ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ- ಅಪರ ಜಿಲ್ಲಾಧಿಕಾರಿ

Spread the love

ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ- ಅಪರ ಜಿಲ್ಲಾಧಿಕಾರಿ

ಮಂಗಳೂರು: ಲಸಿಕಾ ಅಭಿಯಾನದಲ್ಲಿ ಎಲ್ಲಾ ಜಾನುವಾರು ಮಾಲೀಕರು ತಮ್ಮ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆಯನ್ನು ಹಾಕಿಸಿ, ದೇಶವನ್ನು ಕಾಲು ಬಾಯಿ ಜ್ವರ ರೋಗದಿಂದ ಮುಕ್ತಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಜು.ಕೆ ಹೇಳಿದ್ದಾರೆ.

ಅವರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 8 ನೇ ಸುತ್ತಿನ ಕಾಲು ಬಾಯಿ ಜ್ವರದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 8 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ನವೆಂಬರ್ 3 ರಿಂದ ಪ್ರಾರಂಭವಾಗಲಿದ್ದು, ಜಿಲ್ಲೆಯಾದ್ಯಂತ 8ನೇ ಸುತ್ತಿನ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಕಾಲು ಬಾಯಿ ಜ್ವರ ದನ, ಎಮ್ಮೆ, ಹಂದಿ, ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ ಮುಂತಾದ ಪ್ರಾಣಿಗಳಿಗೆ ವೈರಾಣುವಿನಿಂದ ಬರುವ ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಅತೀ ಬೇಗನೆ ಒಂದು ರಾಸುವಿನಿಂದ ಇನ್ನೊಂದಕ್ಕೆ ನೇರ ಸಂಪರ್ಕ ಹಾಗೂ ಗಾಳಿಯ ಮೂಲಕ ಹರಡುತ್ತದೆ. ಈ ರೋಗವನ್ನು ನಿಯಂತ್ರಿಸಲು ಲಸಿಕೆ ನೀಡುವುದೊಂದೇ ಪರಿಹಾರವಾಗಿದ್ದು, ಪ್ರತೀ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ ತಮ್ಮ ಜಾನುವಾರುಗಳನ್ನು ರೋಗದಿಂದ ರಕ್ಷಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಜಾನುವಾರು ನಿಯಂತ್ರಣ ಕಾರ್ಯಕ್ರಮದಡಿ 7 ಸುತ್ತಿನಲ್ಲಿ ಲಸಿಕೆ ಹಾಕಲಾಗಿದ್ದು, ಯಾವುದೇ ರೋಗೋದ್ರೇಕಗಳು ಕಂಡುಬಂದಿರುವುದಿಲ್ಲ. ಇಲಾಖೆಯ ಅಧಿಕಾರಿ, ಸಿಬ್ಬಂದಿ, ಹಾಲು ಉತ್ಪಾದಕರ ಸಂಘದ ಕೃತಕ ಗರ್ಭಧಾರಣಾ ಕಾರ್ಯಕರ್ತರು ಹಾಗೂ ತರಬೇತಿ ಹೊಂದಿರುವ ಪಶು ಸಖಿಯರ ಮುಖಾಂತರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಜಿಲ್ಲೆಗೆ ಅಗತ್ಯವಿರುವ ಲಸಿಕೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ದಾಸ್ತಾನಿನಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು.

ಅಭಿಯಾನದ ಬಗ್ಗೆ ಪ್ರಚಾರ ಸಾಮಾಗ್ರಿಗಳನ್ನು ಅಪರ ಜಿಲ್ಲಾಧಿಕಾರಿಗಳು ಸಮಿತಿಯ ಇತರ ಸದಸ್ಯರೊಂದಿಗೆ ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಕಛೇರಿಯ ತಾಂತ್ರಿಕ ಸಹಾಯಕ ನಿರ್ದೇಶಕ ಡಾ.ವಸಂತ್ ಕುಮಾರ್ ಶೆಟ್ಟಿ ಹಾಗೂ ಸಮಿತಿಯ ಸದಸ್ಯರುಗಳು ಹಾಜರಿದ್ದರು.


Spread the love
Subscribe
Notify of

0 Comments
Inline Feedbacks
View all comments