ಕೋವಿಡ್ -19: ತೆಕ್ಕಟ್ಟೆ ಪ್ರಕರಣ ಸುಖಾಂತ್ಯ – ಎಲ್ಲಾ 18 ವ್ಯಕ್ತಿಗಳ ವರದಿ ನೆಗೆಟಿವ್

Spread the love

ಕೋವಿಡ್ -19: ತೆಕ್ಕಟ್ಟೆ ಪ್ರಕರಣ ಸುಖಾಂತ್ಯ – ಎಲ್ಲಾ 18 ವ್ಯಕ್ತಿಗಳ ವರದಿ ನೆಗೆಟಿವ್

ಉಡುಪಿ: ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದ ಮಂಡ್ಯದ ಕರೋನಾ ಪಾಸಿಟಿವ್ ವ್ಯಕ್ತಿಯ ಸಂಪರ್ಕಕ್ಕೆ ಬಂದ ತೆಕ್ಕಟ್ಟೆ ಹಾಗೂ ಸಾಸ್ತಾನದ ಎಲ್ಲಾ 18 ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು ತೆಕ್ಕಟ್ಟೆ ಪರಿಸದ ನಿವಾಸಿಗಳು ನಿಟ್ಟುಸಿರುಬಿಡುವಂತಾಗಿದೆ.

ಮಂಡ್ಯ ಮೂಲದ ವ್ಯಕ್ತಿ ಮುಂಬೈನಿಂದ ತೆಕ್ಕಟ್ಟೆ ಮಾರ್ಗವಾಗಿ ತೆರಳಿದ್ದು, ಇವರಿಗೆ ಮುಂಬೈನಲ್ಲಿ ಕರೋನಾ ಸೋಂಕು ತಗುಲಿತ್ತು. ಈ ವ್ಯಕ್ತಿ ಇದ್ದ ಖರ್ಜೂರದ ಲಾರಿ ತೆಕ್ಕಟ್ಟೆ ಪರಿಸರದಲ್ಲಿ ವಿಶ್ರಾಂತಿ ಪಡೆಯಲು ನಿಂತಿದ್ದು, ತೆಕ್ಕಟ್ಟೆ ಪೆಟ್ರೋಲ್ ಪಂಪ್ ಪರಿಸರದಲ್ಲಿ ಇವರು ಸ್ನಾನ ಮಾಡಿ ಉಪಹಾರ ಸ್ವೀಕರಿಸಿ ಹೋಗಿದ್ದರು. ಬಳಿಕ ಇಲ್ಲಿನ ಸಾಸ್ತಾನ ಟೋಲ್ ಗೇಟ್ ನಲ್ಲಿ ಕೆಲ ಹೊತ್ತು ನಿಂತು ತೆರಳಿದ್ದರು. ಇವರ ಸಂಪರ್ಕಕ್ಕೆ ಬಂದಿರುವ ಟೋಲ್ಗೇಟ್ ಮತ್ತು ಪೆಟ್ರೋಲ್ ಪಂಪ್ ಸಿಬ್ಬಂದಿಗಳನ್ನು ತಪಾಸಣೆ ಮಾಡಲಾಗಿತ್ತು ಶುಕ್ರವಾರ ಇವರೆಲ್ಲರ ಕರೋನಾ ಪರೀಕ್ಷಾ ವರದಿ ಕೈಸೇರಿದ್ದು, ಪರೀಕ್ಷೆ ಗೆ ಒಳಪಟ್ಟ18 ಜನರ ವರದಿಯು ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ತೆಕ್ಕಟ್ಟೆಯ ಘಟನೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಮನೆಮಾಡಿತ್ತು ಅಲ್ಲದೆ ಜಿಲ್ಲಾಡಳಿತ ಪೆಟ್ರೋಲ್ ಪಂಪ್ ನ್ನು ಸೀಲ್ ಡೌನ್ ಮಾಡಿತ್ತು ಅಲ್ಲದೆ ಪೆಟ್ರೋಲ್ ಪಂಪ್ ಮತ್ತು ಸಾಸ್ತಾನ ಟೋಲ್ ಗೇಟ್ ಪ್ರದೇಶಕ್ಕೆ ರಾಸಾಯನಿಕ ಸಿಂಪಡಣೆ ಮಾಡಿ ಸುರಕ್ಷತಾ ಕ್ರಮವನ್ನು ಕೈಗೊಂಡಿತ್ತು. ಈಗ ಎಲ್ಲಾ ವರದಿ ನೆಗೆಟಿವ್ ಬಂದ ಕಾರಣ ಉಡುಪಿ ಜಿಲ್ಲೆ ಹಾಗೂ ತೆಕ್ಕಟ್ಟೆ, ಸಾಸ್ತಾನ ಟೋಲ್ ಗೇಟ್ ಪರಿಸರ ಈಗ ಟೆನ್ಶನ್ ಫ್ರೀಯಾಗಿದೆ


Spread the love