ಗುಡ್ ಫ್ರೈಡೆ ಪ್ರಯುಕ್ತ ಕೊಳಲಗಿರಿ ಚರ್ಚಿನಲ್ಲಿ ನಟನೆಯ ಮೂಲಕ ಶಿಲುಬೆಯ ಹಾದಿ ಪ್ರಾರ್ಥನೆ

Spread the love

ಗುಡ್ ಫ್ರೈಡೆ ಪ್ರಯುಕ್ತ ಕೊಳಲಗಿರಿ ಚರ್ಚಿನಲ್ಲಿ ನಟನೆಯ ಮೂಲಕ ಶಿಲುಬೆಯ ಹಾದಿ ಪ್ರಾರ್ಥನೆ

ಉಡುಪಿ: ಯೇಸು ಕ್ರಿಸ್ತರು ಶಿಲುಬೇಗಿರಿ ಸಾವನಪ್ಪಿದ ದಿನವಾದ ಶುಭ ಶುಕ್ರವಾರ ಅಥವಾ ಗುಡ್ ಫ್ರೈಡೆಯನ್ನು ಕೊಳಲಗಿರಿಯ ಸೇಕ್ರೇಡ್ ಹಾರ್ಟ್ ಚರ್ಚಿನಲ್ಲಿ ಪ್ರಾರ್ಥನಾ ವಿಧಿಯ ಮೂಲಕ ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು.

ಚರ್ಚಿನ ಧರ್ಮಗುರು ವಂ ಅನಿಲ್ ಪ್ರಕಾಶ್ ಡಿಸಿಲ್ವಾ, ಸಹಾಯಕ ಧರ್ಮಗುರು ವಂ. ಜೆರಾಲ್ಡ್ ಸಂದೀಪ್ ನೇತೃತ್ವದಲ್ಲಿ ಐಸಿವೈಎಮ್ ಸಂಘಟನೆಯ ಸಹಭಾಗಿತ್ವದೊಂದಿಗೆ ಯುವಕರು ಮತ್ತು ಇತರರು ಸೇರಿ ಒಟ್ಟು 50 ಮಂದಿ ಕಲಾವಿದರು ಯೇಸು ಕ್ರಿಸ್ತರು ಮರಣದಂಡನೆಗೆ ಗುರಿಯಾಗುವಲ್ಲಿಂದ ಆರಂಭಿಸಿ ಶಿಲುಬೆ ಹೊತ್ತು ಕಲ್ವಾರಿ ಬೆಟ್ಟಕ್ಕೆ ಸಾಗಿ ಅಲ್ಲಿ ಶಿಲುಬೆಗೆ ಏರಿ ಮರಣವನ್ನಪ್ಪುವ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನು ಅವಲೋಕಿಸಿ ಪ್ರಾರ್ಥಿಸುತ್ತಾ ಸಾಗುವ ಶಿಲುಬೆಯ ಹಾದಿಯ ಪ್ರಕ್ರಿಯೆಯನ್ನು ನಟನೆಯ ಮೂಲಕ ಚರ್ಚಿನ ಮೈದಾನದಲ್ಲಿ ನಡೆಸಿಕೊಟ್ಟರು.

ಈ ಮೂಲಕ ಕ್ರೈಸ್ತ ಭಕ್ತಾದಿಗಳಿಗೆ ಯೇಸು ಶಿಲುಬೆಯ ಹಾದಿಯಲ್ಲಿ ಅನುಭವಿಸಿದ ಕಷ್ಟ ನೋವು, ಯಾತನೆ ಮರಣವನ್ನು ತೋರಿಸಿಕೊಡುವ ವಿಶಿಷ್ಟ ಪ್ರಯತ್ನ ಮಾಡಲಾಯಿತು.

ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಬಲಿಪೂಜೆಯ ಬದಲು ಯೇಸುವಿನ ಶಿಲುಬೆಯ ಹಾದಿಯನ್ನು ಸಂಪೂರ್ಣವಾಗಿ ಪರಿಚಯಿಸುವ ಹೊಸ ಒಡಂಬಡಿಕೆಯ ಪವಿತ್ರ ಬೈಬಲಿನ ಪಠಣಗಳು ಕೂಡ ನಡೆಸಲಾಯಿತು.

ಶಿಲುಬೆಯ ಹಾದಿಯಲ್ಲಿ ಯೇಸುವಿಗೆ ಮರಣ ದಂಡನೆಯನ್ನು ಹೇರಿದ ಬಳಿಕ ಯೇಸುಕ್ರಿಸ್ತರು ಭಾರವಾದ ಶಿಲುಬೆಯನ್ನು ಹೊತ್ತು ಮೂರು ಬಾರಿ ಬೀಳುವುದು, ಶಿಲುಬೆಯನ್ನು ಹೊತ್ತು ಸಾಗಲು ಕಷ್ಟವಾದಾಗ ಯೇಸುವಿನ ಸಹಾಯಕ್ಕೆ ಬಂದ ಸಿರೇನ್ ನಗರದ ಸಿಮಾಂವ್ ದ್ರಶ್ಯ, ಯೇಸು ಶಿಲುಬೆ ಹೊತ್ತು ಸಾಗುತ್ತಿದ್ದಾಗ ಅವರ ಆಯಾಸಭರಿತ ಮುಖವನ್ನು ಕರವಸ್ತ್ರದಲ್ಲಿ ಒರೆಸಲು ಬಂದ ವೆರೊನಿಕಾ, ಯೇಸುವನ್ನು ಶಿಲುಬೆಗೇರಿಸಿ ಮೊಳೆಯನ್ನು ಜಡಿಯುವ ದೃಶ್ಯಗಳು ನೈಜ ನಟನೆಯ ಮೂಲಕ ತೋರಿಸುವಾಗ ನೆರೆದಿದ್ದ ಭಕ್ತರ ಕಣ್ಣಾಲಿಗಳನ್ನು ಒದ್ದೆಯಾಗಿಸಿದವು. ಸುಮಾರು 350 ಕ್ಕೂ ಅಧಿಕ ಭಕ್ತಾದಿಗಳು ಉರಿಬಿಸಿಲಿನಲ್ಲಿ ದಣಿವಿನ ಅರಿವಿಲ್ಲದೆ ಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


Spread the love