ಜಿಲ್ಲೆಯ ಅಕ್ರಮ ಮರಳುಗಾರಿಕೆ ಮಟ್ಟಹಾಕುವುದೇ ನನ್ನ ಗುರಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

Spread the love

ಜಿಲ್ಲೆಯ ಅಕ್ರಮ ಮರಳುಗಾರಿಕೆ ಮಟ್ಟಹಾಕುವುದೇ ನನ್ನ ಗುರಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಉಡುಪಿ: ಜಿಲ್ಲೆಯಲ್ಲಿ ಇರುವ ಎಲ್ಲಾ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದೆ ನನ್ನ ಪ್ರಮುಖ ಗುರಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿ ಸಂಕೀರ್ಣದ ಮುಂಬಾಂಗದಲ್ಲಿ ಸುಮಾರು 2000 ಕ್ಕೂ ಅಧಿಕ ಸರಕಾರಿ ನೌಕರರು ಜಿಲ್ಲಾಧಿಕಾರಿ, ಕುಂದಾಪುರ ಸಹಾಯಕ ಕಮೀಷನರ್ ಹಾಗೂ ಇತರರ ಮೇಲೆ ನಡೆದ ಕೊಲೆ ಯತ್ನ ಖಂಡಿಸಿ ಆಯೋಜಿಸಿ ಒಂದು ದಿನದ ಮುಷ್ಕರದಲ್ಲಿ ಮನವಿ ಸ್ವೀಕರಿಸಲು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊನ್ನೆಯ ಘಟನೆಯಿಂದ ನಾನು ಯಾವುದೇ ರೀತಿಯಿಂದ ಎದೆಗುಂದಿಲ್ಲ, ಜಿಲ್ಲೆಯ ಮಾಧ್ಯಮ ಮಿತ್ರರು ಹಗಲು ರಾತ್ರಿಯೆನ್ನದೆ ನನ್ನೊಂದಿಗೆ ನಿಂತು ತೋರಿಸಿದ ಬೆಂಬಲ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಪಕ್ಷ ಬೇಧ ಮರೆತು ತೋರಿಸಿದ ಪ್ರೀತಿ, ಜನತೆಯ ಪ್ರೋತ್ಸಾಹ ಅದರಲ್ಲೂ ನನ್ನ ಸರಕಾರಿ ಸಹದ್ಯೋಗಿ ನೌಕರ  ಭಾಂಧವರು ತೋರಿಸಿದ ಅಭೂತಪೂರ್ವ ಬೆಂಬಲ ನನಗೆ ಇನ್ನೂ ಹೆಚ್ಚು ಕ್ರೀಯಾಶೀಲವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮ ಮರಳುಗಾರಿಕೆಯ ಮೂಲಕ ಜಿಲ್ಲೆಯ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದು ಅದಕ್ಕೆ ನಾನು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಎಂದಿಗೂ ಅವಕಾಶ ನೀಡುವುದಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಬರುತ್ತದೋ ಅಲ್ಲಿ ಎಲ್ಲಾ ಕಡೆಗೂ ಹೋಗಿ ಧಾಳಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪೋಲಿಸ್ ಇಲಾಖೆಯ ಸಹಕಾರವನ್ನು ಪಡೆದೇ ಮಾಡುತ್ತೇನೆ ಅದಕ್ಕಾಗಿ ವಿಶೇಷ ಸ್ಕ್ವಾಡ್ ರಚಿಸಿ ಅದರ ಮೂಲಕ ಧಾಳಿ ನಡೆಸಿ ಅಕ್ರಮ ಮರಳುಗಾರಿಕೆಯನ್ನು ಮಟ್ಟಹಾಕುವುದೇ ನನ್ನ ಮುಂದಿನ ಗುರಿಯಾಗಿದೆ.

ಮೊನ್ನೆಯ ದಿನ ನಡೆದ ಘಟನೆಗೆ ಸಂಭಂಧಿಸಿ ನನ್ನ ಮೇಲಾಧಿಕಾರಿಗಳು ನನ್ನಿಂದ ವರದಿ ಕೇಳಿದ್ದು ಈಗಾಗಲೇ ನಾನು ಅದನ್ನು ಅವರಿಗೆ ಕಳುಹಿಸಿದ್ದು, ಪ್ರಕರಣಕ್ಕೆ ಸಂಭಂಧಿಸಿ ಪೋಲಿಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನನ್ನ ಗನ್ ಮ್ಯಾನ್ ವಿರುದ್ದ ಹಾಗೂ ನನ್ನ ವಿರುದ್ದ ಕೌಂಟರ್ ಕೇಸು ದಾಖಲಾಗಿದೆ ಆದು ಉದ್ದೇಶಪೂರ್ವಕವಾಗಿ ದಾಖಲಾಗಿದೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ ಆದರೆ ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೂವುದಿಲ್ಲ ಪೋಲಿಸರು ಅದರ ಕುರಿತು ತನಿಖೆ ನಡೆಸಲಿದ್ದಾರೆ ಎಂದರು.


Spread the love