ಗ್ರಾಮೀಣ ಕ್ರೀಡೆಗಳೊಂದಿಗೆ ‘ಕೆಸರ್ಡೋಂಜಿ ಗಮ್ಮತ್’ ಸಂಭ್ರಮಿಸಿದ ಕೆಳಾರ್ಕಳಬೆಟ್ಟು ನಾಗರಿಕರು

Spread the love

ಗ್ರಾಮೀಣ ಕ್ರೀಡೆಗಳೊಂದಿಗೆ ‘ಕೆಸರ್ಡೋಂಜಿ ಗಮ್ಮತ್’ ಸಂಭ್ರಮಿಸಿದ ಕೆಳಾರ್ಕಳಬೆಟ್ಟು ನಾಗರಿಕರು

ಉಡುಪಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ವಿಷ್ಣುಮೂರ್ತಿ ನಗರ ಕೆಳಾರ್ಕಳಬೆಟ್ಟು ಮತ್ತು ಯುವಜನ, ಕ್ರೀಡಾ ಇಲಾಖೆಯ ವತಿಯಿಂದ ಕೆಸರ್ಡೋಂಜಿ ಗಮ್ಮತ್ ಸ್ಪರ್ಧೆಗಳು ನಡೆಯಿತು. ಕೆಸರುಗದ್ದೆಯಲ್ಲಿ ಮಕ್ಕಳು, ಮಹಿಳೆಯರು ಹಿರಿಯರೆನ್ನದೆ ಎಲ್ಲರೂ ಆಟವಾಡಿ ಅಪರೂಪದ ಖುಷಿ ಅನುಭವಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ ತೋನ್ಸೆ ಉದ್ಘಾಟಿಸಿ ಕೃಷಿ ಪ್ರಧಾನ ದೇಶದಲ್ಲಿ ಗದ್ದೆಗಳಿಂದ ದೂರ ಸರಿಯುತ್ತಿರುವ ಯುವಕ ಯುವತಿಯರನ್ನು ಸ್ಪರ್ಧೆಯ ನೆಪದಲ್ಲಾದರೂ ಮತ್ತೆ ಗದ್ದೆಗೆ ಇಳಿಸಿ ಅವರಿಗೆ ಮಣ್ಣಿನ ಫಲವತ್ತತೆಯನ್ನು ತಿಳಿಯಪಡಿಸಿ, ಗ್ರಾಮೀಣ ಕ್ರೀಡೆಯ ಸೊಗಡನ್ನು ಎಲ್ಲೆಡೆಗೆ ಪಸರಿಸುವ ಸಮಿತಿಯ ಉದ್ದೇಶವನ್ನು ಶ್ಲಾಘಿಸಿದರು. ನಾವು ಹೋರಾಟ ಮಾಡುವುದಾದಲ್ಲಿ ಮಣ್ಣಿನೊಂದಿಗೆ ಹೋರಾಟ ನಡೆಸಿ ಇದರಿಂದ ಉತ್ತಮ ಫಲವನ್ನು ಪಡೆಯಬೇಕು. ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕ್ರೀಡಾ ಮತ್ತು ಯುವಜನ ಇಲಾಖೆಯ ನಿರ್ದೇಶಕ ಡಾ|ರೋಶನ್ ಕುಮಾರ್ ಶೆಟ್ಟಿ ಮಾತನಾಡಿ ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಪ್ರಚಾರಕ್ಕೆ ತರಲು ಕೆಸರು ಗದ್ದೆ ಕ್ರೀಡೆಗಳು ಅತ್ಯುತ್ತಮ ಸಹಕಾರಿಯಾಗಿದ್ದು ಇದಕ್ಕೆ ಹೆಚ್ಚಿನ ಅನುದಾನ ಲಭಿಸುವಂತೆ ಪ್ರಯತ್ನಪಡುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ರಾವಿಕವಾಗಿ ಮಾತನಾಡಿದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಅವರು ವ್ಯಾಯಾಮ ಶಾಲೆಯ ವತಿಯಿಂದ ಕಳೆದ 5 ವರ್ಷಗಳಿಂದ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಅತೀ ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿದ್ದು, ಇಂದಿನ ಯುವಜನರಿಗೆ ಗ್ರಾಮೀಣ ಸೊಗಡನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ. ಕೇವಲ ಆಟೋಟ ಸ್ಪರ್ಧೆಗೆ ಮಹತ್ವ ನೀಡದೆ ಕೃಷಿಯನ್ನು ಕೂಡ ಉತ್ತೇಜಿಸುವ ಪ್ರಯತ್ನವಾಗಿದ್ದು, ಕೆಸರು ಗದ್ದೆಯಲ್ಲಿ ಆಟವಾಡುವುದರ ಮೂಲಕ ಆರೋಗ್ಯ ವರ್ಧನೆಗೆ ಕೂಡ ಸಹಕಾರಿ. ಈ ಕೆಸರು ಗದ್ದೆಯ ಕ್ರೀಡೆಗೆ ವಿಶೇಷ ನಂಬಿಕೆ ಕೂಡಾ ಜನರಲ್ಲಿದೆ. ವರ್ಷಕ್ಕೊಮ್ಮೆ ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸುವುದರಿಂದ ಮಣ್ಣಿನಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಸ್ಪರ್ಶಿಸುತ್ತದೆ. ಇದರಿಂದ ಚರ್ಮ ವ್ಯಾಧಿಗಳು ಗುಣವಾಗುತ್ತದೆ ಎಂಬ ನಂಬಿಕೆ ಈ ಕ್ರೀಡೆಗೆ ಇನ್ನಷ್ಟು ಮಹತ್ವ ನೀಡಿದೆ ಎಂದರು.

ಪುರುಷರಿಗೆ ವಾಲಿಬಾಲ್, ಕಬ್ಬಡಿ, ಹಗ್ಗ ಜಗ್ಗಾಟ, ಕ್ರಿಕೆಟ್, ರಿಲೇ ರೌಂಡ್ ದ ವಿಕೆಟ್, 100 ಮೀ ಓಟ, ಮೂರು ಕಾಲು ಓಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ಮ್ಯೂಸಿಕಲ್ ಚಯರ್, ರಿಲೇ, ರೌಂಡ್ ದ ವಿಕೇಟ್, 100 ಮೀ ಓಟ, ಮೂರು ಕಾಲು ಓಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಅಲ್ಲದೆ ನಿಧಿ ಹುಡುಕುವುದು ಮತ್ತು ಆದರ್ಶ ದಂಪತಿ ಸ್ಪರ್ಧೆಗಳು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಉದ್ಯಮಿ ಶೇಖರ್ ಜಿ ಕೋಟ್ಯಾನ್ ಮಲ್ಪೆ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಧನಂಜಯ ಕುಂದರ್, ಸ್ಥಳೀಯ ನಾಯಕರಾದ ಮಮತಾ ಶೆಟ್ಟಿ, ಅಣ್ಣಯ್ಯ ಪಾಲನ್, ಅಶ್ವಥ್ ಕೋಟ್ಯಾನ್, ಮಧುಕರ್, ಉದಯ,ಸುಭಾಶ್, ಅನಿಲ್ ಪಾಲನ್ ಇತರರು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ನಡೆಸಲಾಯಿತು.


Spread the love