ಕೊರೋನಾ ಕರಿನೆರಳು: ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಹೆಮ್ಮಾಡಿ ಸೇವಂತಿಗೆ ಬೆಳೆಗಾರರು!

Spread the love

ಕೊರೋನಾ ಕರಿನೆರಳು: ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಹೆಮ್ಮಾಡಿ ಸೇವಂತಿಗೆ ಬೆಳೆಗಾರರು!

  • ಸಾರ್ವಜನಿಕ, ಧಾರ್ಮಿಕ ಆಚರಣೆಗಳಿಗೆ ನಿಷೇಧ. ಕೋಲ, ಪಾಣಾರಾಟ, ಕೆಂಡ ಸೇವೆಗಳಲ್ಲಿ ದೈವದ ಮುಡಿಯಲ್ಲಿ ರಾರಾಜಿಸುವ ಹೆಮ್ಮಾಡಿ ಸೇವಂತಿಗೆ ಹೂವಿನ ಬೆಳೆಗೆ ನಿರಾಸಕ್ತಿ.

ಕುಂದಾಪುರ: ಪ್ರತೀ ವರ್ಷವೂ ಆಗಸ್ಟ್ ತಿಂಗಳ ಕೊನೆಯಲ್ಲಿ ಸಾಕಷ್ಟು ಹುರುಪಿನಿಂದಲೇ ಗದ್ದೆಗಿಳಿದು ಸೇವಂತಿಗೆ ಗಿಡ ನೆಡಲು ಮುಂದಾಗುತ್ತಿದ್ದ ಹೆಮ್ಮಾಡಿ ಸೇವಂತಿಗೆ ಬೆಳೆಗಾರರು ಈ ಬಾರಿ ಮಾತ್ರ ಸೇವಂತಿಗೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕ ಹಾಗೂ ಧಾರ್ಮಿಕ ಆಚರಣೆಗಳಿಗೆ ಸರ್ಕಾರ ನಿರ್ಬಂಧ ಹೇರಿದ ಹಿನ್ನೆಲೆ ಕಳೆದ ಬಾರಿ ಸೀಸನ್ನ ಕೊನೆಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ ಇಲ್ಲಿನ ಬೆಳೆಗಾರರು ಈ ಬಾರಿ ಸೇವಂತಿಗೆ ಕೃಷಿ ಮಾಡುವುದೊ ಬೇಡವೊ ಎಂಬ ಗೊಂದಲದಲ್ಲಿದ್ದು, ಸೇವಂತಿಗೆ ಬೆಳೆಗಾರರ ಸ್ಥಿತಿ ಸದ್ಯದ ಮಟ್ಟಿಗೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಸೇವಂತಿಗೆ ಬೆಳೆಗೆ ನಿರಾಸಕ್ತಿ:
ಹೆಮ್ಮಾಡಿಯ ಕಟ್ಟು, ಭಟ್ರಬೆಟ್ಟು, ಗುಡ್ಡಿಮನೆ ವಠಾರ, ದೇವಸ್ಥಾನ ವಠಾರ, ಹೊಸಕಳಿ, ಸುಳ್ಸೆ, ಹರೆಗೋಡು ಮೊದಲಾದೆಡೆಗಳಲ್ಲಿ ಎಕರೆಗಟ್ಟಲೆ ಬೆಳೆಯುವ ಹೆಮ್ಮಾಡಿ ಸೇವಂತಿಗೆ ಈ ಬಾರಿ ಮಾತ್ರ ಅಲ್ಲಲ್ಲಿ ಅಲ್ಪಸ್ವಲ್ಪ ಬೆಳೆಗೆ ಮುಂದಾಗಿದ್ದಾರೆ. ಬೆರಳೆಣಿಕಯ ಕೃಷಿಕರು ಪ್ರತೀ ವರ್ಷದಂತೆ ಬೆಳೆಗೆ ಮುಂದಾಗಿದ್ದು, ಇನ್ನೂ ಹಲವಾರು ಬೆಳೆಗಾರರು ಸರ್ಕಾರ ಕೆಂಡ, ಜಾತ್ರೆಗಳಿಗೆ ನಿಷೇಧ ಹೇರುವ ಭಯದಲ್ಲಿ ಅಲ್ಪಸ್ವಲ್ಪ ಬೆಳೆಗೆ ಮುಂದಾಗಿದ್ದಾರೆ. ಪ್ರತೀ ವರ್ಷ ಆಗಸ್ಟ್ ಕೊನೆಯಲ್ಲಿ ಹೆಮ್ಮಾಡಿ ಪರಿಸರದ ಗದ್ದೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು ಗಿಡಗಳನ್ನ ನೆಡುವ ಕಾಯಕದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಈ ಬಾರೀ ಮಾತ್ರ ಬೆರಳೆಣಿಕೆಯ ಕೃಷಿಕರು ಮಾತ್ರ ಗದ್ದೆಗಳಲ್ಲಿ ಸೇವಂತಿಗೆ ಗಿಡಗಳನ್ನು ನೆಡುವಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶಿಷ್ಟ, ವಿಭಿನ್ನ ಹೂವು ಹೆಮ್ಮಾಡಿಯ ಸೇವಂತಿಗೆ:
ಕೋಲ, ಪಾಣಾರಾಟ ಹೀಗೆಯೇ ಕರಾವಳಿ ಭಾಗದ ದೈವಗಳ ಮುಡಿಯಲ್ಲಿ ರಾರಾಜಿಸುವ ಬೇರೆಲ್ಲೂ ಕಂಡುಬರದ ಈ ವಿಶಿಷ್ಟ, ವಿಭಿನ್ನ ಶೈಲಿಯ ಸೇವಂತಿಗೆ ಹೆಮ್ಮಾಡಿಯಲ್ಲಿ ಮಾತ್ರ ಬೆಳೆಯುತ್ತಾರೆ. ಹೀಗಾಗಿಯೇ ಈ ಹೂವಿಗೆ ಸೇವಂತಿಗೆ ಹೂವೆಂದೆ ಹೆಸರು. ಆಗಸ್ಟ್ ಕೊನೆಯಲ್ಲಿ ಸೇವಂತಿಗೆ ಕೃಷಿಗೆ ಮುಂದಾಗುವ ಈ ಭಾಗದ ರೈತರು ನಾಲ್ಕು ತಿಂಗಳುಗಳ ಕಾಲ ಗಿಡವನ್ನು ಪೋಷಿಸಿಕೊಂಡು ಬರುತ್ತಾರೆ. ಜನವರಿ ಆರಂಭದಲ್ಲಿ ಹೂವು ಬಿಡಲಿದೆ. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರಿಗೆ ಪ್ರಿಯವಾಗಿರುವ ಈ ಹೂವು ಮೊದಲು ದಕ್ಷಿಣಾಭಿಮುಖವಾಗಿ ಬ್ರಹ್ಮಲಿಂಗನ ಕಡೆ ವಾಲುತ್ತದೆ ಎನ್ನುವುದು ರೈತರ ನಂಬಿಕೆ. ಹೀಗಾಗಿ ಮಕರ ಸಂಕ್ರಮಣ ದಿನದಂದು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವರಿಗೆ ಅರ್ಪಿಸಿದ ಬಳಿಕ ಹೆಮ್ಮಾಡಿ ಸೇವಂತಿಗೆ ಮಂಕರ್ಕಿಯಲ್ಲಿ ರಾಜ್ಯದ ದಶದಿಕ್ಕುಗಳಿಗೂ ತಿರುಗಿ ದೈವಗಳ ಮುಡಿಯಲ್ಲಿ ರಾರಾಜಿಸುತ್ತದೆ.

ಸೇವಂತಿಗೆ ಗಿಡಗಳ ಕೊರತೆ:
ಪ್ರತಿ ವರ್ಷ ಸೇವಂತಿಗೆ ಹೂವು ಬೆಳೆದು, ಹೂವಿನ ಕೊಯ್ಲು ಆದ ಬಳಿಕ ಗಿಡವನ್ನು ಹಾಗೆಯೇ ಗದ್ದೆಯಲ್ಲಿ ಉಳಿಸಿ, ಮುಂದಿನ ಬೆಳೆಗೆ ಅದರಲ್ಲಿಯೇ ಸಸಿಗಳನ್ನು ಪಡೆದುಕೊಳ್ಳಲಾಗುತ್ತದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹೂವು ಕಡಿಮೆಯಾದ ಬಳಿಕ ಗಿಡಗಳು ಕರಟಿ ಹೋಗುತ್ತದೆ. ಕರಟಿ ಹೋದ ಗಿಡಗಳನ್ನು ಗದ್ದೆಯಲ್ಲಿ ಹಾಗೆಯೇ ಬಿಡಲಾಗುತ್ತದೆ. ಇದು ಮಳೆಗಾಲದಲ್ಲಿ ಚಿಗುರಿದ ಬಳಿಕ ಅದನ್ನು ಕಟಾವು ಮಾಡಿ ಗಿಡಗಳನ್ನು ಪೋಷಿಸುತ್ತಾರೆ. ಆದರೆ ಈ ಬಾರಿ ಉತ್ತಮ ಮಳೆಯಾಗಿದ್ದರೂ, ಮಧ್ಯದಲ್ಲಿ ಮಳೆ ಒಮ್ಮೆ ಕೈಕೊಟ್ಟ ಕಾರಣ ಚಿಗುರಿದ ಗಿಡಗಳು ಕರಟಿ ಹೋಗಿವೆ. ಇದರಿಂದ ಈ ಬಾರಿಯ ಸೇವಂತಿಗೆ ಬೆಳೆಗೆ ಹೆಚ್ಚಿನವರಿಗೆ ಗಿಡಗಳ ಕೊರತೆ ಎದುರಾಗಿದೆ.

ಆಡುಭಾಷೆಯಲ್ಲಿ “ಹೆಮ್ಮಾಡಿ ಶ್ಯಾಮಂತಿ”
ಜನವರಿ ತಿಂಗಳಲ್ಲಿ ಹೆಮ್ಮಾಡಿಯ ಗದ್ದೆಗಳಲ್ಲಿ ಸೇವಂತಿಗೆ ಕೃಷಿ ಕಂಡು ಕಣ್ತುಂಬಿಕೊಳ್ಳುವುದೇ ಒಂದು ಆನಂದವಾದರೆ ಇವುಗಳನ್ನು ಪೋಣಿಸಿ ಹೂಮಾಲೆ ಮಾಡಿ ಹೂವಿಗೆ ಇನ್ನಷ್ಟು ಅಂದ ನೀಡುವ ಸ್ತ್ರೀಯರ ಕುಸುರಿ ಕೆಲಸ ಇನ್ನೂ ಅಪರೂಪದ್ದು. ಸ್ಥಳೀಯ ಆಡು ಭಾಷೆ ಕುಂದಾಪುರ ಕನ್ನಡದಲ್ಲಿ ಈ ಹೂವನ್ನು ‘ಹೆಮ್ಮಾಡಿ ಶ್ಯಾಮಂತಿ’ ಎಂದು ಕರೆಯುತ್ತಾರೆ.

ಕಳೆದ ವರ್ಷದ ಸೇವಂತಿಗೆ ಬೆಳೆ

ಸೇವಂತಿಗೆ ಬೆಳೆಯುವ ಹೆಚ್ಚಿನವರು ಈ ಬಾರಿ ಅಲ್ಪಸ್ವಲ್ಪ ಗಿಡಗಳನ್ನು ನೆಟ್ಟಿದ್ದಾರೆ. ಜ.3 ರ ಬಸ್ರೂರು ಹಬ್ಬದಿಂದ ಆರಂಭಗೊಂಡು, ಮಾರ್ಚ್ ಕೊನೆಯ ಅಸೋಡು ಹಬ್ಬದವರೆಗೂ ದಿನಕ್ಕೆರಡು ಜಾತ್ರೆ, ಕೆಂಡೋತ್ಸವಗಳಿಗೆ ಸೇವಂತಿಗೆ ಹೂವಿಗೆ ಬೇಡಿಕೆಯಿರುತ್ತದೆ. ಕಳೆದ ಬಾರಿ ಸೀಸನ್ನ ಕೊನೆಯಲ್ಲಿ ಲಾಕ್ಡೌನ್ ವಿಧಿಸಿದ್ದರಿಂದ ಕೆಲವರಿಗೆ ನಷ್ಟವಾಗಿದೆ ಎನ್ನುತ್ತಾರೆ ಹೆಮ್ಮಾಡಿಯ ಸೇವಂತಿಗೆ ಕೃಷಿಕ ಪ್ರಶಾಂತ ಭಂಡಾರಿ .

ಈ ಬಾರಿ ಹೆಚ್ಚಿನ ಬೆಳೆಗಾರರು ಇನ್ನೂ ಸೇವಂತಿಗೆ ಹೂವು ಬೆಳೆಯಲು ಮುಂದಾಗಿಲ್ಲ. ಕೊರೋನಾದಿಂದಾಗಿ ಈ ಬಾರಿಯೂ ಜಾತ್ರೆ ಇದೆಯೋ? ಇಲ್ಲವೋ ಎನ್ನುವ ಗೊಂದಲದಲ್ಲಿದ್ದೇವೆ. ಒಂದುವೇಳೆ ಹೂವು ಬೆಳೆದರೂ, ಕೊಯ್ಲು ಸಮಯದಲ್ಲಿ ಬೇಡಿಕೆಯಿಲ್ಲದಿದ್ದರೆ ಏನು ಮಾಡುವುದು. ಸರಕಾರ ಈ ಬಗೆಗಿನ ಗೊಂದಲವನ್ನು ನಿವಾರಿಸಿದರೆ ನಮಗೂ ಹೂವು ಬೆಳೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ಇನ್ನೋರ್ವ ಕೃಷಿಕರಾದ ರಮೇಶ್ ದೇವಾಡಿಗ .


Spread the love