ಕೋಡಿಂಬಾಳ ದಂಪತಿ ಕೊಲೆ-ದರೋಡೆ ಪ್ರಕರಣ: ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ, ದಂಡ

Spread the love

*ಕೋಡಿಂಬಾಳ ದಂಪತಿ ಕೊಲೆ-ದರೋಡೆ ಪ್ರಕರಣ: ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ, ದಂಡ*

ಪುತ್ತೂರು, ಫೆ.25: ನಾಲ್ಕುವರೆ ವರ್ಷದ ಹಿಂದೆ ಪುತ್ತೂರು ತಾಲೂಕಿನ ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಉಂಡಿಲ ಎಂಬಲ್ಲಿ ದಂಪತಿಯನ್ನು ಬರ್ಬರವಾಗಿ ಕೊಲೆಗೈದು ನಗ ನಗದು ದೋಚಿದ ಅಪರಾಧಿಗಳಿಬ್ಬರಿಗೆ ಶನಿವಾರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ರೂ.3 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ದಂಪತಿಯ ಕೊಲೆ ಮಾಡಿದ ಅಪರಾಧಕ್ಕಾಗಿ ಅಜೀವಾವಧಿ ಕಾರಾಗೃಹ ಶಿಕ್ಷೆಯ ಜೊತೆಗೆ ತಲಾ ರೂ.3ಸಾವಿರ ದಂಡ, ದಂಡ ತೆರಳು ತಪ್ಪಿದಲ್ಲಿ ತಲಾ 3 ತಿಂಗಳ ಜೈಲು ಶಿಕ್ಷೆ, ಕೊಲೆ ಮಾಡುವ ಉದ್ದೇಶದಿಂದಲೇ ಮನೆಗೆ ನುಗ್ಗಿದ ಅಪರಾಧಕ್ಕಾಗಿ 10 ವರ್ಷ ಕಠಿಣ ಶಿಕ್ಷೆ ಮತ್ತು ತಲಾ ರೂ.5ಸಾವಿರ ದಂಡ, ದಂಡ ತೆರಳು ತಪ್ಪಿದಲ್ಲಿ 5 ತಿಂಗಳ ಕಲಾಗೃಹ ಶಿಕ್ಷೆ, ನಗ-ನಗದು ದರೋಡೆ ಮಾಡಿರುವ ಅಪರಾಧಕ್ಕಾಗಿ 10 ವರ್ಷ ಕಠಿಣ ಶಿಕ್ಷೆ ಮತ್ತು ತಲಾ ರೂ.5 ಸಾವಿರ ದಂಡ, ದಂಡ ತೆರಳು ತಪ್ಪಿದಲ್ಲಿ ಮತ್ತೆ 5 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ. ರಾಮಚಂದ್ರ ಅವರು ಆದೇಶಿಸಿದ್ದಾರೆ.
 ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಉಂಡಿಲ ನಿವಾಸಿ ಬೇಬಿ ಥಾಮಸ್ (58) ಮತ್ತು ಅವರ ಪತ್ನಿ ಮೇರಿ ಥಾಮಸ್ (45) ಅವರನ್ನು ಕೊಲೆ ಮಾಡಿದ ಅಪರಾಧಿಗಳಾದ ಸೋಮವಾರ ಪೇಟೆ ತಾಲೂಕಿನ ಮಹಮ್ಮದ್ ರಫೀಕ್ ಅಲಿಯಾಸ್ ರಫೀಕ್ ಮತ್ತು ಬೆಳ್ತಂಗಡಿ ತಾಲೂಕಿನ ಉರುವಾಳು ಗ್ರಾಮದ ನುರಿಯಾಳು ನಿವಾಸಿ ಮಹಮ್ಮದ್ ಕಮಲುದ್ದೀನ್ ಯಾನೆ ಸೈದು ಶಿಕ್ಷೆಗೊಳಗಾದವರು.
ಅಪರಾಧಿಗಳು ಈಗಾಗಲೇ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಜೈಲಿನಲ್ಲಿದ್ದರೂ ಇಷ್ಟರ ತನಕದ ಈ ಜೈಲು ಶಿಕ್ಷೆಯನ್ನು ಮಾಫಿ ಮಾಡದ ನ್ಯಾಯಾಧೀಶರು ಇಂದಿನಿಂದಲೇ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
 ಪ್ರಕರಣದ ವಿಚಾರಣೆಯನ್ನು ಕಳೆದ ಬುಧವಾರ ಪೂರ್ಣಗೊಳಿಸಿದ್ದ ನ್ಯಾಯಾಲಯ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ತೀರ್ಮಾನಿಸಿ ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಿತ್ತು. ಅಲ್ಲದೆ ಶಿಕ್ಷೆಯ ಪ್ರಮಾಣ ಪ್ರಕಟಣೆಯನ್ನು ಫೆ.25ಕ್ಕೆ ಮುಂದೂಡಿತ್ತು.ಇದೀಗ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಉದಯಕುಮಾರ್ ಅವರು ವಾದಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 40 ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿತ್ತು. ಕೊಲೆಗಡುಕರು ದರೋಡೆಗೈದ ಚಿನ್ನದ ಪೆಂಡೆಂಟ್ ಸರ ಹಾಗೂ ಬೆಂಡೋಲೆಯನ್ನು ಸೋಮವಾರಪೇಟೆಯಲ್ಲಿ ಮಾರಾಟ ಮಾಡಿದ್ದು, ಚಿನ್ನಾಭರಣವನ್ನು ಖರೀದಿಸಿದ್ದ ಅಲ್ಲಿನ ಇಬ್ಬರು ನುಡಿದ ಸಾಕ್ಷ್ಯ, ದರೋಡೆ ಮಾಡಿದ ರೂ.90 ಸಾವಿರದ ಪೈಕಿ ರೂ.48,500ನ್ನು ಕೊಲೆಯ ಮರುದಿನವೇ 1ನೇ ಆರೋಪಿ ಪಡೆದುಕೊಂಡಿರುವುದು, 2ನೇ ಆರೋಪಿಯ ಬ್ಯಾಂಕ್ ಅಕೌಂಟಿಗೆ ಹಣ ಜಮೆ ಆಗಿರುವುದು ಆರೋಪಕ್ಕೆ ಪೂರಕ ಸಾಕ್ಷ್ಯಗಳಾಗಿತ್ತು. ಕೊಲೆ ಮಾಡಿದ ಕಾರಿನಲ್ಲಿ ಕಂಡು ಬಂದಿದ್ದ ಬೆರಳಚ್ಚಿಗೂ ಆರೋಪಿಗಳ ಬೆರಳಚ್ಚಿಗೂ ಹೋಲಿಕೆಯಾಗಿತ್ತು. ಈ ಎಲ್ಲವೂ ಅಪರಾಧ ಸಾಬೀತಾಗಲು ಕಾರಣವಾಗಿತ್ತು.
ಕೊಲೆ ಘಟನೆಯ ಹಿನ್ನೆಲೆ:
2012ರ ಸೆಷ್ಟೆಂಬರ್ 25 ರಂದು ರಾತ್ರಿ 12ರಿಂದ 12.45ರ ನಡುವೆ ಕೊಲೆಕಡುಕರು ಉಂಡಿಲದ ಬೇಬಿ ಥಾಮಸ್ ಅವರ ಮನೆ ಮುಂಭಾಗಕ್ಕೆ ಬಂದು, ನಾವು ಬಂದ ಬೈಕ್ ಹಾಳಾಗಿದ್ದು, ಇಲ್ಲಿಂದ ಒಂದೂವರೆ ಕಿ.ಮೀ.ದೂರದಲ್ಲಿರುವ ತನ್ನ ಪತ್ನಿಯ ಮನೆಗೆ ಹೋಗಬೇಕಾಗಿರುವುದಾಗಿ ಅಲ್ಲಿಗೆ ಕಾರಿನಲ್ಲಿ ಬಿಡುವಂತೆ ಬೇಬಿ ಥಾಮಸ್ ಅವರ ಬಳಿ ಕೇಳಿಕೊಂಡಿದ್ದರು.
ಆರೋಪಿಗಳು ಪರಿಚಯಸ್ಥರೇ ಆಗಿದ್ದ ಹಿನ್ನೆಲೆಯಲ್ಲಿ ಅವರ ಮಾತನ್ನು ನಂಬಿದ ಬೇಬಿ ಥಾಮಸ್ ಅವರು ತನ್ನ ಇಂಡಿಕಾ ಕಾರಿನಲ್ಲಿ ಅವರಿಬ್ಬರನ್ನು ಕರೆದುಕೊಂಡು ಹೋಗಿದ್ದರು. ಬೇಬಿ ಥೋಮಸ್ ಅವರು ಕಾರು ಚಲಾಯಿಸಿಕೊಂಡು ಬೊಳ್ಳೂರು ಕ್ರಾಸ್ ಸಮೀಪ ತಲುಪುತ್ತಿದ್ದಂತೆಯೇ ಆರೋಪಿಗಳು ಸೇರಿಕೊಂಡು ಅವರಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದರು.
ಬೇಬಿ ಥೋಮಸ್ ಅವರನ್ನು ಕಾರಿನಲ್ಲೇ ಕೊಲೆಗೈದು ಅವರ ಕುತ್ತಿಗೆಯಲ್ಲಿದ್ದ ರೂ. 90,800 ಮೌಲ್ಯದ ಚಿನ್ನದ ಸರವನ್ನು ಎಗರಿಸಿಕೊಂಡ ಆರೋಪಿಗಳು ಮೃತದೇಹವನ್ನು ಅದೇ ಕಾರಿನಲ್ಲಿರಿಸಿಕೊಂಡು ಮತ್ತೆ ಬೇಬಿ ಥಾಮಸ್ ಅವರ ಮನೆಯ ಬಳಿಗೆ ಬಂದು ಕಾರು ನಿಲ್ಲಿಸಿದ್ದರು.
ಬೇಬಿ ತೋಮಸ್ ಅವರೆಂದು ತಿಳಿದು ಅವರ ಪತ್ನಿ ಮೇರಿ ಥೋಮಸ್ ಅವರು ಮನೆಯ ಬಾಗಿಲು ತೆಗೆದೊಡನೆಯೇ ಮನೆಯೊಳಗೆ ಪ್ರವೇಶಿಸಿದ ಕೊಲೆಕಡುಕರು ಮೇರಿ ಥಾಮಸ್ ಅವರ ಕುತ್ತಿಗೆಗೆ ಇರಿದು ಕೊಲೆ ಮಾಡಿ ಅವರ ಕಿವಿಯಲ್ಲಿದ್ದ ಬೆಂಡೋಳೆ, ಮನೆಯ ಕಪಾಟಿನಲ್ಲಿದ್ದ ನಗದು ಹಣ ಮತ್ತು ಮೊಬೈಲ್ ಅನ್ನು ಎಗರಿಸಿಕೊಂಡು ಪರಾರಿಯಾಗಿದ್ದರು. ನಗ,ನಗದು ದರೋಡೆ ಮಾಡುವ ಉದ್ದೇಶದಿಂದಲೇ ಆರೋಪಿಗಳು ಈ ಕೃತ್ಯ ಎಸಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೆತ್ತಿಕೊಂಡಿದ್ದ ಕಡಬ ಠಾಣೆಯ ಪೊಲೀಸರು ಒಂದು ತಿಂಗಳ ಬಳಿಕ ಆರೋಪಿಗಳು ಕೊಲೆಯಾದ ಮನೆಯಿಂದ ಕದ್ದೊಯಿದ್ದ ಮೊಬೈಲ್ ಸಂಖ್ಯೆಯನ್ನು ಬೇಧಿಸಿ ಆರೋಪಿಗಳಿಬ್ಬರನ್ನು ಮಡಿಕೇರಿ ಸಮೀಪ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Spread the love