ಗುತ್ತಿಗೆದಾರರ ತಪ್ಪಿಗೆ ವ್ಯಾಪಾರಿಗಳನ್ನು ಗುರಿಯಾಗಿಸುವುದು ಸರಿಯಲ್ಲ- ಶಾಸಕ ಕಾಮತ್

Spread the love

ಗುತ್ತಿಗೆದಾರರ ತಪ್ಪಿಗೆ ವ್ಯಾಪಾರಿಗಳನ್ನು ಗುರಿಯಾಗಿಸುವುದು ಸರಿಯಲ್ಲ- ಶಾಸಕ ಕಾಮತ್

ಮಂಗಳೂರು: ಕರಾವಳಿ ಉತ್ಸವದಲ್ಲಿ ಗುತ್ತಿಗೆದಾರರ ತಪ್ಪಿನಿಂದ ಅಲ್ಲಿ ಸ್ಟಾಲ್ ತೆರೆದಿದ್ದ ವ್ಯಾಪಾರಿಗಳು ಅನುಭವಿಸುತ್ತಿರುವ ತೊಂದರೆಯನ್ನು ಜಿಲ್ಲಾಡಳಿತ ಶೀಘ್ರದಲ್ಲಿ ಪರಿಹರಿಸಬೇಕೆಂದು ವ್ಯಾಪಾರಿಗಳ ಪರವಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಮಂಗಳೂರಿನಲ್ಲಿ ಕರಾವಳಿ ಉತ್ಸವ ನಡೆಸಲು ಜಿಲ್ಲಾಡಳಿತ ಕರೆದಿದ್ದ ಟೆಂಡರ್ ಅನ್ನು ಮುಸ್ತಾಫಾ ಅಹ್ಮದ್ ಎಂಬುವರು ಮೂವತ್ತು ಲಕ್ಷ ರೂಪಾಯಿಗಳಿಗೆ ಪಡೆದಿದ್ದರು. ಗುತ್ತಿಗೆಯ ಒಟ್ಟು ಮೊತ್ತದೊಂದಿಗೆ ಜಿಎಸ್ ಟಿ ಸೇರಿಸಿ ಪಾವತಿಸಿದ ನಂತರವೇ ಟೆಂಡರ್ ಪ್ರಕ್ರಿಯೆ ಮುಂದುವರಿಸಬೇಕಿತ್ತು. ಆದರೆ ಮುಸ್ತಾಫಾ ಅವರ ಚೆಕ್ ಬೌನ್ಸ್ ಆದರೂ ಮನಪಾ ಆಯುಕ್ತರು ಮೌನವಾಗಿದ್ದರು. ಕರಾವಳಿ ಉತ್ಸವ ಮುಗಿಯುವ ಸಮಯದಲ್ಲಿ ಗುತ್ತಿಗೆದಾರರಿಂದ ಜಿಲ್ಲಾಡಳಿತಕ್ಕೆ ಇನ್ನೂ 14 ಲಕ್ಷ ಬಾಕಿ ಇತ್ತು. ಆ ಬಳಿಕ ಪಾಲಿಕೆ ಆಯುಕ್ತರು ಬಾಕಿ ಇರುವ ಮೊತ್ತವನ್ನು ಗುತ್ತಿಗೆದಾರ ಮುಸ್ತಾಫಾ ಅವರು ಪಾವತಿಸದೇ ಇರುವುದರಿಂದ ವ್ಯಾಪಾರಿಗಳ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗದಂತೆ ನಿರ್ಬಂಧ ಹೇರಿದ್ದಾರೆ. ಗುತ್ತಿಗೆದಾರರು ಜಿಲ್ಲಾಡಳಿತಕ್ಕೆ ಹಣ ಬಾಕಿ ಇಟ್ಟಿರುವುದಕ್ಕೂ, ವ್ಯಾಪಾರಿಗಳಿಗೂ ಯಾವುದೇ ಸಂಬಂಧ ಇಲ್ಲ.

ವ್ಯಾಪಾರಿಗಳಿಗೆ ನಿಗದಿಪಡಿಸಿರುವ ಮೊತ್ತವನ್ನು ಸಂಪೂರ್ಣವಾಗಿ ಗುತ್ತಿಗೆದಾರರಿಗೆ ಪಾವತಿಸಿದ್ದರೂ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ.ಇದಕ್ಕಾಗಿ ನೇರವಾಗಿ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳು ಬಡಪಾಯಿ ವ್ಯಾಪಾರಿಗಳ ವಿರುದ್ಧ ಸಮರ ಸಾರಿರುವುದು ಸರಿಯಲ್ಲ ಎಂದು ಶಾಸಕ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಸಚಿವ ಯುಟಿ ಖಾದರ್ ಅವರ ಸ್ವಕ್ಷೇತ್ರದಲ್ಲಿ ಹೀಗಾದರೆ ಹೇಗೆ ಎಂದು ಶಾಸಕರು ಪ್ರಶ್ನಿಸಿದ್ದಾರೆ.


Spread the love