ಕೋಳಿ ಅಂಕದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಸಾದ್ ಕಾಂಚನ್ ಕ್ಷಮೆಯಾಚಿಸಲಿ

Spread the love

ಕೋಳಿ ಅಂಕದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಸಾದ್ ಕಾಂಚನ್ ಕ್ಷಮೆಯಾಚಿಸಲಿ

ಉಡುಪಿ: ತುಳುನಾಡಿನ ದೈವಾರಾಧನೆಯ ಭಾಗವಾದ ಕೋಳಿ ಅಂಕದ ಆಚರಣೆ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಅವಹೇಳನಕಾರಿ ಹೇಳಿಕೆಯಿಂದ ತುಳುನಾಡಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಬಗ್ಗೆ ಬಹಿರಂಗ ಕ್ಷಮೆ ಯಾಚನೆಗೆ ಉಡುಪಿ ಜಿಲ್ಲಾ ತುಳುನಾಡ ಧರ್ಮ ಜಾಗರಣ ವೇದಿಕೆ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಪ್ರಮುಖ್ ಉದಯ್ ಕುಮಾರ್ ಶೆಟ್ಟಿ ಕಳೆದ ಮಂಗಳವಾರ ಬ್ರಹ್ಮಾವರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಸ್ಥಳೀಯ ಶಾಸಕರನ್ನು ಟೀಕಿಸುವ ವೇಳೆ ಉಡುಪಿಯ ಶಾಸಕರು ತುಳುನಾಡಿನ ಧಾರ್ಮಿಕ ಆಚರಣೆಯ ಭಾಗವಾದ ಸಾಂಪ್ರದಾಯಿಕ ಕೋಳಿ ಅಂಕ ಆಚರಣೆಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುವ ಮೂಲಕ ಉಡುಪಿ ಶಾಸಕರು ಉಡುಪಿ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಪ್ರಸಾದ್ ಕಾಂಚನ್ ಈ ಹೇಳಿಕೆಯಿಂದ ತುಳುನಾಡಿನ ದೈವಾರಾಧನೆಯ ಚೌಕಟ್ಟಿನ ರಕ್ತಹಾರದ ಕಲ್ಪನೆಯಲ್ಲಿ ಅನಾಧಿಕಾಲದಿಂದಲೂ ನಡೆಸಿಕೊಂಡು ಬಂದಂತಹ ಕೋಳಿ ಅಂಕ ಒಂದು ಜೂಜು ಎಂಬಂತೆ ಬಿಂಬಿಸಿ ನಮ್ಮ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.

ತುಳುನಾಡಿನ ಧಾರ್ಮಿಕ ಕೇಂದ್ರಗಳಾದ ದೈವಸ್ಥಾನ, ಗರೋಡಿ, ದೇವಸ್ಥಾನಗಳಲ್ಲಿ ವಾರ್ಷಿಕ ಉತ್ಸವದ ಬಳಿಕ ದೈವಾರಾಧನೆಯ ಭಾಗವಾಗಿ ಕೋಳಿ ಅಂಕ ನಡೆದು ಕೊಂಡು ಬರುತ್ತಿದ್ದು, ಕೇವಲ ಕಳೆದ 2 ವರ್ಷಗಳಿಂದ ಪ್ರಾರಂಭ ಮಾಡಿದಲ್ಲ ಎಂಬುದನ್ನು ಪ್ರಸಾದ್ ಕಾಂಚನ್ ಮರೆತಿರುವಂತೆ ಕಾಣುತ್ತದೆ.

ಉಡುಪಿ ಶಾಸಕರು ಸ್ಥಳೀಯ ಪ್ರತಿನಿಧಿಯಾಗಿ ವಿವಿಧ ದೈವಸ್ಥಾನ, ಗರೋಡಿ, ದೇವಸ್ಥಾನಗಳ ಪ್ರಮುಖರು ತಮ್ಮ ಕೋಳಿ ಅಂಕ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದಾಗ ಓರ್ವ ಜವಾಬ್ದಾರಿಯುತ ಶಾಸಕರಾಗಿ ಕಾನೂನಾತ್ಮಕವಾಗಿ ಜೂಜು ರಹಿತವಾಗಿ ಕೋಳಿ ಅಂಕ ನಡೆಸಲು ಅವಕಾಶ ನೀಡುವಂತೆ ವಿಧಾನ ಸೌಧದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್, ಪುತ್ತೂರು ಕಾಂಗ್ರೆಸ್ ಶಾಸಕರಾದ ಅಶೋಕ್ ರೈ, ಕಾರ್ಕಳ ಶಾಸಕ ಸುನೀಲ್ ಕುಮಾರ ಹಾಗೂ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಪಕ್ಷಾತೀತವಾಗಿ ಸಹಮತ ಸೂಚಿಸಿದ್ದರೂ ಪ್ರಸಾದ್ ಕಾಂಚನ್ ಮಾತ್ರ ನಮ್ಮ ಈ ಸಾಂಪ್ರದಾಯಿಕ ಆಚರಣೆಯನ್ನು ಅವಮಾನಕಾರಿ ಎಂಬಂತೆ ಹೇಳುತ್ತಿರುವುದು ದುರ್ದೈವ.

ಇಂದಿಗೂ ಕರಾವಳಿ ಜಿಲ್ಲೆಯ ಬಗ್ಗೆ ಯಾವುದೇ ಮಾಧ್ಯಮ, ಸಾಕ್ಷ್ಯಚಿತ್ರಗಳು ಜಿಲ್ಲೆಯ ಕಂಬಳ, ಕೋಳಿ ಅಂಕ, ದೈವಾರಾಧನೆ, ನಾಗಾರಾಧನೆ, ಹುಲಿ ವೇಷವನ್ನು ಜಿಲ್ಲೆಯ ಸಾಂಸ್ಕೃತಿಕ ಸಂಕೇತವಾಗಿ ಪ್ರಚಾರ ಮಾಡುತ್ತಿದೆ. ಉಡುಪಿಯ ಜಿಲ್ಲಾಧಿಕಾರಿ ಸಂಕೀರ್ಣದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಇಂದಿಗೂ ಕೋಳಿ ಅಂಕದ ತೈಲ ಚಿತ್ರ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಇಂತಹ ಸಾಂಪ್ರದಾಯಿಕ ಮಹತ್ವ ಪಡೆದ ಕೋಳಿ ಅಂಕವನ್ನು ಜೂಜಿನ ರೀತಿಯಲ್ಲಿ ಬಿಂಬಿಸಿ ಪ್ರಸಾದ್ ಕಾಂಚನ್ ಅವಹೇಳನ ಮಾಡುವುದು ಎಷ್ಟು ಸರಿ.

ಜೂಜು ಎಲ್ಲಾ ಕ್ಷೇತ್ರದಲ್ಲಿಯೂ ಇದೆ ಚುನಾವಣೆ ಬಂದಾಗ ಅಭ್ಯರ್ಥಿಗಳ ಸೋಲು ಗೆಲುವು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್, ರಮ್ಮಿ ಸರ್ಕಲ್, ಮಟ್ಕಾ ಮೂಲಕ ಯುವ ಜನತೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ದಿನನಿತ್ಯ ವರದಿಯಾಗುತ್ತಿದೆ. ಇದಕ್ಕೆ ಇಲ್ಲದ ನಿಷೇಧ ಕೇವಲ ಕೋಳಿ ಅಂಕಕ್ಕೆ ಮಾತ್ರ ಯಾಕೆ ? ವ್ಯಕ್ತಿಗೆ ಶೀತವಾದರೆ ಔಷಧಿ ನೀಡಬೇಕೆ ಹೊರತು ಮೂಗನ್ನೇ ಕತ್ತರಿಸಲು ಹೋಗಬಾರದು.

ಪ್ರಸಾದ್ ಕಾಂಚನ್ ತಮ್ಮ ಹೇಳಿಕೆಯನ್ನು ಉದ್ದೇಶ ಪೂರ್ವಕವಾಗಿ ನೀಡಿದರೋ, ತುಳುನಾಡಿನ ಧಾರ್ಮಿಕ ಆಚರಣೆಯ ಬಗ್ಗೆ ಮಾಹಿತಿ ಕೊರತೆಯೋ, ರಾಜಕೀಯ ಅನುಭವದ ಕೊರತೆಯೇ, ಹಿಂದೂ ಧಾರ್ಮಿಕ ಭಾವನೆ ಧಕ್ಕೆ ತಂದು ಅಲ್ಪಸಂಖ್ಯಾತರ ಓಲೈಕೆಗಾಗಿ ಇಂತಹ ಮಾತುಗಳನ್ನು ಹೇಳುತ್ತಾರೋ ಗೊತ್ತಾಗುತ್ತಿಲ್ಲ.

ಪ್ರಸಾದ್ ಕಾಂಚನ್ ಈ ಅಪ್ರಬುದ್ಧ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷ  ಕೋಳಿ ಅಂಕದ ಆಚರಣೆಯ ಬಗ್ಗೆ ತಮ್ಮ ವಿರೋಧ ನಿಲುವನ್ನು ಸ್ಪಷ್ಟಪಡಿಸಲಿ.

ಪ್ರಸಾದ್ ಕಾಂಚನ್ ಈ ಅಪ್ರಬುದ್ಧ ಅವಹೇಳನಕಾರಿಯಿಂದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದ್ದು, ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆದು ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಇನ್ನಾದರೂ ತುಳುನಾಡಿನ ಧಾರ್ಮಿಕ ಆಚರಣೆಯ ಬಗ್ಗೆ ಹೇಳಿಕೆ ನೀಡುವಾಗ ಜಾಗೃತೆ ವಹಿಸಲಿ. ಇದೇ ಪ್ರವೃತ್ತಿ ಮುಂದುವರಿಸಿದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಧರ್ಮೇಂದ್ರ ಎಮ್ ಡಿ, ಅರುಣ್ ಕುಂದರ್, ಶರತ್ ಕೆಮ್ಮಣ್ಣು ಉಪಸ್ಥೀತರಿದ್ದರು.


Spread the love
Subscribe
Notify of

0 Comments
Inline Feedbacks
View all comments