ಗೊಂದಲದ ಗೂಡಾದ ರಾಜ್ಯ ಸರ್ಕಾರದ ಸಮೀಕ್ಷೆ

Spread the love

ಗೊಂದಲದ ಗೂಡಾದ ರಾಜ್ಯ ಸರ್ಕಾರದ ಸಮೀಕ್ಷೆ

  • ಸಂಬಂಧವೇ ಇಲ್ಲದ ಹಲವು ಪ್ರಶ್ನೆಗಳಿಂದ ಗೊಂದಲ ಸೃಷ್ಟಿ: ಶ್ರೀನಿಧಿ ಹೆಗ್ಡೆ ಅಭಿಪ್ರಾಯ

ಉಡುಪಿ: ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಗಣತಿಯು ಜನತೆಗೆ ಹಾಗೂ ಗಣತಿ ಮಾಡುತ್ತಿರುವ ಸಿಬ್ಬಂದಿಗಳಿಗೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಅರ್ಥವಿಲ್ಲದ, ಗೊಂದಲಮಯವಾಗಿರುವ ಹಾಗೂ ಸಂಬಂಧವೇ ಇಲ್ಲದ ಹಲವು ಪ್ರಶ್ನೆಗಳನ್ನು ಇದರಲ್ಲಿ ತುರುಕಿಸಿರುವುದು ಎಲ್ಲ ಗೊಂದಲಗಳಿಗೂ ಕಾರಣವಾಗಿದೆ ಎಂದು ಬಿಜೆಪಿ ಉಡುಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಹೇಳಿದ್ದಾರೆ.

ಸ್ವತಃ ರಾಜ್ಯದ ಉಪ ಮುಖ್ಯಮಂತ್ರಿಯವರೇ ತಮ್ಮ ಮನೆಗೆ ಸಮೀಕ್ಷೆಗೆ ಬಂದವರನ್ನು ಇಷ್ಟೊoದು ಪ್ರಶ್ನೆ ಯಾಕಾಗಿ ಕೇಳುತ್ತೀರಿ, ಇಷ್ಟೊಂದು ಗೊಂದಲ ಯಾಕೇ..?? ತೀರಾ ವೈಯಕ್ತಿಕ ಪ್ರಶ್ನೆ ಇದರಲ್ಲಿ ಯಾಕೆ ಸೇರಿಸಿದ್ದೀರಿ ಎಂದು ಕೇಳಿರುವುದು ರಾಜ್ಯಕ್ಕೆ ತಿಳಿದಿರುವ ಸಂಗತಿ. ಸ್ವತಃ ಉಪ ಮುಖ್ಯಮಂತ್ರಿಗಳಿಗೇ ಉತ್ತರಿಸಲು ಗೊಂದಲವಾದ ಪ್ರಶ್ನೆಗಳು ಜನಸಾಮಾನ್ಯರಿಗೆ ಕಿರಿಕಿರಿ ಆಗದೇ ಇರದೇ ಎಂದು ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ.

ಮತಾಂತರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಕೊಡುವ ಪ್ರಯತ್ನದ ಭಾಗವಾಗಿ ಹಿಂದುಳಿದ ವರ್ಗಗಳ ಆಯೋಗವು ಕ್ರೈಸ್ತ ಎಸ್‍ಸಿ ಜಾತಿಗಳನ್ನು ಜಾತಿ ಗಣತಿ ಪಟ್ಟಿಯಲ್ಲಿ ಸೇರಿಸಿದ್ದು ಬಳಿಕ ಸಮಾಜಗಳ ಮಠಾಧೀಶರು, ಪ್ರಮುಖರು ಹಾಗೂ ಬಿಜೆಪಿ ನಾಯಕರು ಧ್ವನಿ ಎತ್ತಿದ ಪರಿಣಾಮ ಆಯೋಗವು ಕ್ರೈಸ್ತ ಎಸ್‍ಸಿ ಜಾತಿಯ ಹೆಸರನ್ನು ಹಿಂಪಡೆದಿರುವುದು ತಿಳಿದಿರುವ ಸಂಗತಿ. ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಸಮೀಕ್ಷೆಗೆ ರಾಜ್ಯದ ವಿಶೇಷ ಚೇತನ ನೌಕರರನ್ನೂ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಮಾನವೀಯ ಸ್ಪಂದನೆಯಿಲ್ಲದ ಸರ್ಕಾರದ ಧೋರಣೆಯನ್ನು ಇದು ಪ್ರತಿಬಿಂಬಿಸಿದೆ.

ಇವೆಲ್ಲವನ್ನೂ ಗಮನಿಸುವಾಗ ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿರುವ ಅಕ್ಟೋಬರ್ ಹಾಗೂ ನವೆಂಬರ್ ಕ್ರಾಂತಿ ಹಾಗೂ ಈ ಜನಗಣತಿಗೆ ಒಂದಕ್ಕೊಂದು ಸಂಬಂಧ ಇರುವಂತೆ ತೋಚುತ್ತಿದೆ. ರಾಷ್ಟ್ರದಲ್ಲಿ ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿ ಜಾತಿ ಜನಗಣತಿ ನಡೆಸುವ ಕುರಿತು ಪ್ರಧಾನ ಮಂತ್ರಿಗಳು ಘೋಷಿಸಿದ ಬಳಿಕವೂ ಕೂಡ ರಾಜ್ಯ ಸರ್ಕಾರ ಇಂತಹ ಗೊಂದಲ ಸೃಷ್ಟಿ ಮಾಡುವ ಅಗತ್ಯ ಇರಲಿಲ್ಲ. ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಧ್ವನಿ ಕೇಳಿ ಬರುತ್ತಿದೆ. ಇದನೆಲ್ಲ ಒಂದೇ ಕಲ್ಲಿನಲ್ಲಿ ಹೊಡೆಯುವ ಸಲುವಾಗಿ ಮುಖ್ಯಮಂತ್ರಿ ಅವರು ಜಾತಿ ಗಣತಿ ಎಂಬ ಕಲ್ಲನ್ನು ತನ್ನ ವಿರೋಧಿಗಳ ಮೇಲೆ ಎಸೆಯುವ ಸಂಚನ್ನು ಹೂಡಿದ್ದಾರೆ ಎಂದರೂ ಅಚ್ಚರಿ ಇಲ್ಲ ಎಂದು ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.

ರಾಜ್ಯದಲ್ಲಿ ರಸ್ತೆಗಳು ಪೂರ್ತಿ ಕಿತ್ತು ಹೋಗಿ ಹೊಂಡಮಯವಾಗಿವೆ. ರಾಜ್ಯದ ಹಲವು ಪ್ರತಿಷ್ಠಿತ ಕಂಪೆನಿಗಳು ಬೆಂಗಳೂರು ಬಿಡುವ ಬಗ್ಗೆ ಮಾತನಾಡುತ್ತಿವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ತಲೆದೋರಿದರೂ ರಾಜ್ಯ ಸರ್ಕಾರ ಅತ್ತ ತಲೆ ಹಾಕುತ್ತಿಲ್ಲ, ರೈತರ ಕಷ್ಟಗಳು ಹೇಳತೀರದು. ಇದಕ್ಕೆಲ್ಲ ಸ್ಪಂದಿಸುವ ಬದಲು ರಾಜ್ಯ ಸರ್ಕಾರ ಸುಮ್ಮನೆ ಕೋಟಿ ಕೋಟಿ ಹಣ ಸುರಿದು ಜಾತಿ ಗಣತಿ ಮಾಡಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ, ರಾಜ್ಯ ಸರ್ಕಾರ ಅದಷ್ಟು ಬೇಗನೆ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments