ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

Spread the love

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

– ಬಾಣಸವಾಡಿಯಲ್ಲಿ ರೈಲ್ವೆ ಅಂಡರ್‌ಪಾಸ್ ಬಳಿ ಒಳಚರಂಡಿ ಸಮಸ್ಯೆ ಪರಿಶೀಲನೆ

– ಸರ್ವರನ್ನೂ ಒಳಗೊಳ್ಳುವ ಕ್ರೀಡಾ ಸೌಕರ್ಯ ನಿರ್ಮಾಣಕ್ಕೆ ಸರ್ವಜ್ಞನಗರ ಸಜ್ಜು

ಬೆಂಗಳೂರು,ಮೇ 20,2026: ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಸಹಕರಿಸಿ, ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದ್ದಾರೆ.

ಸರ್ವಜ್ಞನಗರ ಶಾಸಕರೂ ಆಗಿರುವ ಸಚಿವರಾದ ಕೆ.ಜೆ.ಜಾರ್ಜ್ ಅವರು ಬುಧವಾರ ಕ್ಷೇತ್ರದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪದಲ್ಲೇ ಕೆ-ರೈಡ್ ವತಿಯಿಂದ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ತೆರಳಿ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪದಲ್ಲೇ ಕೆ-ರೈಡ್ ವತಿಯಿಂದ ಕೈಗೊಂಡಿರುವ ಕಾಮಗಾರಿ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಕಾಮಗಾರಿಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ಇದೇ ವೇಳೆ ರೈಲ್ವೆ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಇದರಿಂದ ನಮ್ಮ ಕೆಲಸಗಳಿಗೆ ಅಡಚಣೆ ಆಗುತ್ತಿದೆ ಎಂದು ಜಿಬಿಎ ಅಧಿಕಾರಿಗಳು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್, “ನೀವು ಅಧಿಕಾರಿಗಳು ಎಲ್ಲಿದ್ದರೂ ಸಂಬಳ ಬರುತ್ತದೆ. ಜನರ ಪರವಾಗಿ ಮಾನವೀಯತೆಯಿಂದ ಸ್ಪಂದಿಸಿ ಕೆಲಸ ಮಾಡಿ. ಜಿಬಿಎ ಅಧಿಕಾರಿಗಳ ಜೊತೆಗೂಡಿ ಕೆಲಸ ನಿರ್ವಹಿಸಿ,” ಎಂದು ರೈಲ್ವೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

“ಸದ್ಯದಲ್ಲೇ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರು ಸರ್ವಜ್ಞನಗರ ಕ್ಷೇತ್ರಕ್ಕೆ ಬರುತ್ತಾರೆ. ನಮ್ಮ ಅಧಿಕಾರಿಗಳು ಸಮಸ್ಯೆಯ ಕುರಿತು ವಿವರ ನೀಡುತ್ತಾರೆ. ರೈಲ್ವೆ ಉನ್ನತಾಧಿಕಾರಿಗಳು ಬಂದು ಉತ್ತರಿಸಿ, ಸಮಸ್ಯೆ ಬಗೆಹರಿಸಲಿ. ನಮ್ಮ ಜನರಿಗೆ ಯಾವುದೇ ಸಮಸ್ಯೆ ಆಗಬಾರದು, ನಾವು ಜನರಿಗಾಗಿ, ಜನರ ಘನತೆಯ ಬದುಕಿಗಾಗಿ ಕೆಲಸ ಮಾಡಬೇಕು ನಮ್ಮ ಧ್ಯೇಯವೂ ಅದೇ ನಮ್ಮ ಬದ್ಧತೆಯೂ ಅದೇ ಆಗಿದೆ,” ಎಂದರು.

ಜಾಗತಿಕ ಗುಣಮಟ್ಟದ ಕ್ರೀಡಾ ಮೂಲಸೌಕರ್ಯಕ್ಕೆ ಮುನ್ನುಡಿ:

ಬಾಣಸವಾಡಿಯಲ್ಲಿ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಆಡಿಟೋರಿಯಂ ನಿರ್ಮಾಣ ಹಾಗೂ ಕಾಚರಕನಹಳ್ಳಿಯ ಕೆರೆ ಆವರಣದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ದಿಗೆ ಸಚಿವ ಕೆ.ಜೆ.ಜಾರ್ಜ್ ಗುದ್ದಲಿ ಪೂಜೆ ನೆರವೇರಿಸಿದರು. ಹೆಣ್ಣೂರು 80 ಅಡಿ ರಸ್ತೆಯ ವೈಟ್‌ ಟಾಪಿಂಗ್ ಕಾಮಗಾರಿ ವೇಗವಾಗಿ ಕೈಗೊಳ್ಳುವಂತೆಯೂ ಸೂಚನೆ ನೀಡಿದರು ಹಾಗೂ ನಾಗವಾರ ನಂದ ಗೋಕುಲ ಬಡಾವಣೆ ಹಾಗೂ ಜೈಭಾರತ್ ನಗರದ ಮಾರುತಿ ಸೇವಾನಗರದಲ್ಲಿ ಮಳೆ ಚರಂಡಿಗಳ ಪರಿಶೀಲನೆ ನಡೆಸಿದರು.

ಮಂಗಳವಾರ ನಿಧನರಾದ ಮಾರುತಿ ಸೇವಾನಗರ ವಾರ್ಡ್‌ನ ಮಾಜಿ ಕಾರ್ಪೊರೇಟರ್ ದಿವಂಗತ ಕೆ.ಬಿ. ಮೋಹನ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವ ಜಾರ್ಜ್, ಕುಟುಂಬ ಮತ್ತು ಸ್ನೇಹಿತರಿಗೆ ಸಾಂತ್ವನ ಹೇಳಿದರು. ಕೆ.ಬಿ. ಮೋಹನ್ ಅವರ ಸಾರ್ವಜನಿಕ ಸೇವೆ ಮತ್ತು ಕಾಂಗ್ರೆಸ್ ಮೌಲ್ಯಗಳಿಗೆ ತೋರುತ್ತಿದ್ದ ಬದ್ಧತೆಗೆ ಮೆಚ್ಚಿದರು ಸದಾಕಾಲ ಮೋಹನ್ ಅವರ ಸೇವಾಕಾರ್ಯಗಳು ಜನಮಾನಸದಲ್ಲಿ ಶಾಶ್ವತವಾಗಿರಲಿದೆ ಎಂದು ತಿಳಿಸಿದರು.


ಸಚಿವರ ಕ್ಷೇತ್ರ ಪ್ರವಾಸದ ವೇಳೆ ಹೆಣ್ಣೂರು, ಬಾಣಸವಾಡಿ, ಹೆಚ್‌ಬಿಆರ್‌, ಮಾರುತಿಸೇವಾನಗರ ಕೆ.ಜಿ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹೆಚ್‌.ಎ.ಪುಲಿಕೇಶಿ, ಸಯ್ಯದ್ ಕಲೀಂ, ರಘುದೇವರಾಜ್, ಸುಮಿತ್ರಾ ಮುನಿರಾಜು, ಸಚಿವರ ವಿಶೇಷಾಧಿಕಾರಿಗಳಾದ ಸುರೇಶ್, ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಮೋಹನ್ ಮೆನನ್ ಹಾಗು ವಿವಿಧ ಮುಖಂಡರು, ಜಿಬಿಎ, ಬೆಂಗಳೂರು ಒಳಚಂಡಿ ಮತ್ತು ಜಲಮಂಡಳಿ ಹಾಗೂ ಬೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments