಿಸಿ ಕೊರಗ ಸಮುದಾಯದ ವತಿಯಿಂದ ನಡೆಯುತ್ತಿರುವ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಮನವಿ ಸ್ವೀಕರಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಜಿಲ್ಲೆಯ ಮೂಲ ನಿವಾಸಿಗಳಾಗಿ ಗುರುತಿಸಿ ಕೊಂಡಿರುವ ಕೊರಗ ಸಮುದಾಯ ಅತ್ಯಂತ ಅತೀ ಹಿಂದುಳಿದ ಸಮಾಜವಾಗಿದ್ದು, ಸಮಾಜದ ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ ಕೊರಗ ಸಮುದಾಯದ ಯುವ ಜನತೆ ಶಿಕ್ಷಣದ ಮೂಲಕ ಉತ್ತಮ ಸಾಧನೆ ಮಾಡಿದ್ದು ಪ್ರತಿಭಾವಂತ ಯುವ ಜನತೆಗೆ ಸರಕಾರಿ ಉದ್ಯೋಗ ನೇರ ನೇಮಕಾತಿ ಮಾಡಲು ರಾಜ್ಯ ಸರಕಾರ ಮುಂದಾಗ ಬೇಕಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇಲಾಖೆಯ ಸಚಿವರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಅಧ್ಯಕ್ಷರಾದ ಸುಶೀಲ ನಾಡ, ಮುಖಂಡರಾದ ಶೇಖರ ಕೆಂಜೂರು, ಕುಮಾರ ಕೆಂಜೂರು, ಪುತ್ರನ್ ಹೆಬ್ರಿ, ಪುನಿತ್ ಕಾರ್ಕಳ, ರೇಖಾ ಆತ್ರಾಡಿ, ತ್ರಿವೇಣಿ ಕಟಪಾಡಿ, ಪ್ರಜ್ಞಾ ಶಂಕರ ನಾರಾಯಣ, ಶೀನಾ ಬೆಳ್ಮಣ್ ಮೊದಲಾದವರು ಉಪಸ್ಥಿತರಿದ್ದರು.












