ಕೊರೋನಾ ಸಂದರ್ಭದಲ್ಲಿ ದೇಶವನ್ನು ಸ್ವಾವಲಂಬನೆಯ ದಾರಿಯಲ್ಲಿ ಮುನ್ನೆಡೆಸಿದ ಶ್ರೇಯಸ್ಸು ಮೋದಿಗೆ ಸಲ್ಲಬೇಕು – ಸಚಿವ ಕೋಟ

Spread the love

ಕೊರೋನಾ ಸಂದರ್ಭದಲ್ಲಿ ದೇಶವನ್ನು ಸ್ವಾವಲಂಬನೆಯ ದಾರಿಯಲ್ಲಿ ಮುನ್ನೆಡೆಸಿದ ಶ್ರೇಯಸ್ಸು ಮೋದಿಗೆ ಸಲ್ಲಬೇಕು – ಸಚಿವ ಕೋಟ

ಕುಂದಾಪುರ : ಕಾಶ್ಮೀರದಲ್ಲಿನ 370 ವಿಧಿಯನ್ನು ರದ್ದು ಮಾಡಿರುವುದು, ತ್ರಿವಳಿ ತಲಾಕ್ ರದ್ದು ಪಡಿಸಿರುವುದು, ಪೌರತ್ವ ತಿದ್ದುಪಡಿ ಕಾಯಿದೆಯ ವಿಧೇಯಕ ತಂದಿರುವುದು, ಅಯೋದ್ಯೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ರಾಮ ಮಂದಿರ ಜನ್ಮ ಭೂಮಿ ವಿವಾದ ಬಗೆಹರಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗಿರುವುದರಿಂದ ದೇಶದ ಸಾರ್ವಭೌಮತೆ ಹೆಚ್ಚಾಗಿ ಆರ್ಥಿಕ ಶಕ್ತಿ ವೃದ್ಧಿಯಾಗುವಂತೆ ಮಾಡಿದೆ ಎಂದು ರಾಜ್ಯ ಮುಜರಾಯಿ ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿಗೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ರಕ್ಷಣಾ ಇಲಾಖೆಗೆ ಶಕ್ತಿಯನ್ನು ತುಂಬಿರುವುದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರೈತರಿಗೆ ನೆರವು ನೀಡಿರುವುದು, ಆಯುಷ್ಮಾನ್ ಯೋಜನೆಯ ಮೂಲಕ ದೇಶವಾಸಿಗಳಲ್ಲಿ ಆರೋಗ್ಯ ಭರವಸೆ ಮೂಡಿಸಿರುವುದು ಮೋದಿ ಸರ್ಕಾರದ ಸಾಧನೆ ಎಂದು ಅವರು ನುಡಿದರು.

2 ನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಸರ್ಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿ ಮುಂದಡಿ ಇಡುತ್ತಿರುವ ಈ ಸಂದರ್ಭದಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಸಂದೇಶವನ್ನುಳ್ಳ ’ಆತ್ಮ ನಿರ್ಬರ ಭಾರತ’ ಎನ್ನುವ ಹೊತ್ತಿಗೆ ರೂಪದಲ್ಲಿ ದೇಶಾದ್ಯಾಂತ ಮನೆ ಮನೆಗೆ ತಲುಪಿಸುವ ಕಾರ್ಯ ಪಕ್ಷದ ವತಿಯಿಂದ ನಡೆಯುತ್ತಿದೆ. ನಮ್ಮ ವರ್ತಮಾನ ಹಾಗೂ ಭವಿಷ್ಯವನ್ನು ದೇಶವಾಸಿಗಳು ನಿರ್ಧಾರ ಮಾಡಬೇಕು ಎನ್ನುವುದು ಪ್ರಧಾನಿಯವರ ಆಶಯ. ವಿಶ್ವವನ್ನೆ ಕೊರೊನಾ ಕಾಡಿದ ಸಂದರ್ಭದಲ್ಲಿ 20 ಲಕ್ಷ ರೂಪಾಯಿ ನೆರವಿನ ಯೋಜನೆಯನ್ನು ಘೋಷಣೆ ಮಾಡಿ ದೇಶವನ್ನು ಸ್ವಾವಲಂಭನೆಯ ದಾರಿಯಲ್ಲಿ ಮುನ್ನೆಡೆಸಿದ ಶ್ರೇಯಸ್ಸು ಮೋದಿಯವರಿಗೆ ಸಲ್ಲಬೇಕು ಎಂದು ಕೋಟ ಹೇಳಿದರು.

ಕೇಂದ್ರ ಸರ್ಕಾರ ಮೀನುಗಾರಿಕೆಗಾಗಿ ತೆಗೆದಿರಿಸಿದ 20,000 ಕೋಟಿ ರೂಪಾಯಿಗಳಲ್ಲಿ ಕರ್ನಾಟಕಕ್ಕೆ 3 ರಿಂದ 4 ಸಾವಿರ ಕೋಟಿ ಅನುದಾನ ದೊರಕುವ ನಿರೀಕ್ಷೆ ಇದೆ. ಈ ಅನುದಾನವನ್ನು ಬಳಸಿಕೊಂಡು ರಾಜ್ಯದ ಕರಾವಳಿ ಕಡಲ ಹಾಗೂ ಒಳನಾಡು ಭಾಗಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸಲಾಗುವುದು. ಮೀನುಗಾರಿಕೆ ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ನೀಡುವ ಸಾಲವನ್ನು ರಾಜ್ಯದ 30 ಜಿಲ್ಲೆಗಳಲ್ಲಿ ಪ್ರಚರ ಪಡಿಸುವ ಬಗ್ಗೆ ಹಾಗೂ ಪ್ರತಿ ಮೀನುಗಾರ ಕುಟುಂಬಕ್ಕೂ ಕಿಸಾನ್ ಕಾರ್ಡ್ ತಲುಪಿಸುವ ಕುರಿತು ಕಾರ್ಯಕ್ರಮ ರೂಪಿಸಲಾಗುವುದು. ಕೆ1 ರಿಂದ ಕೆ2 ಗೆ ಖಜಾನೆ ವರ್ಗಾವಣೆಯಾಗುವಾಗ ತಾಂತ್ರಿಕ ಸಮಸ್ಯೆಯಿಂದ ಪಿಂಚಣಿದಾರರಿಗೆ ಸಮಸ್ಯೆಯಾಗಿರುವ ಕುರಿತು ಅರಿವಿದೆ, ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಎಪಿಎಂಸಿ ಸದಸ್ಯ ಸುಧೀರ್ಕೆ.ಎಸ್, ಪುರಸಭಾ ಸದಸ್ಯರಾದ ಕೆ.ಮೋಹನ್ದಾಸ್ಶೆಣೈ, ಗಿರೀಶ್ ಕುಂದಾಪುರ, ಸಂದೀಪ್ ಖಾರ್ವಿ, ಸಂತೋಷ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಮಂಡಲ ಕಾರ್ಯದರ್ಶಿ ಅರುಣ್ ಬಾಣಾ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಪುರಸಭಾ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮುಖಂಡ ಕಿಶೋರ್ ಕುಮಾರ್, ಗುಣರತ್ನ ಪಿ, ಸದಾನಂದ ಬಳ್ಕೂರು, ಕಿದಿಯೂರು ಸತೀಶ್ ಶೆಟ್ಟಿ ಇದ್ದರು.


Spread the love