ಚಿತ್ರದುರ್ಗ| ಡಿವೈಡರ್ ದಾಟಿ ಲಾರಿ ಡಿಕ್ಕಿ; ಅಪಘಾತದ ತೀವ್ರತೆಗೆ ಹೊತ್ತಿ ಉರಿದ ಖಾಸಗಿ ಬಸ್: ಕನಿಷ್ಠ 17 ಸಜೀವ ದಹನ

Spread the love

ಚಿತ್ರದುರ್ಗ| ಡಿವೈಡರ್ ದಾಟಿ ಲಾರಿ ಡಿಕ್ಕಿ; ಅಪಘಾತದ ತೀವ್ರತೆಗೆ ಹೊತ್ತಿ ಉರಿದ ಖಾಸಗಿ ಬಸ್: ಕನಿಷ್ಠ 17 ಸಜೀವ ದಹನ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಲಾರಿ ಮತ್ತು ಸ್ಲೀಪರ್ ಕೋಚ್ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ಲಾರಿಯೊಂದು ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಹೊತ್ತಿ ಉರಿದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಡಿಕ್ಕಿಯ ರಭಸಕ್ಕೆ ಬಸ್ ರಸ್ತೆ ಮಧ್ಯೆಯಲ್ಲೇ ಬೆಂಕಿಗಾಹುತಿಯಾಯಿತು ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿದ ಕಾರಣ ಬಸ್‌ ನೊಳಗಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಪ್ರಾಣ ಕಳೆದುಕೊಂಡಿದ್ದಾರೆ. ಲಾರಿ ಹಿರಿಯೂರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದರೆ, ಬಸ್ ಬೆಂಗಳೂರಿನಿಂದ ಶಿವಮೊಗ್ಗದತ್ತ ಪ್ರಯಾಣಿಸುತ್ತಿತ್ತು. ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಕಂಟೇನರ್ ಲಾರಿ ಚಾಲಕ ಕುಲದೀಪ್ ಮೃತಪಟ್ಟಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, 32 ಆಸನಗಳ ಸಾಮರ್ಥ್ಯದ ಬಸ್‌ನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. ಇವರಲ್ಲಿ 15 ಮಹಿಳೆಯರು ಮತ್ತು 14 ಪುರುಷರು ಸೇರಿದ್ದಾರೆ. ಹೆಚ್ಚಿನ ಪ್ರಯಾಣಿಕರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದವರಾಗಿದ್ದು, ಉಳಿದವರು ಕುಮಟಾ ಮತ್ತು ಶಿವಮೊಗ್ಗದವರು. ಬಸ್ ಚಾಲಕ, ನಿರ್ವಾಹಕ ಸೇರಿದಂತೆ ಕೆಲವರು ಸಮಯಪ್ರಜ್ಞೆಯಿಂದ ಬಸ್‌ನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಸುಮಾರು 30 ಕಿಲೋಮೀಟರ್‌ವರೆಗೆ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love
Subscribe
Notify of

0 Comments
Inline Feedbacks
View all comments