ಕೊರೋನಾ ಆತಂಕದ ನಡುವೆ ಕುಂದಾಪುರದಲ್ಲಿ ನಿರಾತಂಕವಾಗಿ ನಡೆದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ

Spread the love

ಕೊರೋನಾ ಆತಂಕದ ನಡುವೆ ಕುಂದಾಪುರದಲ್ಲಿ ನಿರಾತಂಕವಾಗಿ ನಡೆದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ

ಕುಂದಾಪುರ: ಕೊರೋನಾ ಸೋಂಕಿನಿಂದಾಗಿ ಮುಂದೂಲ್ಪಟ್ಟಿದ್ದ ದ್ವಿತೀಯ ಪಿಯುಸಿಯ ಆಂಗ್ಲಭಾಷೆ ಪರೀಕ್ಷೆ ಇಂದು ರಾಜ್ಯಾದಾದ್ಯಂತ ಕೋವಿಡ್-19 ಆತಂಕದ ನಡುವೆಯೂ ನಡೆದಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾರ್ಚ್ 23 ರಂದು ನಡೆಯಬೇಕಿದ್ದ ಕೊನೆಯ ಪರೀಕ್ಷೆ ಲಾಕ್ಡೌನ್ ಕಾರಣದಿಂದಾಗಿ ಮುಂದೂಲ್ಪಟ್ಟಿತ್ತು. ಇದೀಗ ಎರಡು ತಿಂಗಳುಗಳ ಬಳಿಕ ಕೋವಿಡ್ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಲಾಗಿದೆ. ಕುಂದಾಪುರ ನಗರದಲ್ಲಿ ಭಂಡಾರ್ಕಾರ್ಸ್ ಕಾಲೇಜು, ಆರ್.ಎನ್ ಶೆಟ್ಟಿ ಕಾಲೇಜು, ಬೋರ್ಡ್ ಹೈಸ್ಕೂಲು ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಸಿದ್ದತೆಗೊಳಿಸಿದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಬೆಳಿಗ್ಗೆ 8.30ರಿಂದಲೇ ಪರೀಕ್ಷಾ ಕೇಂದ್ರಗಳಿಗೆ ಸರ್ಕಾರಿ ಬಸ್ ಹಾಗೂ ಪೋಷಕರ ಜೊತೆ ಖಾಸಗಿ ವಾಹನಗಳಲ್ಲಿ ಬಂದಿಳಿದ ವಿದ್ಯಾರ್ಥಿಗಳು ಮುಖಗವಸು ಧರಿಸಿ ಪರೀಕ್ಷಾ ಕೇಂದ್ರದ ಆವರಣ ಗೇಟ್ನಲ್ಲಿ ಥರ್ಮೋಮೀಟರ್ನಿಂದ ದೇಹದ ಉಷ್ಣಾಂಶ ಪರೀಕ್ಷಿಸಿದ ಬಳಿಕ ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದಾರೆ. ಪ್ರತೀ ಪರೀಕ್ಷಾಕೇಂದ್ರದ ಗೇಟ್ ಮುಂಭಾಗದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಕೋವಿಡ್-19 ನಿಯಮ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಎನ್ಎಸ್ಎಸ್ ಹಾಗೂ ಸ್ಕೌಟ್-ಗೈಡ್ಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಪರೀಕ್ಷಾರ್ಥಿಗಳಿಗೆ ಏನೂ ತೊಂದರೆಯಾಗದಂತೆ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಏನೂ ಗೊಂದಲವಾಗದಂತೆ ದ್ವನಿವರ್ಧಕಗಳಲ್ಲೂ ವಿದ್ಯಾರ್ಥಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಕಂಟೈನ್ಮೆಂಟ್ ಝೋನ್ನಿಂದ ಬಂದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಎದುರಿಸಲು ಅವಕಾಶ ಮಾಡಿಕೊಡಲಾಗಿದ್ದು, ಜ್ವರ, ನೆಗಡಿ, ಇನ್ನಿತರ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನೂ ಕೂಡ ಪ್ರತ್ಯೇಕವಾದ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಮೂರು ಪರೀಕ್ಷಾ ಕೇಂದ್ರಗಳ ಕೊಠಡಿಗಳನ್ನು ಮೊದಲ ದಿನವೇ ಸ್ಯಾನಿಟೈಸ್ ಮಾಡಲಾಗಿದ್ದು, ತಾಲೂಕಿನಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲಿಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಕುಂದಾಪುರ ಸಹಾಯಕ ಆಯುಕ್ತ ರಾಜು.ಕೆ ಕುಂದಾಪುರದ ಬೋರ್ಡ್ ಹೈಸ್ಕೂಲು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಶಿಕ್ಷಕರೊಂದಿಗೆ ಮಾಹಿತಿ ಪಡೆದುಕೊಂಡರು.

ಇನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರದ ಪರೀಕ್ಷಾ ಕೇಂದ್ರಗಳಿಗೆ ಬರಲು ಯಾವುದೇ ಅನಾನುಕೂಲವಾಗದಂತೆ ಕುಂದಾಪುರ ಕೆಎಸ್ಆರ್ಟಿಸಿ ಡಿಪೋದಿಂದ ಒಟ್ಟು 45 ವಿಶೇಷ ಬಸ್ಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳೆಲ್ಲರೂ ಇದರ ಸಂಪೂರ್ಣ ಸಹಾಯ ಪಡೆದುಕೊಂಡಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ತಮ್ಮ ತಮ್ಮ ಪೋಷಕರ ವಾಹನಗಳಲ್ಲಿ ಬಂದಿದ್ದಾರೆ. ಪರೀಕ್ಷಾ ಕೇಂದ್ರದ ಆವರಣದ ಹೊರಗೆ ಪೋಷಕರು ಆತಂಕದಲ್ಲೇ ನಿಂತುಕೊಂಡಿರುವ ದೃಶ್ಯಗಳು ಕಂಡುಬಂದವು. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಪೋಷಕರಿಗೆ ಪೊಲೀಸರು ಸ್ಥಳದಿಂದ ತೆರಳುವಂತೆ ಸೂಚನೆ ನೀಡಿದ ಬಳಿಕ ಪೋಷಕರು ತಮ್ಮ ತಮ್ಮ ಮನೆಗಳಿಗೆ ವಾಪಾಸಾದರು.


Spread the love