ಜುಲೈ 𝟭𝟱 ರೊಳಗೆ ಕಡಂದಲೆ 400 ಕೆ.ವಿ ಉಪಕೇಂದ್ರ ಕಾಮಗಾರಿ ಪೂರ್ಣ ಗುರಿ: ಇಂಧನ ಸಚಿವ ಕೆ.ಜೆ. ಜಾರ್ಜ್ ನಿರ್ದೇಶನ
ಮಂಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಿಗೆ ತಡೆರಹಿತ, ಉತ್ತಮ ಗುಣಮಟ್ಟದ ವಿದ್ಯುತ್ ಸೌಲಭ್ಯ ಒದಗಿಸುವ ‘ಕಡಂದಲೆ 400 ಕೆವಿ ವಿದ್ಯುತ್ ಉಪಕೇಂದ್ರ’ ಕಾಮಗಾರಿಯನ್ನು ಜುಲೈ 15 ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಭೂವ್ಯಾಜ್ಯದ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ಕಡಂದಲೆ ಗ್ರಾಮದಲ್ಲಿ 400 ಕೆವಿ ಲೈನ್ ಕಾಮಗಾರಿ ಸ್ಥಗಿತಗೊಂಡಿತ್ತು. ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಸತತ ಪ್ರಯತ್ನದಿಂದಾಗಿ ಈ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ. ಸಚಿವರ ನಿರ್ದೇಶನದ ಮೇರೆಗೆ ಬುಧವಾರ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಮಂಗಳೂರು ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದು, ತಡೆರಹಿತ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಸಚಿವರ ನಿರ್ದೇಶನದಂತೆ ಮುಂಬರುವ ಮುಂಗಾರಿನೊಳಗೆ ಈ ಯೋಜನೆಯನ್ನು ಮುಕ್ತಾಯಗೊಳಿಸಿ ವಿದ್ಯುತ್ ಪ್ರಸರಣ ಕಾರ್ಯ ಆರಂಭಿಸಲಾಗುವುದು” ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆಗೆ ಸಂಜೀವಿನಿ:
“ಪ್ರಮುಖ ಕೈಗಾರಿಕಾ ಹಬ್‍ಗಳಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಒದಗಿಸುವ ಪ್ರಮುಖ ಯೋಜನೆ ಇದಾಗಿದೆ. ಮಳೆಗಾಲದಲ್ಲಿ ಎದುರಾಗುತ್ತಿದ್ದ ವೋಲ್ಟೇಜ್ ವ್ಯತ್ಯಯ (𝗩𝗼𝗹𝘁𝗮𝗴𝗲 𝗙𝗹𝘂𝗰𝘁𝘂𝗮𝘁𝗶𝗼𝗻) ಮತ್ತು ಕಡಿಮೆ ವೋಲ್ಟೇಜ್ ಸಮಸ್ಯೆಗೆ ಈ 400 ಕೆವಿ ಉಪಕೇಂದ್ರ ಶಾಶ್ವತ ಮುಕ್ತಿ ನೀಡಲಿದೆ. ಅಲ್ಲದೆ, ಯಾವುದೇ ಒಂದು ಸ್ಟೇಷನ್ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷ ಉಂಟಾದಾಗ, ಈ ಉಪಕೇಂದ್ರದ ಮೂಲಕ ಪರ್ಯಾಯವಾಗಿ ಲೋಡ್ ತೆಗೆದುಕೊಂಡು ತಕ್ಷಣವೇ ವಿದ್ಯುತ್ ಮರುಸಂಪರ್ಕ ಕಲ್ಪಿಸುವುದು ಸುಲಭವಾಗಲಿದೆ. ಇದರಿಂದ ಕರಾವಳಿಯ ಪ್ರಮುಖ ಜಿಲ್ಲೆಗಳಿಗೆ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ” ಎಂದು ಹೇಳಿದರು.
ಲೈನ್ ಕ್ಲೀಯರ್ ಮತ್ತು ಸಾರ್ವಜನಿಕರ ಸಹಕಾರಕ್ಕೆ ಮನವಿ:
“ಈ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ, ಹಾಲಿ ಇರುವ 400 ಕೆವಿ ಯುಪಿಸಿಎಲ್-ಹೆಬ್ಬನಹಳ್ಳಿ (𝗨𝗣𝗖𝗟-𝗛𝗲𝗯𝗯𝗮𝗻𝗮𝗵𝗮𝗹𝗹𝗶) ಪ್ರಸರಣ ಮಾರ್ಗದ ಮೇಲೆ ಮೇ 6 ರಿಂದ ಮೇ 24 ರವರೆಗೆ ಮಾರ್ಗ ಮುಕ್ತತೆಯನ್ನು (𝗟𝗶𝗻𝗲 𝗖𝗹𝗲𝗮𝗿) ಪಡೆಯಲು ನಿಗಮವು ನಿರ್ಧರಿಸಿದೆ. ಈ ಮಾರ್ಗ ಮುಕ್ತತೆಯ ಅವಧಿಯಲ್ಲಿ, ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪ್ರಸರಣ ಮಾರ್ಗದ ಮೇಲಿನ ಒತ್ತಡ ನಿಭಾಯಿಸಿ ಪರ್ಯಾಯ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ತಾಂತ್ರಿಕವಾಗಿ ಅನಿವಾರ್ಯವಾದರೆ ಮಾತ್ರ ಸೀಮಿತ ಅವಧಿಗೆ (𝗦𝗵𝗼𝗿𝘁 𝗣𝗲𝗿𝗶𝗼𝗱) ವಿದ್ಯುತ್ ಕಡಿತ (𝗟𝗼𝗮𝗱 𝗦𝗵𝗲𝗱𝗱𝗶𝗻𝗴) ಮಾಡಬೇಕಾದ ಸನ್ನಿವೇಶ ಉಂಟಾಗಬಹುದು. ಮಂಗಳೂರಿನ ದೀರ್ಘಕಾಲೀನ ವಿದ್ಯುತ್ ಭದ್ರತೆಯ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಎಂದಿನಂತೆ ಸಹಕಾರ ನೀಡಬೇಕು” ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.
ಅಡೆತಡೆ ನಿವಾರಣೆ: ಸಚಿವ ಜಾರ್ಜ್
“ಕರಾವಳಿ ಭಾಗದ ಕೈಗಾರಿಕಾ ಬೆಳವಣಿಗೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರ ವಿದ್ಯುತ್ ಪೂರೈಕೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕೆಲವು ಕಾನೂನು ತೊಡಕುಗಳಿಂದ 400 ಕೆ.ವಿ ಲೈನ್ ಎಳೆಯುವ ಕಾರ್ಯದಲ್ಲಿ ವಿಳಂಬವಾಗಿತ್ತು. ಈ ಯೋಜನೆಯ ಅಡೆತಡೆಗಳನ್ನು ನಿವಾರಿಸಲು ಇಲಾಖೆ ವಿಶೇಷ ಮುತುವರ್ಜಿ ವಹಿಸಿದೆ. ಕಡಂದಲೆ ಉಪಕೇಂದ್ರವು ಮಂಗಳೂರು ಮತ್ತು ಉಡುಪಿ ಭಾಗಕ್ಕೆ ಅತ್ಯುತ್ತಮ ಗುಣಮಟ್ಟದ ವಿದ್ಯುತ್ ಸೌಲಭ್ಯವನ್ನು ಖಚಿತಪಡಿಸಲಿದೆ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಯೋಜನೆಗೆ ಎದುರಾಗಿದ್ದ ಭೂವ್ಯಾಜ್ಯಗಳನ್ನು ಪರಿಹರಿಸಲು ಇಲಾಖಾ ಮಟ್ಟದಲ್ಲಿ ನಿರಂತರ ಪರಿಶೀಲನೆ ನಡೆಸಿ, ಶೀಘ್ರ ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲು ಕೆಪಿಟಿಸಿಎಲ್‍ಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದಶಿ ಗೌರವ್ ಗುಪ್ತ ಹೇಳಿದರು.













