ಕೊರೋನಾ: ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ – ಸಚಿವ ಕೋಟ  ಶ್ರೀನಿವಾಸ ಪೂಜಾರಿ

Spread the love

ಕೊರೋನಾ: ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ – ಸಚಿವ ಕೋಟ  ಶ್ರೀನಿವಾಸ ಪೂಜಾರಿ

ಮಂಗಳೂರು : ಕೊರೋನಾ ಸೋಂಕಿತರಿಗೆ ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಸೋಮವಾರ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಹಾಗೂ ಸಾಮಥ್ರ್ಯವನ್ನು ಪರಿಶೀಲಿಸಿ, ಬಳಿಕ ಮಾತನಾಡುತ್ತಾ, ಬಿಪಿಎಲ್, ಎಪಿಎಲ್ ಕುಟುಂಬಗಳು, ವಲಸೆ ಕಾರ್ಮಿಕರು, ರೇಶನ್ ಕಾರ್ಡ್ ಇಲ್ಲದವರು ಸೇರಿದಂತೆ ಎಲ್ಲರಿಗೂ ಜಿಲ್ಲೆಯ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೋಗಿಗಳು ಆಸ್ಪತ್ರೆಯಲ್ಲಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ಕೋರೋನಾ ಶಂಕಿತರಿಗೆ ಹಾಗೂ ದೃಢಪಟ್ಟವರಿಗೆ ಉಚಿತ ಚಿಕಿತ್ಸೆ ಮುಂದುವರಿಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನಾದಿಂದ ಗುಣಮುಖರಾದವರ ಸಂಖ್ಯೆ ಅಧಿಕವಾಗಿದ್ದು, ಪ್ರತೀದಿನ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಜನತೆಯ ಆರೋಗ್ಯ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದ್ದು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ಅಧಿಕ ಬಿಲ್: ಕೇಸು ದಾಖಲಿಸಲು ನಳಿನ್ ಸೂಚನೆ

ಜಿಲ್ಲೆಯ ಕೆಲವು ಆಸ್ಪತ್ರೆಗಳಲ್ಲಿ ಸರಕಾರ ನಿಗದಿಪಡಿಸಿದ ಚಿಕಿತ್ಸಾ ದರವನ್ನು ಮೀರಿ ಭಾರೀ ಮೊತ್ತದ ಬಿಲ್ಲನ್ನು ಕೋವಿಡ್ ರೋಗಿಗಳಿಗೆ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿದ್ದು, ಅಂತಹ ಆಸ್ಪತ್ರೆಗಳ ವಿರುದ್ಧ ಕೇಸು ದಾಖಲಿಸುವಂತೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಚಿಕಿತ್ಸೆಗೆ ಸರಕಾರ ನಿಗದಿಪಡಿಸಿದ ದರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ರೋಗಿಯ ತುರ್ತು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಇದ್ದಲ್ಲಿ, ಕೋವಿಡ್ ವರದಿಗೆ ಕಾಯದೆ, ಶಸ್ತ್ರಚಿಕಿತ್ಸೆ ಮಾಡುವಂತೆ ಸಂಸದರು ಸೂಚಿಸಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸರಕಾರಿ ದರದಲ್ಲಿ ದೊರಕುವ ಕೋವಿಡ್ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅಲ್ಲದೇ, ರೋಗಿಗಳ ಅಹವಾಲಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ತಿಳಿಸದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತ್ನಾಕರ್, ವೆನ್‍ಲಾಕ್ ಅಧೀಕ್ಷಕ ಡಾ. ಸದಾಶಿವ, ಕೆಎಂಸಿ ಆಸ್ಪತ್ರೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love