ಜಿಲ್ಲಾ ಪೊಲೀಸ್ ವತಿಯಿಂದ ಗೋಕಳ್ಳತನ ಹಾಗೂ ಅಕ್ರಮ ಗೋಸಾಟ ಪ್ರಕರಣದಲ್ಲಿ ಭಾಗಿಯಾದವರ ಪರೇಡ್

Spread the love

ಜಿಲ್ಲಾ ಪೊಲೀಸ್ ವತಿಯಿಂದ ಗೋಕಳ್ಳತನ ಹಾಗೂ ಅಕ್ರಮ ಗೋಸಾಟ ಪ್ರಕರಣದಲ್ಲಿ ಭಾಗಿಯಾದವರ ಪರೇಡ್

ಉಡುಪಿ/ಕುಂದಾಪುರ/ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ದಾಖಲಾದ ಗೋಕಳ್ಳತನ ಹಾಗೂ ಅಕ್ರಮ ಗೋಸಾಟ ಪ್ರಕರಣಗಳಲ್ಲಿ ಭಾಗಿಯಾದ ಎಂ.ಒ.ಬಿ. ಹಾಳೆ ಹೊಂದಿರುವ ಆಸಾಮಿಗಳ ಪರೇಡನ್ನು ಉಪವಿಭಾಗವಾರು ನಡೆಸಲಾಯಿತು. ಕುಂದಾಪುದ ಉಪವಿಭಾಗದ ಎಂ.ಒ.ಬಿ. ಪರೇಡನ್ನು ಕುಂದಾಪುರದ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರಾದ ನಿಶಾ ಜೇಮ್ಸ್, ಕುಂದಾಪುರ ಪೊಲೀಸ್ ಉಪವಿಭಾಗಾಧಿಕಾರಿ ಬಿ.ಪಿ. ದಿನೇಶ್ ಕುಮಾರ್ ಮತ್ತು ಕುಂದಾಪುರ ಉಪವಿಭಾಗದ ಪೊಲೀಸ್ ಅಧಿಕಾರಿಯವರು ಭಾಗವಹಿಸಿದ್ದರು. ಈ ಪರೇಡ್‌ನಲ್ಲಿ ಉಪವಿಭಾಗದ ಠಾಣೆಗಳಾದ ಕುಂದಾಪುರದಿಂದ 15 ಜನ, ಕುಂದಾಪುರ ಗ್ರಾಮಾಂತರದಿಂದ 14 ಜನ, ಬೈಂದೂರಿನಿಂದ 6 ಜನ, ಶಂಕರನಾರಾಯಣದಿಂದ 5 ಜನ, ಕೊಲ್ಲೂರು ಮತ್ತು ಗಂಗೊಳ್ಳಿಯಿಂದ ತಲಾ 4 ಜನ ಹಾಗೂ ಅಮಾಸೆಬೈಲು ಠಾಣಾ ವ್ಯಾಪ್ತಿಯಿಂದ ಇಬ್ಬರು ಒಟ್ಟು 50 ಜನ ಎಂ.ಒ.ಬಿ.ದಾರರು ಭಾಗವಹಿಸಿರುತ್ತಾರೆ.

ಉಡುಪಿ ಉಪವಿಭಾಗದ ಎಂ.ಒ.ಬಿ.ದಾರರ ಪರೇಡನ್ನು ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ.ಆರ್.ಜೈಶಂಕರ್‌ರವರ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ, ಉಡುಪಿರವರ ಕಛೇರಿ ಆವರಣದಲ್ಲಿ ನಡೆಸಲಾಯಿತು. ಸದ್ರಿ ಪರೇಡ್‌ನಲ್ಲಿ ಉಪವಿಭಾಗದ ಪೊಲೀಸ್ ಅಧಿಕಾರಿಯವರು ಭಾಗವಹಿಸಿದ್ದರು. ಸದ್ರಿ ಪರೇಡ್‌ನಲ್ಲಿ ಕೋಟಾ ಠಾಣೆಯಿಂದ 11 ಜನ, ಹಿರಿಯಡ್ಕ ಠಾಣೆಯಿಂದ 10 ಜನ, ಮಲ್ಪೆ ಠಾಣೆಯಿಂದ 7 ಜನ ಹಾಗೂ ಬ್ರಹ್ಮಾವರ ಠಾಣಾ ಸರಹದ್ದಿನಿಂದ 4 ಜನ ಒಟ್ಟು 32 ಜನ ಎಂ.ಒ.ಬಿ.ದಾರರು ಭಾಗವಹಿಸಿರುತ್ತಾರೆ.

ಕಾರ್ಕಳ ಉಪವಿಭಾಗದ ಎಂ.ಒ.ಬಿ.ದಾರರ ಪರೇಡನ್ನು ಕಾರ್ಕಳ ಪೊಲೀಸ್ ಉಪವಿಭಾಗ ಕಛೇರಿಯ ಮುಂಭಾಗದಲ್ಲಿ ನಡೆಸಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಕಾರ್ಕಳ ಪೊಲೀಸ್ ಉಪವಿಭಾಗಾಧಿಕಾರಿ ಪಿ. ಕೃಷ್ಣಕಾಂತ್ ಮತ್ತು ಕಾರ್ಕಳ ಉಪವಿಭಾಗದ ಪೊಲೀಸ್ ಅಧಿಕಾರಿಯವರು ಭಾಗವಹಿಸಿದ್ದರು. ಈ ಪರೇಡ್‌ನಲ್ಲಿ ಉಪವಿಭಾಗದ ಠಾಣೆಗಳಾದ ಕಾರ್ಕಳ ನಗರದಿಂದ 7 ಜನ, ಕಾರ್ಕಳ ಗ್ರಾಮಾಂತರದಿಂದ 14 ಜನ, ಹೆಬ್ರಿಯಿಂದ 15 ಜನ, ಅಜೆಕಾರಿನಿಂದ 8 ಜನ, ಕಾಪುವಿನಿಂದ 9 ಜನ, ಪಡುಬಿದ್ರಿಯಿಂದ 10 ಜನ ಹಾಗೂ ಶಿರ್ವಾ ಠಾಣಾ ವ್ಯಾಪ್ತಿಯಿಂದ 12 ಜನ ಒಟ್ಟು 75 ಜನ ಎಂ.ಒ.ಬಿ.ದಾರರು ಭಾಗವಹಿಸಿರುತ್ತಾರೆ.

ಪರೇಡ್‌ನಲ್ಲಿ ಭಾಗಿಯಾದ ಎಂ.ಒ.ಬಿ.ದಾರರಿಗೆ ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದಾಗಿ ಸೂಚಿಸಿ, ಮುಂದುವರೆಸಿದಲ್ಲಿ ಗಡಿಪಾರು / ಗೂಂಡಾ ಕಾಯ್ದೆಯನ್ವಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಅಲ್ಲದೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಸನ್ನಡತೆಗಾಗಿ ತಾಲೂಕು ದಂಡಾಧಿಕಾರಿಯವರಿಗೆ ಈಗಾಗಲೇ ವರದಿ ಸಲ್ಲಿಸಿದ್ದು, ಅಧಿಕ ಮೊತ್ತದ ಬಾಂಡ್ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಲಾಗಿದೆ. ಕಳೆದ ತಿಂಗಳಿನಲ್ಲಿ ಎಂ.ಒ.ಬಿ.ದಾರರ ಪರೇಡನ್ನು ಠಾಣಾವಾರು ನಡೆಸಲಾಗಿತ್ತು.


Spread the love