ಘಾಟಿಯಲ್ಲಿ ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರಕ್ಕೆ ಅಡ್ಡಿ

Spread the love

ಘಾಟಿಯಲ್ಲಿ ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರಕ್ಕೆ ಅಡ್ಡಿ

ಮಂಗಳೂರು: ಸಕಲೇಪುರ -ಸುಬ್ರಹ್ಮಣ್ಯ ನಡುವೆ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದ ನೈರುತ್ಯ ರೈಲ್ವೆ ವಿಭಾಗದಿಂದ ಮಂಗಳೂರು -ಬೆಂಗಳೂರು ನಡುವಿನ ರವಿವಾರ ಮತ್ತು ಸೋಮವಾರದ ಬೆಳಗ್ಗಿನ ರೈಲು ಸಂಚಾರ ರದ್ಧು ಪಡಿಸಿದೆ. ಹಾಗೂ ದಿನ-ರಾತ್ರಿ ಸಂಚಾರದ ಕೆಲವು ರೈಲು ಸಂಚಾರವನ್ನು ಸೇಲಂ ಮೂಲಕ ಪಾಲಕ್ಕಾಡ್ ಮಾರ್ಗದಲ್ಲಿ ಬಲಾವಣೆ ಮಾಡಿ ಸಂಚಾರಕ್ಕೆ ಅನುವು ಮಾಡಿದೆ.

ಸಕಲೇಶಪುರ- ಸುಬ್ರಮಣ್ಯ ರೈಲ್ವೆ ಮಾರ್ಗದ ಸಿರಿಬಾಗಿಲು ಸಮೀಪದ ಮಣಿಬಂಡ ಎಂಬಲ್ಲಿ ಬೃಹತ್ ಗಾತ್ರದ ಬಂಡೆಗಲ್ಲೊಂದು ಹಳಿ ಮೇಲೆ ಉರುಳುವ ಸಾಧ್ಯತೆಯಿದ್ದು, ಇದನ್ನು ಸ್ಫೋಟಿಸಿ ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಪ್ರತಿಕೂಲ ವಾತಾವರಣದಲ್ಲೂ ರೈಲ್ವೆ ಸಿಬ್ಬಂದಿ ಅಪಾಯಕಾರಿ ಬಂಡೆಗಳನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ರೈಲು ಗಾಡಿ ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ (ಗೋಮಟೇಶ್ವರ ಎಕ್ಸಪ್ರೆಸ್) ರವಿವಾರದ ಸಂಚಾರ ರದ್ದುಪಡಿಸಲಾಗಿದೆ. ಅದೇ ರೀತಿ ರೈಲು ಗಾಡಿ ಸಂಖ್ಯೆ 16576 ಮಂಗಳೂರು ಜಂಕ್ಷನ್ – ಯಶವಂತಪುರಕ್ಕೆ ತೆರಳಬೇಕಾಗಿದ್ದ ಸೋಮವಾರದ ಸಂಚಾರವನ್ನುರದ್ದು ಪಡಿಸಲಾಗಿದೆ.

ಶನಿವಾರ ಬೆಂಗಳೂರು-ಕಾರವಾರದ ನಡುವಿನ ರೈಲುಗಾಡಿ ಸಂಖ್ಯೆ 16513 ರೈಲು ರದ್ದು ಪಡಿಸಲಾಗಿದೆ. ಮಂಗಳೂರು ಸೆಂಟ್ರಲ್-ಬೆಂಗಳೂರು ನಡುವೆ ರವಿವಾರ ಸಂಚರಿಸಬೇಕಾಗಿದ್ದ ರೈಲುಗಾಡಿ ಸಂಖ್ಯೆ 16514ನ್ನು ರದ್ದು ಪಡಿಸಲಾಗಿದೆ. ಕಣ್ಣೂರು- ಕಾರವಾರ-ಬೆಂಗಳೂರು ದಿನರಾತ್ರಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಮಂಗಳೂರು -ಸಕಲೇಶಪುರ-ಹಾಸನ-ಮೈಸೂರು ಮಾರ್ಗವಾಗಿ ಸಾಗುವ ಬದಲು ಶನಿವಾರದಂದು ಶೋರ್‌ನೂರು ಜಂಕ್ಷನ್ ಪಾಲಕ್ಕಾಡ್, ಸೇಲಂ, ಜೋಲಾರ್ ಪೆಟ್ಟೈ ಮಾರ್ಗವಾಗಿ ಸಂಚರಿಸಲಿದೆ ಎಂದು ಮೈ ಸೂರು ವಿಭಾಗದ ಪ್ರಕಟಣೆ ತಿಳಿಸಿದೆ.

ಸಕಲೇಶಪುರ – ಸುಬ್ರಹ್ಮಣ್ಯ ನಡುವಿನ ಪ್ರದೇಶದಲ್ಲಿ ಬುಧವಾರದಿಂದ ಆರಂಭಗೊಂಡ ಮಳೆಯಿಂದ ಮಣ್ಣು ಸಡಿಲಗೊಂಡು ಸಿರಬಾಗಿಲು ಎಂಬಲ್ಲಿ ಗುಡ್ಡದಿಂದ ದೊಡ್ಡ ಬಂಡೆ ಕಲ್ಲು ರೈಲ್ವೇ ಹಳಿಯತ್ತ ಜಾರಿದೆ. ಈ ಪ್ರದೇಶದ ಮಣ್ಣು ಮತ್ತು ಕೆಸರು ಹಾಗೂ ಅಪಾಯಕಾರಿ ಬಂಡೆಕಲ್ಲನ್ನು ತೆರವು ಮಾಡುವ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಇಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಬೇಕಾಯಿತು ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.


Spread the love