ಜಿಲ್ಲಾಡಳಿತ ಮರಳುಗಾರಿಕೆಗೆ ಅನುಮತಿ; ಬಿಜೆಪಿ ಪ್ರತಿಭಟನೆಗೆ ಸಂದ ಜಯ – ರಘುಪತಿ ಭಟ್

Spread the love

ನಿರಾಕರಿಸಲ್ಪಟ್ಟ 45 ಮಂದಿಗೆ ಜಿಲ್ಲಾಡಳಿತ ಮರಳುಗಾರಿಕೆಗೆ ಅನುಮತಿ; ಬಿಜೆಪಿ ಪ್ರತಿಭಟನೆಗೆ ಸಂದ ಜಯ – ರಘುಪತಿ ಭಟ್

ಉಡುಪಿ: ಮರಳುಗಾರಿಕೆಗೆ ರಾಜಕೀಯ ಕಾರಣಗಳಿಗಾಗಿ ಅನುಮತಿ ನಿರಾಕರಿಸಲ್ಪಟ್ಟ 45 ಮಂದಿಗೆ ಜಿಲ್ಲಾಡಳಿತ ಜಿಲ್ಲಾ ಮರಳು ಸಮಿತಿಯ ಸಭೆಯಲ್ಲಿ ಅನುಮತಿ ನೀಡಿರುವುದು ಬಿಜೆಪಿ ಪ್ರತಿಭಟನೆಗೆ ಸಂದ ಜಯ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ರಘುಪತಿ ಭಟ್ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಪರಿಹಾರ ಕಾಣದೆ ಇದ್ದ ಉಡುಪಿ ಜಿಲ್ಲೆಯ ಮರಳುಗಾರಿಕೆ ಸಮಸ್ಯೆಗೆ ಪರಿಹಾರ ದೊರಕಿದೆ. ಬಿಜೆಪಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 30 ರಂದು ನಡೆದ ಹೋರಾಟ, ಪ್ರತಿಭಟನೆ ಮತ್ತು ಪಾದಯಾತ್ರೆಯ ಫಲವಾಗಿ ಜಿಲ್ಲಾಡಳಿತವು ಕೊನೆಗೂ ಮರಳುಗಾರಿಕೆಗೆ ಅನುಮತಿಯನ್ನು ನೀಡಿದೆ. 168 ಜನರಿಗೆ ಮರಳುಗಾರಿಕೆಯ ಅನುಮತಿ ದೊರಕಿದ್ದು, ಇದರಲ್ಲಿ ರಾಜಕೀಯ ಕಾರಣಗಳಿಂದಾಗಿ ಮೊದಲು ಅನುಮತಿ ನಿರಾಕರಿಸಲ್ಪಟ್ಟಿದ್ದ 45 ಮಂದಿಗೂ ಮರಳುಗಾರಿಕೆಯ ಅನುಮತಿಯನ್ನು ನೀಡಲಾಗಿದೆ.

ಒಂದು ವೇಳೆ, ಬಿಜೆಪಿ ಉಡುಪಿ ಜಿಲ್ಲಾ ಘಟಕವು ಹೋರಾಟವನ್ನು ಮಾಡದೇ ಇದ್ದಲ್ಲಿ, ಈ 45 ಜನರು ಕೋರ್ಟಿಗೆ ಹೋಗುವ ಸಾಧ್ಯತೆಯಿದ್ದುದರಿಂದ ಈ ಮರಳುಗಾರಿಕೆ ಸಮಸ್ಯೆಯು ಮತ್ತ್ತಷ್ಟು ಉಲ್ಬಣಗೊಂಡು, ಸಮಸ್ಯೆಯು ಮತ್ತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇತ್ತು. ನಮ್ಮ ಹೋರಾಟದ ಫಲವಾಗಿ, ಇಂದು ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಮರಳಿಗೆ ಸಂಬಂಧಪಟ್ಟ ಸಭೆಯಲ್ಲಿ ಮರಳುಗಾರಿಕೆಗೆ ಅನುಮತಿ ದೊರಕಿದೆ .

ಆಗಸ್ಟ್ 30 ರಂದು ಡಿಸಿ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ನಮ್ಮ ಬೇಡಿಕೆಯನ್ನು ಮೂರು ದಿನಗಳಲ್ಲಿ ಈಡೇರಿಸುವ ಭರವಸೆಯನ್ನು ನೀಡಿದ್ದು, ಅದರಂತೆ ಇಂದು ನಡೆದ ಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿಯನ್ನು ನೀಡಿರುತ್ತಾರೆ.  ಜಿಲ್ಲಾಧಿಕಾರಿಗಳಿಗೆ ಮತ್ತು  ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ನಾವು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ಇದು ಬಿಜೆಪಿ ಉಡುಪಿ ಜಿಲ್ಲ್ಲಾ ಘಟಕಕ್ಕೆ ಸಂದ ಜಯ ಎಂದು ತಿಳಿಸಿದ್ದಾರೆ.


Spread the love