ಕೋವಿಡ್ -19 ; ಉಡುಪಿ ಧರ್ಮಪ್ರಾಂತ್ಯದಲ್ಲಿ ಮಾ. 31ರ ವರೆಗೆ ಚರ್ಚ್ ಗಳಲ್ಲಿ ಬಲಿಪೂಜೆಗಳು ರದ್ದು

Spread the love

ಕೋವಿಡ್ -19 ; ಉಡುಪಿ ಧರ್ಮಪ್ರಾಂತ್ಯದಲ್ಲಿ ಮಾ. 31ರ ವರೆಗೆ ಚರ್ಚ್ ಗಳಲ್ಲಿ ಬಲಿಪೂಜೆಗಳು ರದ್ದು

ಉಡುಪಿ: ಕೊರೋನ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಉಡುಪಿ ಧರ್ಮಪ್ರಾಂತದ ಎಲ್ಲ ಚರ್ಚ್ಗಳಲ್ಲಿ ನಿಗದಿತ ಸಮಯದಲ್ಲಿ ನಡೆಯುವ ಎಲ್ಲ ಬಲಿಪೂಜೆಗಳನ್ನು ಮಾ.31ರವರೆಗೆ ರದ್ದುಗೊಳಿಸಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಆದೇಶ ನೀಡಿದ್ದಾರೆ.

ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕೊರೋನ ಸೋಂಕು ಉಡುಪಿಯಲ್ಲಿ ಭೀತಿ ಹುಟ್ಟಿಸಿದೆ. ಮುಂಜಾಗ್ರತಾ ಕ್ರಮವಾಗಿ ಧಾರ್ಮಿಕ ಕಾರ್ಯ ಕ್ರಮಗಳನ್ನು ರದ್ದುಪಡಿಸಲು ಜಿಲ್ಲಾಡಳಿತವು ಆದೇಶ ನೀಡಿದ್ದು, ಚರ್ಚ್ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿನ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸ ಲಾಗಿದೆ. ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಬಿಷಪ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ವೈರಸ್ ದಾಳಿಗೆ ಇಡೀ ವಿಶ್ವವೇ ತಲ್ಲಣಕ್ಕೆ ಒಳಗಾಗಿರುವುದು ನಮಗೆಲ್ಲ ತಿಳಿದಿದೆ. ಈ ಮಾರಣಾಂತಿಕ ವೈರಸ್‍ಗೆ ನಾವು ಬಲಿಯಾಗದಂತೆ ಹಾಗೂ ಪರೋಕ್ಷವಾಗಿ ನಾವು ಈ ವೈರಸ್ ಸೋಂಕನ್ನು ಇತರರಿಗೆ ಹರಡದಂತೆ ಜಾಗರೂಕತೆ ವಹಿಸಬೇಕು. ಮಾರ್ಚ್ 18 ರಂದು ಉಡುಪಿಯ ಜಿಲ್ಲಾಧಿಕಾರಿಗಳು ಈ ಸಂಬಂಧಿತ ನೀಡಿದ ಆದೇಶ ಸಂಖ್ಯೆ ಎಂಎಜಿ (2) ಆರ್: 51/2020-21:54506 ಗೆ ಪೂರಕವಾಗಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಈ ಸುತ್ತೋಲೆಯ ಮೂಲಕ ನೀಡಬಯಸುತ್ತೇವೆ:

1. ಕೊರೊನಾ ವೈರಸ್‍ಗೆ ಹಲವಾರು ಬಲಿಯಾಗಿ, ಲಕ್ಷಾಂತರ ಜನರು ಸೋಂಕಿತರಾಗಿರುವ ಈ ವಿಷಮ ಪರಿಸ್ಥಿತಿಯಲ್ಲಿ, ನಮ್ಮನ್ನು ಮನುಜಕುಲದ ಪ್ರತಿಯೊಬ್ಬರನ್ನು ಅಪಾಯದಿಂದ ರಕ್ಷಿಸುವ ಸರ್ವಶಕ್ತ ಭಗವಂತನಿಗೆ ಮೊರೆಯಿಡೋಣ. ಸರ್ವ ಜನರ ಒಳಿತಿಗಾಗಿ ಹಾಗೂ ಆರೋಗ್ಯಕ್ಕಾಗಿ ನಮ್ಮ ಪ್ರಾಮಾಣಿಕ ಪ್ರಾರ್ಥನೆಗಳು ಆತನಿಗೆ ಸಲ್ಲಲಿ. ಅಂತೆಯೇ, ಈ ವೈರಸ್ ದಾಳಿಗೆ ತುತ್ತಾಗಿರುವ ನಮ್ಮ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸೋಣ.

2. ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಚರ್ಚ್‍ಗಳಲ್ಲಿ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಚರ್ಚ್‍ನಲ್ಲಿ ನೆರವೇರುವ ಎಲ್ಲಾ ಬಲಿಪೂಜೆಗಳನ್ನು (ದಿನಂಪ್ರತಿ ಹಾಗೂ ಭಾನುವಾರ) ರದ್ಧುಪಡಿಸಲಾಗಿದೆ.

3. ಚರ್ಚ್‍ನಲ್ಲಿ ಆಯೋಜಿಸುವ ಪ್ರಾರ್ಥನಾ ಕೂಟಗಳು, ಕಾರ್ಯಾಗಾರಗಳು, ಶಿಲುಬೆಯ ಹಾದಿ, ಮೆರವಣಿಗೆಗಳು, ಬೇಸಿಗೆ ಶಿಬಿರಗಳು, ಇನ್ನಿತರ ಸಾಮೂಹಿಕ ಧಾರ್ಮಿಕ ಆಚರಣೆಗಳನ್ನು ರದ್ದುಪಡಿಸಲಾಗಿದೆ. ಕುಟುಂಬದಲ್ಲಿ ಸಾವು ಸಂಭವಿಸಿದಾಗ, ಅಂತಿಮ ಕ್ರಿಯೆಯ ಪ್ರಕ್ರಿಯೆಯನ್ನು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನಡೆಸಬೇಕು.

4. ನೆಗಡಿ, ಕೆಮ್ಮು, ಜ್ವರ, ಇನ್ನಿತರ ರೋಗದ ಲಕ್ಷಣಗಳು ಕಂಡುಬಂದಲ್ಲಿ, ಅಂಥವರು ಚರ್ಚ್‍ಗೆ ಅಥವಾ ಇನ್ನಿತರ ಸ್ಥಳಗಳಿಗೆ ಹೋಗದೆ ತಮ್ಮ ಮನೆಯ ಸುರಕ್ಷತೆಯಲ್ಲಿ ಉಳಿಯಬೇಕು.

5. ಆರೋಗ್ಯ ಮತ್ತು ಸುರಕ್ಷತೆಯ ನಿಟ್ಟಿನಲ್ಲಿ, ಚರ್ಚ್ ಹಾಲ್‍ಗಳು ಹಾಗೂ ಸಭಾಗೃಹಗಳನ್ನು ಯಾವುದೇ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ನೀಡಬಾರದು.

6. ವೈರಸ್ ಸೋಂಕಿನ ಈ ವಿಷಮ ಪರಿಸ್ಥಿತಿಯಲ್ಲಿ ಜನರು ತಮ್ಮ ಕುಟುಂಬಗಳಲ್ಲಿ ಜೊತೆಗೂಡಿ ಪ್ರಾರ್ಥನೆ, ಜಪಸರ, ಶಿಲುಬೆಯ ಹಾದಿ, ಇನ್ನಿತರ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಮಗ್ನರಾಗಬೇಕು. ಟಿವಿ ಹಾಗೂ ಅಂತರ್‍ಜಾಲದಲ್ಲಿ ದಿವ್ಯ ಪೂಜೆಯನ್ನು ವೀಕ್ಷಿಸುವುದು, ಧಾರ್ಮಿಕ ಸಾಹಿತ್ಯವನ್ನು ಓದುವುದರಲ್ಲಿ ತೊಡಗಬೇಕು.

7. ಚರ್ಚ್‍ನಲ್ಲಿ ಸಾಮೂಹಿಕ ಧಾರ್ಮಿಕ ಚಟುವಟಿಕೆಗಳಿಗೆ ನಿಷೇಧವಿದ್ದಾಗ್ಯೂ, ಚರ್ಚ್‍ಗಳು ಹಾಗೂ ಪ್ರಾರ್ಥನಾ ಮಂದಿರಗಳು ಜನರ ವೈಯಕ್ತಿಕ ಪ್ರಾರ್ಥನೆ ಹಾಗೂ ಖಾಸಗಿ ಧ್ಯಾನಕ್ಕಾಗಿ ತೆರೆದಿರುತ್ತವೆ.

8. ಸಾರ್ವಜನಿಕರು ವೈಯಕ್ತಿಕವಾಗಿ ಹಾಗೂ ಸಾಮುದಾಯಿಕವಾಗಿ ನಿರ್ಮಲತೆಗೆ ಹೆಚ್ಚು ಮಹತ್ವವನ್ನು ನೀಡಿ, ಸರ್ಕಾರ ಹಾಗೂ ಸ್ಥಳೀಯ ಆಡಳಿತವು ನೀಡಿದ ಎಲ್ಲ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.
ಈ ಮೇಲಿನ ಕ್ರಮಗಳು ಮಾರ್ಚ್ 31, 2020 ರವರೆಗೆ ಚಾಲ್ತಿಯಲ್ಲಿರುತ್ತವೆ.


Spread the love