ಜನಸಂಖ್ಯೆಯಲ್ಲಿ ದೇಶ ನಂಬರ್ ಒನ್. ಒಲಂಪಿಕ್ ಪದಕದಲ್ಲೂ ನಂಬರ್ ಒನ್ ಆಗಬೇಕು: ಸಿ.ಎಂ ಸಿದ್ದರಾಮಯ್ಯ ಕರೆ
ಮಂಗಳೂರು: ಜನಸಂಖ್ಯೆಯಲ್ಲಿ ದೇಶ ನಂಬರ್ ಒನ್. ಒಲಂಪಿಕ್ ಪದಕದಲ್ಲೂ ನಂಬರ್ ಒನ್ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ನ್ಯೂ ಉರ್ವ ಕ್ರೀಡಾಂಗಣದಲ್ಲಿ ನಡೆದ “ಚೀಫ್ ಮಿನಿಸ್ಟರ್ – ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಪಂದ್ಯಾವಳಿ”ಯನ್ನು ಉದ್ಘಾಟಿಸಿ ಮಾತನಾಡಿದರು.
ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ಸೇರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದವರಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಎ ಗುಂಪಿನ ಹುದ್ದೆಗಳ ಜೊತೆಗೆ ಇತರೆ ಹುದ್ದೆಗಳನ್ನೂ ಮೀಸಲಿಟ್ಟಿದ್ದೇವೆ.

DySP ಸೇರಿ ಇತರೆ ಪೊಲೀಸ್ ಹುದ್ದೆಗಳಲ್ಲೂ ಶೇ2 ರಷ್ಟಿದ್ದ ಹುದ್ದೆ ಮೀಸಲಾತಿಯನ್ನು ಶೇ3 ಕ್ಕೆ ಹೆಚ್ವಿಸಿದ್ದೇವೆ. ಜೊತೆಗೆ ಒಲಂಪಿಕ್ ನಲ್ಲಿ ಪದಕ ತಂದು ರಾಜ್ಯದ, ರಾಷ್ಟ್ರದ ಕೀರ್ತಿ ಹೆಚ್ಚಿಸುವವರಿಗೆ 5 ಕೋಟಿ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದೇನೆ. ಇನ್ನೂ ಅಗತ್ಯವಾದ ಅನುಕೂಲಗಳನ್ನೆಲ್ಲಾ ಮಾಡಿಕೊಡಲು ಸರ್ಕಾರ ಸಿದ್ಧವಿದೆ. ಒಟ್ಟಿನಲ್ಲಿ ನೀವು ಪದಕ ತನ್ನಿ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ವಿಶ್ವದ ಅತ್ಯಂತ ಜನಪ್ರಿಯ ಆಟಗಳಲ್ಲಿ ಬ್ಯಾಂಡ್ಮಿಂಟನ್ ಕೂಡ ಒಂದು. ಪ್ರಕಾಶ್ ಪಡುಕೋಣೆ, ಪುಲ್ಲೇಲ ಗೋಪಿಚಂದ್, ಸೈನಾ ನೆಹ್ವಾಲ್, ಪಿ.ವಿ.ಸಿಂಧು ಭಾರತೀಯ ಬ್ಯಾಡ್ಮಿಂಟನ್ ಗೆ ಅಡಿಪಾಯ ಹಾಕಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದರು.

ಈ ಪಂದ್ಯಾವಳಿ ನಡೆಯುತ್ತಿರುವ ಈ ಉರ್ವ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ಮಾಡಿದ್ದು ನಾನೇ, ಉದ್ಘಾಟನೆ ಕೂಡ ನಾನೇ ಮಾಡಿದೆ. ನಮ್ಮ ಸರ್ಕಾರದ್ದೇ ಹಣ. ಹಿಂದಿನ ಬಿಜೆಪಿ ಸರ್ಕಾರ ಈ ಕ್ರೀಡಾಂಗಣ ಪೂರ್ಣಗೊಳ್ಳಲು ಸಹಕಾರ ನೀಡಲಿಲ್ಲ. ಆದರೆ ಮತ್ತೆ ನಾನೇ ಮುಖ್ಯಮಂತ್ರಿ ಆಗಿ ಬಂದು ಒಟ್ಟು 38 ಕೋಟಿ ರೂಪಾಯಿಗಳನ್ನು ನೀಡಿ ಕ್ರೀಡಾಂಗಣ ಪೂರ್ಣಗೊಳಿಸಲಾಯಿತು ಎಂದು ವಿವರಿಸಿದರು.













