ಗೃಹಸಚಿವ ಪರಮೇಶ್ವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಭೆ – ಶಾಂತಿ ಮಂತ್ರ ಜಪಿಸಿದ ಮುಖಂಡರು

Spread the love

ಗೃಹಸಚಿವ ಪರಮೇಶ್ವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಭೆ – ಶಾಂತಿ ಮಂತ್ರ ಜಪಿಸಿದ ಮುಖಂಡರು

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೆಲ ಸಮಯದ ಹಿಂದೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ – ಸಾಂಸ್ಕೃತಿಕ ಸಂಘಟನೆಗಳು ಹಾಗೂ ಪಕ್ಷಗಳ ಮುಖಂಡರ ಸೌಹಾರ್ದತೆಯ ಮಾತುಗಳಿಗೆ ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣ ಸಾಕ್ಷಿಯಾಯಿತು.

ಗೃಹ ಸಚಿವ ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದವರೆಲ್ಲರೂ ಜಿಲ್ಲೆಯ ಸೌಹಾರ್ದತೆಯನ್ನು ಮರುಸ್ಥಾಪಿಸುವ ಕುರಿತಂತೆ ಸಲಹೆ, ಕ್ರಮಗಳ ಬಗ್ಗೆ ಗಮನ ಸೆಳೆದರು.

“ಜಿಲ್ಲೆಯ ಎಲ್ಲ ಜನರು ಶಾಂತಿ ಬಯಸುತ್ತಾರೆ. ಹಾಗಾಗಿ ಎಲ್ಲರೂ ಕಾನೂನನ್ನು ಪಾಲಿಸಿ ಪೊಲೀಸರಿಗೆ ಅವರ ಕೆಲಸ ಮಾಡಲು ಬಿಟ್ಟರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ” – ವಂ. ಮ್ಯಾಕ್ಸಿಂ, ಕ್ರೈಸ್ತ ಧರ್ಮ ಪ್ರಾಂತ್ಯದ ಪ್ರಮುಖರು ಹೇಳಿದರು

“ಸಮಾಜದ ಸುಭದ್ರತೆಯನ್ನು ಕಾಪಾಡುವುದು ಸರಕಾರದ ಕೆಲಸ. ದೈವಿಕವಾಗಿ ಅನುಗ್ರಹ ಹೊಂದಿರುವ ಜಿಲ್ಲೆಯಲ್ಲಿ ದ್ವೇಷ ಭಾಷಣ, ಅಪರಾಧ ಕೃತ್ಯಗಳು ನಡೆಯುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧ ಕೃತ್ಯಗಳನ್ನು ಎಸಗುವವರನ್ನು ಅಪರಾಧಿಗಳನ್ನಾಗಿ ಮಾತ್ರವೇ ಪರಿಗಣಿಸಿ, ಜಾತಿ ಧರ್ಮ ನೋಡದೆ ಕಾನೂನು ಕ್ರಮ ಜರಗಿಸಬೇಕು. ಅಪರಾಧಿಗಳಿಗೆ ಶಿಕ್ಷೆಯನ್ನು ಕಠಿಣಗೊಳಿಸಬೇಕು” -ಅಝೀಝ್ ದಾರಿಮಿ, ಧಾರ್ಮಿಕ ವಿದ್ವಾಂಸ ಹೇಳಿದರು

ಮಸೀದಿ, ಮದ್ರಸ, ದೇವಸ್ಥಾನ, ಚರ್ಚುಗಳಲ್ಲಿ ಕೋಮು ಸೌಹಾರ್ದ, ರಾಷ್ಟ್ರ ಭಕ್ತಿಯನ್ನು ಬಿತ್ತುವ ಶಿಕ್ಷಣ ಕೊಟ್ಟರೆ ಸಾಮರಸ್ಯ ನೆಲೆಸುತ್ತದೆ. ಮದ್ರಸಾಗಳಲ್ಲಿ ದೇಶಭಕ್ತಿಯ, ಶಾಂತಿ ಸೌಹಾರ್ದ ಬಿತ್ತುವ ಶಿಕ್ಷಣ ನೀಡುತ್ತಿದ್ದೇವಾ, ನಾವು ಧಾರ್ಮಿಕ ಕೇಂದ್ರಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡುತ್ತಿದ್ದೇವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಈ ಜಿಲ್ಲೆಯಲ್ಲಿ ಯಾವಾಗ ಕೋಮು ಗಲಭೆಗಳು ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಲವ್ ಜಿಹಾದ್ ನೆಪದಲ್ಲಿ ಹಿಂದು ಹುಡುಗಿಯರ ವಿಚಾರ ಬಂದಾಗ, ಗೋಹತ್ಯೆ ಆದಾಗ ಕೋಮು ದ್ವೇಷದ ವಾತಾವರಣ ಆಗಿದೆ. ಇದಕ್ಕೆ ಡ್ರಗ್ಸ್, ಗಾಂಜಾ, ಇನ್ನಿತರ ಅಕ್ರಮ ದಂಧೆಗಳು ಸಾಥ್ ಕೊಟ್ಟಿವೆ. ಇವನ್ನು ಕಾನೂನು, ಪೊಲೀಸರ ಸೂಕ್ತವಾಗಿ ನಿಗ್ರಹಿಸಬೇಕಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಪಕ್ಷದಲ್ಲಿ ಗೆದ್ದ ಬಳಿಕ ಸೈದ್ಧಾಂತಿಕ ಬದ್ಧತೆ ಇರಿಸಿಕೊಳ್ಳಬೇಕಾಗುತ್ತದೆ. ಪೊಲೀಸರು ಏಕಾಏಕಿ ಮಧ್ಯರಾತ್ರಿ ಹಿಂದು ಸಂಘಟನೆಗಳ ಪ್ರಮುಖರ, ಯಾವುದೇ ಅಪರಾಧ ಹಿನ್ನೆಲೆಯಿಲ್ಲದ ಆರೆಸ್ಸೆಸ್ ಹಿರಿಯರ ಮನೆಗಳಿಗೆ ಹೋಗಿ ಫೋಟೊ ತೆಗೆದರೆ ನಾವು ಸಮಾಜದಲ್ಲಿ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ನಾವು ಇದನ್ನು ಸಹಿಸಿಕೊಂಡು ಇರಬೇಕಾಗುತ್ತಾ ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೆದುರಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ. ಇಲ್ಲಿ ಕೇವಲ ಭಾಷಣದ ಕಾರಣಕ್ಕೆ ಕೋಮು ಸಂಘರ್ಷ ಆಗಿಲ್ಲ ಎನ್ನುವುದನ್ನು ಗಮನಿಸಬೇಕು. ಇಲ್ಲಿನ ಕೊಲೆಗಳು ಸ್ವಯಂ ಪ್ರೇರಣೆಯಿಂದ ಆಗಿರುವುದೋ, ಯಾವುದೋ ಭಾಷಣದಿಂದ ಆಗಿರುವುದೋ ಅನ್ನುವುದನ್ನು ತನಿಖೆಯ ಮೂಲಕ ಕಂಡುಕೊಳ್ಳಿ ಎಂದು ಹರೀಶ್ ಪೂಂಜಾ ಗೃಹ ಸಚಿವರಿಗೆ ಸಲಹೆ ಇತ್ತರು.

ಕರಾವಳಿಯಲ್ಲಿ ಸಂಪ್ರದಾಯದಂತೆ ನಡೆದುಬಂದ ಗಣೇಶೋತ್ಸವವನ್ನು ರಾತ್ರಿ 11 ಗಂಟೆಗೆ ಮಿತಿ ಹಾಕಿದರೆ ಅವನ್ನು ಪ್ರಶ್ನಿಸುವ ಸ್ಥಿತಿ ಬರಬಹುದು. ಹಿಂದಿನಿಂದಲೂ ಶಾಲೆಗಳಲ್ಲಿ ಗಣೇಶೋತ್ಸವ ನಡೆದು ಬರ್ತಾ ಇತ್ತು ಹಿಂದಿನ ಬಾರಿ ಅದನ್ನು ನಿರ್ಬಂಧಿಸಿ, ಅದರಿಂದ ಸಮಾಜದ ಮೇಲೆ ಪ್ರಚೋದನೆಗೆ ಅವಕಾಶ ಕೊಟ್ಟಂತಾಗಿತ್ತು ಹಾಗಂತ, ಇಲ್ಲಿ ಎಲ್ಲೂ ತೊಂದರೆ ಎದುರಾಗಿಲ್ಲ. 8-9 ಮೆಡಿಕಲ್ ಕಾಲೇಜುಗಳಿವೆ, ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೊಲೆಯ ಕಾರಣಕ್ಕೆ ಕೋಮು ಹಣೆಪಟ್ಟಿ ಕಟ್ಟುವುದು ಬೇಡ ಎಂದು ಹರೀಶ್ ಪೂಂಜ ಹೇಳಿದರು.

ಅಕ್ರಮ ಗೋಹತ್ಯೆ ಕಾರಣಕ್ಕೆ ದ್ವೇಷ ಹುಟ್ಟುವುದನ್ನು ನಾವು ನೋಡಬೇಕಾಗಿದೆ. ಇಡೀ ರಾಜ್ಯದಲ್ಲಿ ಅಧಿಕೃತ ಕಸಾಯಿಖಾನೆ ಇರುವುದು ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ. ಆದರೆ ಅಕ್ರಮವಾಗಿ ಈ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಸಾಯಿಖಾನೆಗಳಿದ್ದು ಅದಕ್ಕಾಗಿ ಗೋವುಗಳ ಕಳ್ಳತನ, ಅದರ ನೆಪದಲ್ಲಿ ಗಲಾಟೆಗಳು ಆಗಿದ್ದಿದೆ. ಮಂಗಳೂರಿನಲ್ಲಿ ಅಧಿಕೃತ ಕಸಾಯಿಖಾನೆ ನಿಂತು ಎರಡು ವರ್ಷ ಆದರೂ ಎಲ್ಲ ಕಡೆಯೂ ಬೀಫ್ ಮಾರಾಟ ಕೇಂದ್ರಗಳಿವೆ ಅಲ್ಲಿಗೆ ಗೋಮಾಂಸ ಹೇಗೆ ಬರುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು.
ಆಡಳಿತ ನಡೆಸುವವರು ನಮ್ಮದು ಮಾತ್ರ ಸರಿ, ಬೇರೆಯವರದ್ದು ಸರಿ ಇಲ್ಲ ಎಂದು ಹೇಳುವುದನ್ನು ಒಪ್ಪಲಾಗದು. ಎಲ್ಲ ರೀತಿಯ ಕೊಲೆಗಳಿಗೆ, ಅಪರಾಧಗಳಿಗೆ ಡ್ರಗ್ಸ್ ಕಾರಣ ಎಂದಾದರೆ, ಇಷ್ಟೊಂದು ಡ್ರಗ್ಸ್, ಗಾಂಜಾ ಆಗ್ತಿದೆ ಎಂದರೆ ಯಾಕೆ ಇದನ್ನು ಕಂಟ್ರೋಲ್ ಮಾಡಕ್ಕಾಗಲ್ಲ. ಇದನ್ನು ನಿರ್ದಾಕ್ಷಿಣ್ಯವಾಗಿ ತಡೆಯುವ ಕೆಲಸ ಆಗಬೇಕು ಇನ್ನು ಎರಡು ವರ್ಷಗಳಿಂದ ಸಿಆರ್ ಜೆಡ್ ಮರಳು ತೆಗೆಯಲು ಅವಕಾಶ ಇಲ್ಲ. ಆದರೆ ಅಕ್ರಮವಾಗಿ ತೆಗೆಯುವವರು ತೆಗೆದು ಮಾರಾಟ ಮಾಡುತ್ತಾರೆ. ಇದರಿಂದ ಎರಡು ವರ್ಷದಲ್ಲಿ ಎಷ್ಟು ನಷ್ಟ ಆಗಿರಲಿಕ್ಕಿಲ್ಲ ಎಂದು ಕೇಳಿದರು.

ಸುಳ್ಯದಲ್ಲಿ ಇಬ್ಬರು ಮಹಿಳೆಯರ ಮನೆಗೆ ರಾತ್ರಿ ವೇಳೆ ಪೊಲೀಸರು ಹೋಗಿ ಅವರ ಫೋಟೊ ತೆಗೆದಿದ್ದಾರೆ. ಇದು ಒಂದು ದಿನ ಅಲ್ಪ ಏಳು ದಿನವೂ ಮಾಡಿದ್ದಾರೆ. ಯಾರು ಪೊಲೀಸರು ಈ ಕೃತ್ಯ ಮಾಡಿದ್ದಾರೆ, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ, ಗೃಹ ಸಚಿವರಿಗೆ ಒತ್ತಾಯಿಸಿದರು. ನೀವು ಸುಬ್ರಮಣ್ಯಕ್ಕೆ ಬಂದಾಗ ನಂಗೆ ತಿಳಿಸದೇ ಇರೋದು ಬೇಸರ ತಂದಿದೆ ಎಂದರು.

ಶಾಸಕ ಭರತ್ ಶೆಟ್ಟಿ ಮಾತನಾಡಿ, ಸೌಹಾರ್ದ ಇಡೀ ಜಗತ್ತಿನಲ್ಲಿ ಇಲ್ಲ ಅದನ್ನು ನಾವು ಇಲ್ಲಿ ಕುಳಿತು ಸಭೆ ನಡೆಸುವುದರಿಂದ ಮಾಡಲು ಸಾಧ್ಯವಿಲ್ಲ. ಆದರೆ ಶಾಂತಿ ನೆಲೆಸುವಂತಾಗಲು ಜನರ ಮನಸ್ಥಿತಿ ಬದಲಿಸಬೇಕು. ಅಪರಾಧ ನಡೆಯದಂತೆ ನೋಡಿಕೊಳ್ಳಬೇಕು. ಎಲ್ಲಿ ಸಮಸ್ಯೆ ಇದೆಯೋ ಅದನ್ನು ಸರಿಮಾಡಿದರೆ ಎಲ್ಲವೂ ಸರಿಯಾಗುತ್ತದೆ ಗೋಕಳ್ಳತನ ಒಂದು ಅಪರಾಧ, ಅದನ್ನು ಆಗದಂತೆ ಪೊಲೀಸರು ತಡೆದರೆ ಗಲಾಟೆಗೆ ಅವಕಾಶ ಇರುವುದಿಲ್ಲ. ಮರಳು ದಂಧೆ ಈಗ ಸರಿಯಾಗಿದ್ದು ಹೇಗೆ. ಕಠಿಣ ಕ್ರಮ ಆಗಬೇಕೇ ಹೊರತು ಅದು ಆಗದೇ ಇದ್ದರೆ ನಾವು ಸಭೆ ಮಾಡ್ತಾ ಇರಬೇಕು ಎಂದು ಹೇಳಿದರು.

ಸಭೆಯ ಕೊನೆಯಲ್ಲಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೃಹ ಸಚಿವರ ಬಗ್ಗೆಯೇ ಪ್ರಶ್ನೆ ಎತ್ತಿದರು. ನೀವು ಇಷ್ಟು ಬಾರಿ ಮಂಗಳೂರಿಗೆ ಬಂದರೂ, ಎರಡು ವರ್ಷದಲ್ಲಿ ಒಮ್ಮೆಯೂ ಇಲ್ಲಿನ ಶಾಸಕರು, ಸಂಸದರ ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾ ತಾಡಿಲ್ಲ. ಜನರ ಸಮಸ್ಯೆಗಳನ್ನು ನಿಮ್ಮ ಮುಂದಿಡುವುದು ಶಾಸಕರ ಕರ್ತವ್ಯ ಎಂದರು. ಸರ್ಕಾರ, ಪೊಲೀಸರ ಕೆಲಸ ಕೇವಲ ಭಯ ಮೂಡಿಸುವುದಕ್ಕಲ್ಲ. ಶಾಂತಿ ಸಭೆಗೂ ಎಲ್ಲರನ್ನೂ ಯಾಕೆ ಕರೆದಿಲ್ಲ. ಈ ಸಭೆಯ ಪಟ್ಟಿ ತಯಾರಿಸುವಾಗ ನಮ್ಮ ಮಾತನ್ನು ಕೇಳಬಹುದಿತ್ತಲ್ವಾ, ಜನರ ಪರವಾಗಿ ನಾವು ಇಲ್ಲ ಎನ್ನುವ ಭಾವನೆ ಬರುವಂತೆ ಆಡಳಿತದ ನಡೆ ಇರಬಾರದು ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು. ಸರಕಾರದ ಆಡಳಿತ ವೈಫಲ್ಯವನ್ನು ಜನರ ಮೇಲೆ ಹೇರದಿರಿ. ನಿಮ್ಮ ವಿಚಾರ ಒಪ್ಪಿಲ್ಲ ಅಂತ ಕೋಮು ದ್ವೇಷದ ಹೊಣೆಯನ್ನು ಜನರ ತಲೆಗೆ ಕಟ್ಟುವುದಲ್ಲ. ಮಂಗಳೂರಿನ ಜನರು ಕೋಮುವಾದಿ, ಹಿಂಸಾಕೋರರು ಎಂಬುದಾಗಿ ಬಿಂಬಿಸಬೇಡಿ. ಸೈದ್ಧಾಂತಿಕ ವಿಚಾರದಲ್ಲಿ ಯಾರದ್ದೇ ತಪ್ಪಾದರೂ ಕಾನೂನು ಪ್ರಯೋಗಿಸಿ, ನಿಗ್ರಹ ಮಾಡಿ. ನಾವು ಸರಿ ಮಾಡಿದರೆ ಜನರು ಓಟು ಕೊಡುತ್ತಾರೆ, ಇಲ್ಲದೇ ಇದ್ದರೆ ನಮ್ಮನ್ನು ಮನೆಗೆ ಕಳಿಸುತ್ತಾರೆ. ಎರಡು ವರ್ಷ ಆದರೂ ಸರಿಯಾದ ಮರಳು ನೀತಿಯನ್ನು ಯಾಕೆ ಮಾಡಲಾಗಿಲ್ಲ. ಜಿಲ್ಲೆಯ ಮೈನಿಂಗ್ ಅಧಿಕಾರಿಗಳು ಭ್ರಷ್ಟರಿದ್ದಾರೆ. ಜಿಲ್ಲೆಯ ಮಿನರಲ್ ಫಂಡನ್ನು ನಮ್ಮ ಶಾಸಕರ ಮಾತನ್ನೂ ಕೇಳದೆ ವಿಲೇವಾರಿ ಮಾಡುತ್ತಾರೆ ಎಂದು ಸಂಸದ ಚೌಟ ಅಸಮಾಧಾನ ವ್ಯಕ್ತಪಡಿಸಿದರು.

ಸಂಸದರು ಕೆಲವು ವಿಚಾರ ಎತ್ತಿದಾಗ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಾವು ಎಲ್ಲ ಮತೀಯರನ್ನು ಎಲ್ಲ ಸಂಘ ಸಂಸ್ಥೆಯವರನ್ನೂ ಸಭೆಗೆ ಕರೆದಿದ್ದೇವೆ, ಯಾಕೆ ಆಕ್ಷೇಪ ತೆಗೆಯುತ್ತಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಹೇಳಿದರು. ಈ ವೇಳೆ, ಆಗಿರುವ ತಪ್ಪನ್ನು ಒಪ್ಪಿಕೊಳ್ಳಿ ಎಲ್ಲ ಸಂಘಟನೆಯವರನ್ನು ಕರೆದಿಲ್ಲ ತಾನೇ ಎಂದು ಹರೀಶ್ ಪೂಂಜ ಟಾಂಗ್ ಇಟ್ಟರು. ಬಜರಂಗದಳ, ವಿಹಿಂಪದವರನ್ನು ಯಾಕೆ ಕರೆದಿಲ್ಲ. ಅವರಿಗೂ ತಮ್ಮ ಭಾವನೆ ಹೇಳಿಕೊಳ್ಳುವ ಹಕ್ಕು ಇಲ್ಲವೇ, ಹಿಂದು ಸಮಾಜದಲ್ಲಿ ಸ್ವಾಮೀಜಿಗಳು ಇಲ್ಲವೇ ಎಂದು ಭರತ್ ಶೆಟ್ಟಿ ಕೇಳಿದರು.

“ಎಳೆಯ ಮಕ್ಕಳಲ್ಲಿ ವಿಷಬೀಜ ಬಿತ್ತಬೇಡಿ. ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ನಮ್ಮ ಪೂಜಾಪದ್ಧತಿಯೇ ಶ್ರೇಷ್ಠ ನಮ್ಮ ಧರ್ಮವೇ ಶ್ರೇಷ್ಠ ಉಳಿದದ್ದೆಲ್ಲ ಕನಿಷ್ಠ ಎಂದು ಬೋಧಿಸುವುದು ಮಕ್ಕಳ ಮನಸ್ಸಿನಲ್ಲಿ ಮೂಲಭೂತವಾದ ಬಿತ್ತುತ್ತದೆ. ಎಲ್ಲರ ಮನೆಗಳಲ್ಲಿ, ಎಲ್ಲ ಕಡೆಯ ಶಾಲೆಗಳಲ್ಲೂ ಎಲ್ಲ ಧರ್ಮಗಳೂ ಒಂದೇ ಎನ್ನುವ ಸೌಹಾರ್ದ ಭಾವನೆ ಬಿತ್ತಬೇಕು. ಹಾಗಾದಾಗ ಮಾತ್ರ ಶಾಂತಿ, ಸಾಮರಸ್ಯ ನೆಲೆಸಬಹುದು ಎಂದು ವಿಶ್ವ ಹಿಂದು ಪರಿಷತ್ ಪ್ರಮುಖ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂಬಿ ಪುರಾಣಿಕ್ ಹೇಳಿದರು.

ನಾನೊಂದು ಬಾರಿ ಇಫ್ತಾರ್ ಕೂಟಕ್ಕೆ ಹೋಗಿದ್ದನ್ನು ಗುರಿಯಾಗಿಸಿ ನನ್ನ ಬಗ್ಗೆ ವಿಕೃತ ಮನಸ್ಸುಗಳು ದ್ವೇಷ ಕಾರಿದ್ದು ನನಗೆ ತೀವ್ರ ನೋವು ತಂದಿತ್ತು. ಎಲ್ಲರಿಂದಲ್ಲ, ಕೆಲವು ವರ್ಗದವರಿಂದ ತೀವ್ರ ಟೀಕೆ ಎದುರಿಸಬೇಕಾಯಿತು. ಸೌಹಾರ್ದ ಸಮಾಜದಲ್ಲಿ ಇಂತಹದ್ದು ಆಗಬಾರದು. ಹಿಂದು, ಕ್ರಿಶ್ಚಿಯನ್, ಮುಸ್ಲಿಂ ಯಾರೇ ಇರಲಿ, ಸೌಹಾರ್ದ, ಸಾಮರಸ್ಯದಲ್ಲಿ ಬದುಕದ ಹೊರತು ಸಮಾಜದಲ್ಲಿ ಶಾಂತಿ ನೆಲೆಸದು. ಒಬ್ಬರ ಬಗ್ಗೆ ಗೌರವ ಇಲ್ಲದಿದ್ದರೆ ಸಹಬಾಳ್ವೆ ಸಾಧ್ಯವಾಗದು. ಗೋವುಗಳ ಬಗ್ಗೆ ಒಂದು ಸಮಾಜಕ್ಕೆ ಭಕ್ತಿ ಭಾವನೆ ಇದೆ. ಅದನ್ನು ಗೌರವಿಸುವ ಭಾವನೆ ಬಾರದೇ ಸೌಹಾರ್ದ ಬರದು.

ನನ್ನದೇ ಶ್ರೇಷ್ಠ ಎಂದು ಹೇಳಿದರೆ ಅಲ್ಲಿ ವಿಕೃತಿ ಹುಟ್ಟುತ್ತದೆ. ಅದರಿಂದ ಸಮಾಜಕ್ಕೆ ತೊಂದರೆ ಎದುರಾಗುತ್ತದೆ. ಸ್ಪೀಕರ್ ಕ್ಷೇತ್ರ ಉಳ್ಳಾಲದಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ಅಲ್ಲಿಯೇ ಸುತ್ತ ಹಲವು ಧಾರ್ಮಿಕ ಕೇಂದ್ರಗಳಿವೆ. ಬೇಕಾಬಿಟ್ಟಿ ಧ್ವನಿವರ್ಧಕ ಇಟ್ಟು ಕಿರುಚಾಡುವುದನ್ನು ಮಾಡುತ್ತಾರೆ. ಇದರಿಂದ ಕಲಿಯುವ ಮಕ್ಕಳಿಗೂ ತೊಂದರೆಯಾಗುತ್ತದೆ ಎನ್ನುವ ಭಾವನೆ ಅವರಲ್ಲೂ ಮೂಡಬೇಕು. ಐದು ಕಿಮೀಗೆ ಒಂದರಂತೆ ಧಾರ್ಮಿಕ ಕೇಂದ್ರಗಳಿರುವಾಗ ಅಷ್ಟೊಂದು ಕಿರುಚಾಟ ಬೇಕೇ. ಪ್ರವಚನಗಳಿದ್ದರೆ ತಮಗೆ ಮಾತ್ರ ಕೇಳಿದರೆ ಸಾಕಾಗದೇ ಎಂದು ಪುರಾಣಿಕ್ ಸಲಹೆ ಮುಂದಿಟ್ಟರು.

ಬಿಷಪ್ ಪರವಾಗಿ ಆಗಮಿಸಿದ್ದ ರಾಯ್ ಕ್ಯಾಸ್ಟಲಿನೋ, ಸಮಾಜದಲ್ಲಿ ವಿಭಜಿಸುವುದಕ್ಕಾಗಿ, ಕೋಮು ದ್ವೇಷ ಹರಡುವುದಕ್ಕಾಗಿ ನಮ್ಮ ನಡುವೆ ಕಣ್ಣಿಗೆ ಕಾಣದ ಫೋರ್ಸ್ ಒಂದಿದೆ. ಸಮಾಜದಲ್ಲಿ ಗಲಭೆ ನಡೆಸುವುದಕ್ಕಾಗಿಯೇ ಇದು ಕೆಲಸ ಮಾಡುತ್ತದೆ. ಕಾನೂನು ಮೂಲಕ ಇವನ್ನೆಲ್ಲ ನಿಗ್ರಹಿಸಲು ಸಾಧ್ಯವಿದೆ. ಸೂಕ್ತ ಕ್ರಮ ಜರುಗಿಸುವುದೇ ಎಲ್ಲದಕ್ಕೂ ಉತ್ತರವಾಗುತ್ತದೆ ಎಂದರು. ಎಸ್ಸಿಪಿಐನಿಂದ ಜಲೀಲ್ ಕೃಷ್ಣಾಪುರ ಮಾತನಾಡಿ, ರಸ್ತೆ ನಡುವೆ ಅಪಘಾತವಾಗಿ ನರಳಿದರೂ ಯಾರೂ ಹತ್ತಿರ ಬರಲ್ಲ. ಆದರೆ ಒಂದೆಡೆ ಮಾರಕಾಸ್ತದಿಂದ ದಾಳಿಯಾದರೆ ಸಾವಿರ ಜನ ಸೇರುತ್ತಾರೆ. ಇಂತಹ ಮನಸ್ಥಿತಿ ಹೋಗಲಾಡಿಸಬೇಕು. ಯಾವುದೇ ಜೀವಗಳ ಬಗ್ಗೆಯೂ ಕರುಣೆ ತೋರಿದರೆ ಇದಕ್ಕೆಲ್ಲ ಪರಿಹಾರ ಸಿಗುತ್ತದೆ ಎಂದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಲಕ್ಷ್ಮೀಶ ಗಬ್ಬಡ್ಕ ನೀಡಿರುವ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಆಗ್ರಹಿಸುತ್ತೇನೆ. ಇಲ್ಲಿ ನಡೆಯುತ್ತಿರುವುದು ಮತೀಯ ಜೊತೆಗೆ ಸೈದ್ಧಾಂತಿಕ ರೀತಿಯ ಸಂಘರ್ಷ. ಇದನ್ನು ಕಾನೂನು ಮಾತ್ರದಿಂದ ಸುಲಭದಲ್ಲಿ ಸರಿಪಡಿಸಲಾಗದು. ಸದ್ಯಕ್ಕೆ ಪೊಲೀಸ್ ಇಲಾಖೆ ದಂಧೆಗಳನ್ನು ನಿಲ್ಲಿಸಿದ್ದಾರೆ. ಕಮ್ಯುನಲ್ ಮತ್ತು ಇಲ್ಲಿ ನಡೆಯುವ ದಂಧೆಗಳಿಗೆ ಸಂಪರ್ಕ ಇದೆ. ಸೌಹಾರ್ದ ಬೆಳೆಸಲು ಸಂವಿಧಾನ ಅರಿವು ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ತರಬೇಕು. ಜನರ ಮನಸ್ಸಿನಲ್ಲಿ ಭಾವೈಕ್ಯತೆ ಬೆಳೆಸುವ ಕಾರ್ಯಕ್ರಮಗಳನ್ನು ಅಕಾಡೆಮಿ ಮೂಲಕ ಆಯೋಜಿಸಬೇಕು. ನಾವೆಲ್ಲ ಹಿಂದಿನವರು ತುಳು, ಬ್ಯಾರಿ ಭಾಷೆಯನ್ನು ಮಾತೃಭಾಷೆ ಎನ್ನುವಂತೆ ಮಾತಾಡುತ್ತಿದ್ದೆವು. ಈಗಿನ ಯುವಜನರು ಬ್ಯಾರಿಯೂ ಗೊತ್ತಿಲ್ಲ. ಮುಸ್ಲಿಮ್ ಮಕ್ಕಳು ತುಳುವೂ ತಿಳಿದಿಲ್ಲ ಎನ್ನುವ ಸ್ಥಿತಿಯಾಗಿದೆ. ಅಂತರ ಸೃಷ್ಟಿಯಾಗಿದ್ದರಿಂದ ಈ ರೀತಿ ಆಗಿದೆ ಎನ್ನುವುದು ನನ್ನ ಭಾವನೆ ಎಂದರು.


Spread the love
Subscribe
Notify of

0 Comments
Inline Feedbacks
View all comments