ಗ್ರಾಮಲೆಕ್ಕಾಧಿಕಾರಿಗೆ ವೈದ್ಯಾಧಿಕಾರಿಯಿಂದ ಹಲ್ಲೆ: ಕ್ಷಮೆ ಕೇಳುವ ಮೂಲಕ ಪ್ರಕರಣ ಸುಖಾಂತ್ಯ

Spread the love

ಗ್ರಾಮಲೆಕ್ಕಾಧಿಕಾರಿಗೆ ವೈದ್ಯಾಧಿಕಾರಿಯಿಂದ ಹಲ್ಲೆ: ಕ್ಷಮೆ ಕೇಳುವ ಮೂಲಕ ಪ್ರಕರಣ ಸುಖಾಂತ್ಯ

ಕುಂದಾಪುರ: ಗ್ರಾಮಲೆಕ್ಕಾಧಿಕಾರಿಯೋರ್ವರಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯೋರ್ವರು ನಡೆಸಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರ ಮದ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ವೈದ್ಯಾಧಿಕಾರಿ ಕ್ಷಮೆ ಕೇಳುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಬೈಂದೂರು ವ್ಯಾಪ್ತಿಯ ಬಿಜೂರು ಭಾಗದ ಗ್ರಾಮಲೆಕ್ಕಾಧಿಕಾರಿ ಅಂಜನಪ್ಪ ಸೋಗಿ ಕೋವಿಡ್ ಪರೀಕ್ಷೆಗಾಗಿ ಬುಧವಾರ ಮಧ್ಯಾಹ್ನ ಸುಮಾರಿಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ತೆರಳಿದ್ದರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳು ಮಾಹಿತಿ ನೀಡದ ಕಾರಣ ನೇರವಾಗಿ ವೈದ್ಯಾಧಿಕಾರಿ ಮಹೇಂದ್ರ ಶೆಟ್ಟಿಯವರನ್ನು ಭೇಟಿಯಾಗಿ ತಾನು ಗ್ರಾಮ ಲೆಕ್ಕಾಧಿಕಾರಿ ಎಂದು ಪರಿಚಯಿಸಿಕೊಂಡು ಕೋವಿಡ್ ಪರೀಕ್ಷೆ ನಡೆಸಲು ಮನವಿ ಮಾಡಿಕೊಂಡಿದ್ದರು. ಈ ವೇಳೆಯಲ್ಲಿ ವೈದ್ಯಾಧಿಕಾರಿ ಮಹೇಂದ್ರ ಶೆಟ್ಟಿಯವರು ಅವಾಚ್ಯವಾಗಿ ನಿಂದಿಸಿ ಒಳಗೆ ಬರಲು ಅನುಮತಿ ನೀಡಿದವರ್ಯಾರು ಎಂದು ಪ್ರಶ್ನಿಸಿ ಗ್ರಾಮಲೆಕ್ಕಾಧಿಕಾರಿ ಅಂಜನಪ್ಪ ಸೋಗಿಯವರ ಕಾಲರ್ ಪಟ್ಟಿ ಹಿಡಿದು ಹೊರದಬ್ಬಿದ್ದಲ್ಲದೇ ಮೊಬೈಲ್ ಕಸಿದುಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಲೆಕ್ಕಾಧಿಕಾರಿ ಅಂಜಿನಪ್ಪ ಸೋಗಿ ಆರೋಪಿಸಿದ್ದಾರೆ.

ವೈದ್ಯಾಧಿಕಾರಿ ಮಹೇಂದ್ರ ಶೆಟ್ಟಿಯವರ ನಡೆಗೆ ತಾಲೂಕು ಗ್ರಾಮಲೆಕ್ಕಾಧಿಕಾರಿಗಳ ಸಂಘ ತೀವ್ರವಾಗಿ ಖಂಡಿಸಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ವೈದ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲು ಆಗ್ರಹಿಸಿ ಕುಂದಾಫುರ ಸಹಾಯಕ ಆಯುಕ್ತರಿಗೆ ಮನವಿ ನೀಡಿದೆ.

ಪ್ರಕರಣ ಬಗ್ಗೆ ಗುರುವಾರ ಬೆಳಿಗ್ಗೆ ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕುಂದಾಪುರ ಹಾಗೂ ಬೈಂದೂರು ವ್ಯಾಪ್ತಿಯ ಸುಮಾರು ನಲವತ್ತಕ್ಕೂ ಅಧಿಕ ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದು ಘಟನೆಯನ್ನು ಖಂಡಿಸಿದ್ದಾರೆ. ಕೊನೆಗೂ ಸಭೆಯಲ್ಲಿ ವೈದ್ಯಾಧಿಕಾರಿ ಮಹೇಂದ್ರ ಶೆಟ್ಟಿ ಕರ್ತವ್ಯದ ಒತ್ತಡದಿಂದಾಗಿ ಈ ಘಟನೆ ನಡೆದಿದ್ದು, ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಮಹಾಮಾರಿ ಆರಂಭವಾದ ದಿನದಿಂದಲೂ ಟೋಲ್ ಕೇಂದ್ರ, ಹೊರರಾಜ್ಯದಿಂದ ಬಂದವರನ್ನು ಸರ್ಕಾರಿ ಕ್ವಾರಂಟೈನ್ಗೆ ಕಳುಹಿಸುವ ಸೇವೆಯಲ್ಲಿ ಹಗಲುರಾತ್ರಿ ಕೊರೋನಾ ವಾರಿಯರ್ಸ್ ಅಂತೆ ಶ್ರಮಿಸುತ್ತಿರುವ ಬಿಜೂರು ಗ್ರಾಮಲೆಕ್ಕಾಧಿಕಾರಿ ಮೇಲಿನ ಹಲ್ಲೆ ಪ್ರಕರಣ ಎಸಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವೈದ್ಯಾಧಿಕಾರಿ ಕ್ಷಮೆ ಕೇಳುವ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.


Spread the love