ಜಿಲ್ಲಾಸ್ಪತ್ರೆ 108 ಆಂಬ್ಯುಲೆನ್ಸ್ ಸೇವೆ ವ್ಯತ್ಯಯ ತಕ್ಷಣ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಉಡುಪಿ ನಗರ ಬಿಜೆಪಿ ಆಗ್ರಹ
ಉಡುಪಿ: ನಗರ ಬಿಜೆಪಿ ಮಂಡಲ ವತಿಯಿಂದ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 108 ಆಂಬ್ಯುಲೆನ್ಸ್ ಸೇವೆ ವ್ಯತ್ಯಯದಿಂದ ರೋಗಿಯನ್ನು ಗೂಡ್ಸ್ ವಾಹನದಲ್ಲಿ ಕರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಲಾಯಿತು.

ರಾಜ್ಯ ಕಾಂಗ್ರೆಸ್ ಸರ್ಕಾರ ಉಡುಪಿ ಜಿಲ್ಲೆಯನ್ನು ಸದಾ ನಿರ್ಲಕ್ಷ್ಯವಹಿಸುತ್ತಿದ್ದು, ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡದೇ ನೂತನ ಜಿಲ್ಲಾಸ್ಪತ್ರೆ ಇನ್ನೂ ಉಡುಪಿ ಜನತೆಗೆ ಮರೀಚಿಕೆಯಾಗಿದೆ.
ರಾಜ್ಯ ಸರ್ಕಾರ ತಕ್ಷಣ 108 ತುರ್ತು ಸೇವೆಯನ್ನು ಪುನರ್ ಆರಂಭಿಸಬೇಕು ಹಾಗೂ ಉಡುಪಿ ಶಾಸಕರ ಆಗ್ರಹದಂತೆ ಜನವರಿ 15 ರೊಳಗೆ ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಉಡುಪಿ ನಗರ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ವೇಳೆ ಬಿಜೆಪಿ ಮುಖಂಡರಾದ ಕಿರಣ್ ಕುಮಾರ್, ಗಿರೀಶ್ ಅಂಚನ್, ರಶ್ಮಿತಾ ಬಾಲಕೃಷ್ಣ, ಗುರುರಾಜ್ ಭಂಡಾರಿ, ನಿತಿನ್ ಪೈ, ಧನುಶ್ ಬಿಕೆ ಹಾಗೂ ಇತರರು ಉಪಸ್ಥಿತರಿದ್ದರು.












