ಗಾಂಜಾ ಮಾರಾಟ – ಕುಂದಾಪುರ ಪೊಲೀಸರಿಂದ ಇಬ್ಬರ ಬಂಧನ

Spread the love

ಗಾಂಜಾ ಮಾರಾಟ – ಕುಂದಾಪುರ ಪೊಲೀಸರಿಂದ ಇಬ್ಬರ ಬಂಧನ

ಕುಂದಾಪುರ : ಇಲ್ಲಿಗೆ ಸಮೀಪದ ವಕ್ವಾಡಿ ಗ್ರಾಮದ ಅಶೋಕ ನಗರ ಎಂಬಲ್ಲಿಂದ ಕೋಟೇಶ್ವರ ಮೇಪು ಕಡೆಗೆ ಹೋಗುವ ಮಣ್ಣು ರಸ್ತೆಯ ಪೂರ್ವಬದಿಯ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದ ಕುಂದಾಪುರ ಪೊಲೀಸ್ ಠಾಣೆಯ ಎಸ್. ಐ ಹರೀಶ್ ಆರ್ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 1 ಕೆ. ಜಿ 105 ಗ್ರಾಂ ತೂಕದ ಗಾಂಜಾ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಇಬ್ಬರು ವ್ಯಕ್ತಿಗಳು ಮೋಟಾರು ಸೈಕಲನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಬಾತ್ಮಿದಾರರೊಬ್ಬರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದಾಗ, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದ ಇಬ್ಬರನ್ನು ಸುತ್ತವರಿದು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಒಬ್ಬ ಕುಂಭಾಶಿ ಗ್ರಾಮದ ಗಣೇಶ್ (20) ಹಾಗೂ ಇನ್ನೊಬ್ಬ ಉಪ್ಪಿನಕುದ್ರು ಗ್ರಾಮದ ಗೌತಮ್ ಯಾನೆ ಬುದ್ದ (25 ) ಎಂದು ತಿಳಿಸಿದ್ದಾರೆ.

ಆರೋಪಿ ಗಣೇಶನ ಕೈಯಲ್ಲಿರುವ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಏನಿದೆ ಎಂದು ಪ್ರಶ್ನಿಸಿದಾಗ ಆತ, ಅದರಲ್ಲಿ ಮಾತ್ರೆ ಹಾಗೂ ಔಷಧಿ ಇರುವುದಾಗಿ ತಿಳಿಸಿದ್ದು, ಅನುಮಾನಗೊಂಡು ಕೂಲಂಕಷವಾಗಿ ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಇರುವುದು ಪತ್ತೆಯಾಗಿತ್ತು. ಅಕ್ರಮವಾಗಿ ಪತ್ತೆಯಾದ ಗಾಂಜಾವನ್ನು ಹೊಸನಗರ ಕಡೆಯಿಂದ ಒಬ್ಬ ವ್ಯಕ್ತಿಯಿಂದ ಪಡೆದು, ವಕ್ವಾಡಿ ಪರಿಸರದಲ್ಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶ ಇರಿಸಿಕೊಂಡಿರುವ ಕುರಿತು ಆರೋಪಿ ತಿಳಿಸಿದ್ದಾನೆ.

ಬಂಧಿತ ಆರೋಪಿತರಿಂದ ವಶಪಡಿಸಿಕೊಂಡಿರುವ ಗಾಂಜಾದ ಅಂದಾಜು ಬೆಲೆ 33,000 ರೂ. ಆರೋಪಿಗಳಿಂದ ನಗದು 1,880 ರೂ., 12,000 ಮೌಲ್ಯದ 2 ಮೊಬೈಲ್ ದೂರವಾಣಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 8,000 ಮೌಲ್ಯದ ಆರ್ ಎಕ್ಸ್ 135 ಮೋಟಾರು ಸೈಕಲ್ ಸ್ವಾದೀನಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಎಸ್. ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್. ಪಿ ಕುಮಾರಚಂದ್ರ, ಎ ಎಸ್ ಪಿ ಹರಿರಾಂಶಂಕರ, ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್. ಐ ಹರೀಶ್ ಆರ್ ನಾಯಕ್, ಎ. ಎಸ್. ಐ ಆನಂದ ಬಿ ಹಾಗೂ ಸುಧಾಕರ್ , ಸಿಬ್ಬಂದಿಗಳಾದ ಮಂಜುನಾಥ್, ಸಂತೋಷ್ ಕುಮಾರ್, ಚಂದ್ರಶೇಖರ ಶೆಟ್ಟಿ, ಅವಿನಾಶ್, ಹರೀಶ್, ರಾಘವೇಂದ್ರ , ವಿಜಯ್, ಪ್ರಸನ್ನ, ವೀರಪ್ಪ, ರವಿ, ಗೋಕುಲ, ಶಾಂತಾರಾಮ, ಸಚಿನ್ ಶೆಟ್ಟಿ, ರಾಘವೇಂದ್ರ ಮೊಗೇರ, ರಾಮ ಪೂಜಾರಿ, ಶಂಕರ್, ಅರುಣ್ ಕುಮಾರ್ ಹಾಗೂ ಜೀಪು ಚಾಲಕ ಸಂತೋಷ್ ಶೆಟ್ಟಿ ಇದ್ದರು.


Spread the love