ಗೋ-ಹತ್ಯಾ ಅಧಿಸೂಚನೆ ವಿರೋಧಿಸಿ ಸಿಪಿಐಯಿಂದ ಜನಾಗ್ರಹ ಚಳವಳಿ

Spread the love

ಗೋ-ಹತ್ಯಾ ಅಧಿಸೂಚನೆ ವಿರೋಧಿಸಿ ಸಿಪಿಐಯಿಂದ ಜನಾಗ್ರಹ ಚಳವಳಿ

ಮಂಗಳೂರು: ಕೇಂದ್ರ ಸರಕಾರ ಇತ್ತೀಚೆಗೆ ಏಕಪಕ್ಷೀಯವಾಗಿ ಹೊರಡಿಸಿದ ಗೋ-ಹತ್ಯಾ ನಿಷೇಧ ಅಧಿಸೂಚನೆ ಭವಿಷ್ಯದಲ್ಲಿ ದೇಶದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಅಧಿಸೂಚನೆಯನ್ನು ಯಾವ ಕಾರಣಕ್ಕೂ ಜ್ಯಾರಿ ಮಾಡಬಾರದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅಭಿಪ್ರಾಯಪಟ್ಟರು.

ಸುಮಾರು 600 ಕೋಟಿ ರೂಪಾಯಿ ಜನರ ತೆರಿಗೆಯ ಹಣವನ್ನು ಪೋಲು ಮಾಡಿ ಕರ್ನಾಟಕ ರಾಜ್ಯ ಸರಕಾರ ಜಾತೀವಾರು ಸಮೀಕ್ಷೆ ಮತ್ತು ಜನಗಣತಿ ಕೈಗೊಂಡಿತ್ತು. ಆ ವರದಿ ಈಗ ಸರಕಾರದ ಮುಂದಿದ್ದರೂ ಬಹಿರಂಗ ಮಾಡಿಲ್ಲ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕೂಡಲೇ ಆ ವರದಿಯನ್ನು ಬಹಿರಂಗಗೊಳಿಸಿ ಸಾರ್ವಜನಿಕ ಚರ್ಚೆಗೆ ಒಳಪಡಿಸಿ ಅಂಗೀಕರಿಸಬೇಕೆಂದು  ಅವರು ಸರಕಾರವನ್ನು ಒತ್ತಾಯಿಸಿದರು.

ಅವರು ಇಂದು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಎದುರು ಸಿಪಿಐ ವತಿಯಿಂದ ಜರುಗಿದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡುತ್ತಾ ನಮ್ಮ ಪ್ರಧಾನಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಜ್ಯಾರಿಗೊಳಿಸುವ ಕಾನೂನುಗಳ ಸಾಧಕ- ಭಾಧಕಗಳ ಅರಿವೇ ಅವರಿಗಿಲ್ಲ. ಸದಾ ವಿದೇಶ ಪ್ರಯಾಣದಲ್ಲಿ ಮುಳುಗಿ ಹೋಗಿರುವ ಪ್ರಧಾನಿ ಅದಾನಿ ಅಂಬಾನಿಯಂತಹ ಕಾರ್ಪೊರೇಟ್ ಗಳಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ದೇಶ ಬಹಳ ದೊಡ್ಡ ಗಂಡಾಂತರ ಎದುರಿಸಿ ವಿಭಜನೆಯಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ನಂತರ ಸಿಪಿಐ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ.ರಾವ್ ಮಾತನಾಡಿ ಗೋ-ಹತ್ಯಾ ನಿಷೇಧ ಅಧಿಸೂಚನೆ ಹೊರಡಿಸಲು ಮಂದಾಗಿರುವ ಬಿಜೆಪಿಯ ಮೋದಿಜಿಯವರು ಬಹುಸಂಖ್ಯಾತರ ಓಲೈಕೆ ಮಾಡುತ್ತಿರುವುದು ವಿಪರ್ಯಾಸ. ಸಂಘ ಪರಿವಾರದವರು ಸ್ವಲ್ಪ ಇತಿಹಾಸವನ್ನು  ಅಧ್ಯಯನ ಮಾಡುವುದು ಒಳಿತು. ಪ್ರಸಿದ್ಧ ಸಾಹಿತಿ ಎಸ್.ಎಲ್.ಬೈರಪ್ಪನವರು ತನ್ನ `ಪರ್ವ’ ಕಾದಂಬರಿಯಲ್ಲಿ ವiಹಾಭಾರತವನ್ನು, ಅಂದಿನ ಜನ ಜೀವನದ ಪರಿಯನ್ನು ವರ್ಣಿಸುವಾಗ  ಒಂದೊಮ್ಮೆ ಪಾಂಡವರು ಕೃಷ್ಣನನ್ನು ಅತಿಥಿ ಸತ್ಕಾರಕ್ಕೆಂದು ಮನೆಗೆ ಕರೆದಾಗ ಹಾಲಿನಲ್ಲಿ ಬೇಯಿಸಲಾದ ಅನ್ನ ಹಾಗೂ ಹೋರಿಯ ಮಾಂಸದ ಅಡುಗೆಯನ್ನು ಬಡಿಸಿರುತ್ತಾರೆ ಎಂದು ಉಲ್ಲೇಖಿಸುತ್ತಾರೆ. ಇದನ್ನು ನೋಡಿದರೆ ಪುರಾಣದಲ್ಲೂ ಗೋವನ್ನು ಆಹಾರದ ವಸ್ತುವಾಗಿ ಬಳಸುತ್ತಿರುವುದನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಪ್ರಧಾನವಾದ ನಮ್ಮ  ದೇಶದಲ್ಲಿ ಗೋವಿನ ಮಾರಾಟ ಮತ್ತು ನಿಷೇಧ ಕೃಷಿಯ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ ಎಂದರು.

ಜನಾಗ್ರಹ ಚಳವಳಿಯ ನೇತೃತ್ವವನ್ನು ಸಿಪಿಐ ಜಿಲ್ಲಾ ಮುಖಂಡರುಗಳಾದ ವಿ.ಎಸ್.ಬೇರಿಂಜ, ಬಿ.ಶೇಖರ್, ಸುರೇಶ್ ಕುಮಾರ್ ಬಂಟ್ವಾಳ್, ತಾಲೂಕು ಮುಖಂಡರುಗಳಾದ ಕೆ.ತಿಮ್ಮಪ್ಪ, ಕೆ.ಈಶ್ವರ್, ಸುಲೋಚನಾ, ಚಿತ್ರಾಕ್ಷಿ, ಶಿವಪ್ಪ ಕೋಟ್ಯಾನ್, ಸರಸ್ವತಿ, ಬಾಬು ಭಂಡಾರಿ ವಹಿಸಿದ್ದರು.

ಪ್ರಾರಂಭದಲ್ಲಿ ಸಿಪಿಐ ಮುಖಂಡ ಎ.ಪ್ರಭಾಕರ್ ರಾವ್ ಸ್ವಾಗತಿಸಿ ಕೊನೆಯಲ್ಲಿ ವಿ.ಎಸ್.ಬೇರಿಂಜ ವಂದಿಸಿದರು.


Spread the love