ಕೋವಿಡ್ -19: ಸೆಕ್ಷನ್ 144(3) ಉಲ್ಲಂಘಿಸಿ ಸಂತೆ, ಜಾತ್ರೆ, ಯಕ್ಷಗಾನ ನಡೆಸಿದರೆ ಕ್ರಮ – ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ

Spread the love

ಕೋವಿಡ್ -19: ಸೆಕ್ಷನ್ 144(3) ಉಲ್ಲಂಘಿಸಿ ಸಂತೆ, ಜಾತ್ರೆ, ಯಕ್ಷಗಾನ ನಡೆಸಿದರೆ ಕ್ರಮ – ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ

ಉಡುಪಿ: ಕೊರೋನ ವೈರಸ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತಗಳ ಆದೇಶಗಳನ್ನು ಉಲ್ಲಂಘಿಸಿ ಸಂತೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಹರಕೆಯ ಆಟವಾಗಲಿ, ಯಕ್ಷಗಾನ ಬಯಲಾಟಗಳಾಗಲಿ ನಡೆಸಿದ್ದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾರ್ಚ್ 18ರಿಂದ ನಿ ಜಿಲ್ಲೆಯಾದ್ಯಂತ ಜಾರಿಗೊಳಿಸಿರುವ ಸಿಆರ್ಪಿಸಿ 144(3)ರನ್ವಯ ನಿಷೇಧಾಜ್ಞೆಯಿಂದ ಐದಕ್ಕಿಂತ ಹೆಚ್ಚು ಜನ ಸೇರುವ ಯಾವುದೇ ಸಮಾರಂಭ, ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇದು ಮುಂದಿನ ಆದೇಶ ಬರುವವರೆಗೂ ಜಾರಿಯಲ್ಲಿರುತ್ತದೆ ಎಂದರು.

ಹೀಗಾಗಿ ಜಿಲ್ಲೆಯಲ್ಲಿ ಇನ್ನು ಯಾವುದೇ ಸಂತೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಹರಕೆಯ ಆಟವಾಗಲಿ, ಯಕ್ಷಗಾನ ಬಯಲಾಟಗಳಾಗಲಿ ನಡೆಯುವಂತಿಲ್ಲ. ಇಂದೇ ರಾತ್ರಿ ಯಾರಾದರೂ ಯಕ್ಷಗಾನ ಆಟ ನಡೆಸಿರುವುದು ಗೊತ್ತಾದರೆ ನಾಳೆಯೇ ಅವರಿಗೆ ನೋಟೀಸು ಜಾರಿಗೊಳಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ದೇವಸ್ಥಾನ, ಮಠಗಳಲ್ಲೂ ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನಾಗಲೀ, ಉಪನ್ಯಾಸ ಕಾರ್ಯಕ್ರಮವನ್ನಾಗಲಿ ಏರ್ಪಡಿಸುವಂತಿಲ್ಲ. ಆದೇಶ ಉಲ್ಲಂಘಿಸಿ ಏನಾದರೂ ನಡೆದರೆ ಕ್ರಮ ಖಂಡಿತ. ಈ ಬಗ್ಗೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಸರಕಾರದ ಕಾಯ್ದೆ, ಕಾನೂನನ್ನು ಉಲ್ಲಂಘಿಸಲು, ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.

ಕರೊನಾ ಶಂಕಿತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ 10, ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 10 ಐಸೋಲೇಟೆಡ್ ವಾರ್ಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಅಜ್ಜರಕಾಡು ಜಿಲ್ಲಾ ಕೇಂದ್ರ ಗ್ರಂಥಾಲಯ ನೂತನ ಕಟ್ಟಡದಲ್ಲಿ 100 ಬೆಡ್ ವ್ಯವಸ್ಥೆ ಕಲ್ಪಿಸಲು ಎಸ್ಡಿಆರ್ಎಫ್ ಖಾತೆಯಿಂದ 30 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಾರಂಭದಲ್ಲಿ 30 ಐಸೋಲೇಟೆಡ್ ಬೆಡ್ಗಳ ವ್ಯವಸ್ಥೆ ಮಾಡಲಾಗುವುದು. ಜಿಲ್ಲಾಸ್ಪತ್ರೆ ಹಾಗೂ ಸರ್ಕಾರಿ ವೈದ್ಯರು ಇಲ್ಲಿ ಸೇವೆ ಸಲ್ಲಿಸಲಿದ್ದಾರೆ. ತುರ್ತು ಅವಶ್ಯಕತೆ ಇದ್ದರೆ ಖಾಸಗಿ ವೈದ್ಯರನ್ನೂ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.

ಪ್ರಸಕ್ತ ಶಿವಮೊಗ್ಗಕ್ಕೆ ಗಂಟಲಿನ ದ್ರವ ಪರೀಕ್ಷೆಗೆ ಕಳುಹಿಸಲಾಗುತ್ತಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲೇ ಸೌಲಭ್ಯ ಕಲ್ಪಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರೊಂದಿಗೂ ಸಭೆ ನಡೆಸಲಾಗಿದ್ದು, ಶಂಕಿತ ರೋಗಿಗಳು ದಾಖಲಾದರೆ ತಕ್ಷಣ ಡಿಎಚ್ಒ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ ಎಂದರು.

ವಿಮಾನ ನಿಲ್ದಾಣದಲ್ಲಿ ಪ್ರತೀ ಪ್ರಯಾಣಿಕರ ತಪಾಸಣೆ ನಡೆಯುತ್ತಿದ್ದು, ಎ, ಬಿ, ಸಿ ಮೂರು ವಿಭಾಗ ಮಾಡಿದ್ದಾರೆ. ಎ ಕೆಟಗರಿ ಪ್ರಯಾಣಿಕರನ್ನು ಮಂಗಳೂರು ಆಸ್ಪತ್ರೆಗೆ ಸೇರಿಸುತ್ತಾರೆೆ. ಬಿ ಕೆಟಗರಿಯವರನ್ನು ಉಡುಪಿಗೆ ಕಳುಹಿಸಿಕೊಡುತ್ತಾರೆ. ಸಿ ಕೆಟಗರಿಯವನ್ನು ಮನೆಯಲ್ಲಿ ಪ್ರತ್ಯೇಕ ವಾಸಿಸಲು ಸೂಚನೆ ನೀಡಲಾಗುತ್ತದೆ ಎಂದರು.

ಹೊರ ರಾಷ್ಟ್ರದಿಂದ ಉಡುಪಿ ಜಿಲ್ಲೆಗೆ 230 ಮಂದಿ ಆಗಮಿಸಿದ್ದಾರೆ. ಅವರ ವಿಳಾಸ, ಸಂಪರ್ಕ ಸಂಖ್ಯೆ ಎಲ್ಲವೂ ಆರೋಗ್ಯ ಇಲಾಖೆ ಬಳಿ ಇದೆ. ಪೊಲೀಸರ ಮೂಲಕ ಅವರ ಚಲನವಲನ ಬಗ್ಗೆ ನಿಗಾ ಇರಿಸಲಾಗಿದೆ. ಎಚ್ಚರಿಕೆ ಆದೇಶಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾಸರೋಡಿನಲ್ಲಿ ಕರೊನಾ ಪತ್ತೆಯಾದ ವ್ಯಕ್ತಿಜತೆಗೆ ಉಡುಪಿ ಜಿಲ್ಲೆಯ 13 ಮಂದಿ ಆಗಮಿಸಿದ್ದು, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ನೆಗೆಟಿವ್ ವರದಿ ಬಂದಿದೆ ಎಂದರು.

ಸರ್ಕಾರಿ ಕಚೇರಿಗಳಿಗೆ ತುರ್ತು ಕೆಲಸವಿದ್ದರೆ ಮಾತ್ರ ಭೇಟಿ ನೀಡಿ, ಇಲ್ಲದಿದ್ದರೆ ದೂರವಾಣಿ ಮೂಲಕ ಇಲಾಖೆಗಳನ್ನು ಸಂಪರ್ಕಿಸಬಹುದು. ಯಾವುದು ತುರ್ತು ಅಗತ್ಯ ಕಾರ್ಯ ಎಂಬುದನ್ನು ಆಯಾ ಇಲಾಖೆ ಮುಖ್ಯಸ್ಥರು ನಿರ್ಧಾರ ಮಾಡುತ್ತಾರೆ ಎಂದರು.

ಕೊರೋನ ವೈರಸ್ ಸಮಸ್ಯೆಯನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಸರ್ವೇಕ್ಷಣಾ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಇಓ, ಡಿಎಚ್‌ಓಗಳಿದ್ದು, ಸಮಿತಿ ತುರ್ತು ಸಭೆಗಳನ್ನು ನಡೆಸಿ ಈ ಕುರಿತು ಕೈಗೊಳ್ಳ ಬೇಕಾದ ಅಗತ್ಯ ಕ್ರಮಗಳ ಕುರಿತು ಪರಿಶೀಲಿಸುತ್ತದೆ ಎಂದರು.

ಕಂಟ್ರೋಲ್‌ರೂಮ್: ಜಿಲ್ಲೆಯ ಎಲ್ಲಿಂದಲೇ ಆಗಲಿ ಕೊರೋನ ಶಂಕಿತರನ್ನು ಕರೆತರಲು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವ ಅಂಬ್ಯುಲೆನ್ಸ್ ಒಂದನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ತುರ್ತು ಕರೆಗಳಿಗೆ ಸ್ಪಂಧಿಸಲು ಕಂಟ್ರೋಲ್ ರೂಮ್‌ನ್ನು ತೆರೆಯಲಾಗಿದ್ದು, ಅಗತ್ಯವುಳ್ಳವರು ದೂರವಾಣಿ ಸಂಖ್ಯೆ: 9663957222, 9663950222 ಹಾಗೂ ಆರೋಗ್ಯ ಸಹಾಯವಾಣಿ 104ಕ್ಕೂ ಕರೆ ಮಾಡಬಹುದಾಗಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಅಗತ್ಯವಿರುವ ಪ್ರಯೋಗಶಾಲಾ ಸಲಕರಣೆ ಗಳನ್ನು, ಮಾಸ್ಕ್, ಪಿಪಿಇ ಇತ್ಯಾದಿಗಳನ್ನು ದಾಸ್ತಾನು ಇರಿಸಲಾಗಿದೆ. ಕೊರೋನ ಸೋಂಕಿನ ಕುರಿತಂತೆ ಮಣಿಪಾಲ ಮಾಹೆಯ ಸ್ಟುಡೆಂಟ್ ಅಫೇರ್ಸ್ ಸಮಿತಿಯಯೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದು ಸೂಕ್ತ ನಿರ್ದೇಶನಗಳನ್ನು ನೀಡಲಾಗುತ್ತಿದೆ. ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು, ಹಾಸ್ಟೆಲ್‌ಗಳನ್ನು ಮುಚ್ಚಲು ತಿಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಸೆಕ್ಷನ್ 144 (3) ಜಾರಿ ಇರುವುದರಿಂದ ಎಲ್ಲಾ ಪ್ರವಾಸಿತಾಣ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರಿಗೆ ಅನುಮತಿ ಇಲ್ಲ. ಹೀಗಾಗಿ ಯಾತ್ರಾರ್ಥಿಗಳು ಜಿಲ್ಲೆ ಭೇಟಿ ಮುಂದೂಡಬೇಕು. ಹೊರ ಜಿಲ್ಲೆಗಳಿಂದ ಸಂತೆಗೂ ವ್ಯಾಪಾರಿಗಳು ಬರಬಾರದು. ಇದು ಮುಂದುವರಿದರೆ ಗಡಿ ಪ್ರದೇಶದಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿ ವಾಪಾಸು ಕಳುಹಿಸಬೇಕಾಗುತ್ತದೆ. ವದಂತಿಗಳನ್ನು ಹರಡಿದರೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎಂದರು.

ಎಸ್ಪಿ ವಿಷ್ಣುವರ್ಧನ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಎಡಿಸಿ ಸದಾಶಿವ ಪ್ರಭು, ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ. ಮಧುಸೂಧನ ನಾಯಕ್ ಉಪಸ್ಥಿತರಿದ್ದರು.


Spread the love