ಗಂಜಿಮಠ | ತಂದೆ ಮತ್ತು ಅಪ್ರಾಪ್ತ ಮಗಳಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ; ಆರೋಪ
ಗಂಜಿಮಠ: ಸಮಾರಂಭಕ್ಕೆ ಬಿಲ್ ಸಹಿತ ದನದ ಮಾಂಸ ಕೊಂಡು ಹೋಗುತ್ತಿದ್ದ ಅಪ್ರಾಪ್ತ ಮಗಳು ಹಾಗೂ ತಂದೆಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಗಂಜಿಮಠ ನಾರ್ಲ ಪದವು ಎಂಬಲ್ಲಿ ವರದಿಯಾಗಿದೆ.
ಗಾಯಗೊಂಡವರನ್ನು ಮುಲ್ಲರಪಟ್ನ ನಿವಾಸಿ ಸತ್ತಾರ್ ಹಾಗೂ ಅವರ 10 ವರ್ಷದ ಮಗಳು ಎಂದು ತಿಳಿದು ಬಂದಿದೆ.
ಸತ್ತಾರ್ ಅವರು ಮಗಳೊಂದಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಕಾರ್ಯಕ್ರಮವೊಂದಕ್ಕೆ ಬಿಲ್ ನೊಂದಿಗೆ ದನದ ಮಾಂಸವನ್ನು ಕೊಂಡುಹೋಗುತ್ತಿದ್ದರು ಎನ್ನಲಾಗಿದೆ. ಅವರು ನಾರ್ಲಪದವು ಮುಟ್ಟುತ್ತಿದಂತೆ ಬುಲೆರೊ ಕಾರಿನಲ್ಲಿ ಹಿಂಬಾಳಿಸಿಕೊಂಡು ಬಂದ ಸಂಘಪರಿವಾರದ ಕಾರ್ಯಕರ್ತರು ಅವರ ದ್ವಿಚಕ್ರ ವಾಹನಕ್ಕೆ ಅಡ್ಡಗಟ್ಟಿ ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರನ್ನು ತಡೆಯಲು ಯತ್ನಿಸಿದ ಅವರ 10ವರ್ಷದ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಸತ್ತಾರ್ ಅವರು ಸ್ಥಳದಿಂದ ಓಡಿದ್ದು, ಅವರ ಮಗಳು ಅಲ್ಲೇ ಹತ್ತಿರ ಇದ್ದ ಮನೆಗೆ ಓಡಿ ಆಶ್ರಯ ಪಡೆದಳು ಎಂದು ತಿಳಿದು ಬಂದಿದೆ.
ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸತ್ತಾರ್ ಮತ್ತು ಅವರ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಜ್ಪೆ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ. ಸ್ಥಳದಲ್ಲಿ ಕೆಎಸ್ಆರ್‌ಪಿ ತುಕಡುಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.













