ಟೆಂಡರ್ ಸಿಗದ ಸಿಟ್ಟು ; ಹಳೆ ಟೆಂಡರುದಾರನಿಂದ ವಿಷ ಬೆರೆಸಲು ಹುನ್ನಾರ, ಕಾವೂರು ಠಾಣೆಗೆ ದೂರಿತ್ತ ಪಿಲಿಕುಳ ನಿರ್ದೇಶಕ
ಮಂಗಳೂರು: ಮಾಂಸ ಪೂರೈಕೆಯ ಟೆಂಡರ್ ಸಿಗದ ಕಾರಣಕ್ಕೆ ಹಿಂದಿನ ಗುತ್ತಿಗೆದಾರರು ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿಗಳನ್ನು ಕೊಲ್ಲಲು ವಿಷಪೂರಿತ ಮಾಂಸವನ್ನು ಬೆರೆಸಲು ಹುನ್ನಾರ ನಡೆಸಿದ್ದಾರೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಡಾ| ಪ್ರಶಾಂತ್ ಪೈ ಅವರು ಕಾವೂರು ಠಾಣೆಗೆ ದೂರು ನೀಡಿದ್ದಾರೆ.
ಉದ್ಯಾನವನದ ಪ್ರಾಣಿಗಳಿಗೆ ಮಾಂಸ ನೀಡಲು ಹೊಸ ಗುತ್ತಿಗೆದಾರರು ಗುತ್ತಿಗೆ ಪಡೆದಿದ್ದಾರೆ. ಸದ್ರಿ ಮಾಂಸವನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಹಿಂದಿನ ಟೆಂಡರುದಾರರ ನೌಕರನೊಬ್ಬ ಆಗಸ್ಟ್ 7ರಂದು ಉದ್ಯಾನವನದ ಸಿಬಂದಿಗೆ ಕರೆ ಮಾಡಿ, ಮಾಂಸದಲ್ಲಿ ವಿಷ ಬೆರೆಸುವಂತೆ ತಿಳಿಸಿದ್ದಾನೆ. ಆ ಮೂಲಕ ವಿಷಾಹಾರ ನೀಡಿ ಪ್ರಾಣಿಗಳನ್ನು ಕೊಲ್ಲಲು ಹುನ್ನಾರ ನಡೆಸಿರುವುದು ಗೊತ್ತಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಅರಣ್ಯಾಧಿಕಾರಿಯೂ ಆಗಿರುವ ಪ್ರಶಾಂತ ಪೈ ಆಗ್ರಹಿದ್ದಾರೆ.
ಘಟನೆ ಬಗ್ಗೆ ಇದೇ ಆ.8ರಂದು ಪಿಲಿಕುಳ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ.ದಿವ್ಯಾ ಗಣೇಶ್ ಅವರು ಪ್ರಾಧಿಕಾರದ ನಿರ್ದೇಶಕರಿಗೆ ಈ ಕುರಿತಾಗಿ ದೂರು ನೀಡಿದ್ದರು. ಇದರಂತೆ, ಪಿಲಿಕುಳ ಜೈವಿಕ ಉದ್ಯಾನವನದ ನೌಕರ ಹರೀಶ್ ಅವರನ್ನು ವಿಚಾರಿಸಿದಾಗ, ಈ ಹಿಂದೆ ಮಾಂಸ ಪೂರೈಕೆಗೆ ಟೆಂಡರ್ ಪಡೆದಿದ್ದ ಖಾದರ್ (ಅವರು ಟೆಂಡರುದಾರರೂ ಸಹ ಆಗಿರುತ್ತಾರೆ) ನಿರ್ದೇಶನದ ಮೇರೆಗೆ ಅಬ್ಬಾಸ್ ಹಾಗೂ ಹನೀಫ್ ಎಂಬವರು ಪಿಲಿಕುಳ ಜೈವಿಕ ಉದ್ಯಾನವನದ ವನ್ಯಮೃಗಗಳಿಗೆ ಮಾಂಸವನ್ನು ವಿತರಿಸುತ್ತಿದ್ದರು. ಈ ಬಾರಿ ಬೇರೆಯವರು ಬಿಡ್ ಹಾಕಿದ್ದರಿಂದ ಟೆಂಡರ್ ಬೇರೆಯವರಿಗೆ ಹೋಗಿತ್ತು. ಆ.7ರಂದು ಅಬ್ಬಾಸ್ ಅವರ ನೌಕರ ಹನೀಫ್ ಎಂಬವರು ಪಿಲಿಕುಳದ ನೌಕರ ಹರೀಶ್ ಅವರಿಗೆ ಕರೆ ಮಾಡಿ, ಈಗಿನ ಟೆಂಡರುದಾರರು ಪೂರೈಸುತ್ತಿರುವ ಮಾಂಸಕ್ಕೆ ಕೊಳೆತ ಮಾಂಸ ಅಥವಾ ವಿಷ ಮಾಂಸವನ್ನು ಬೆರೆಸಿ, ಸದ್ರಿ ಟೆಂಡರನ್ನು ತಿರಸ್ಕರಿಸುವಂತೆ ಮಾಡಲು ಹುನ್ನಾರ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈಗಿರುವ ಟೆಂಡರುದಾರರನ್ನು ತಿರಸ್ಕೃತಗೊಳಿಸಲು ಪಿಲಿಕುಳ ಜೈವಿಕ ಉದ್ಯಾನವನದ ವನ್ಯಮೃಗಗಳನ್ನು ಕೊಲ್ಲಲು ಹುನ್ನಾರ ಮಾಡಿರುವುದು ತಿಳಿದುಬಂದಿತ್ತು.
ಈ ವಿಷಯದ ಬಗ್ಗೆ ಹರೀಶ್ ಮತ್ತು ಹನೀಫ್ ಅವರು ಮಾತನಾಡಿರುವ ಆಡಿಯೋ ರೆಕಾರ್ಡ್ ತುಣುಕನ್ನು ಪೊಲೀಸರಿಗೆ ನೀಡಿದ್ದಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ ಹಾಗೂ ಅಬ್ಬಾಸ್ ಹಾಗೂ ಹನೀಫ್ ಎಂಬವರ ಮೊಬೈಲ್ ಪೋನ್‌ಗಳನ್ನು ಪರೀಲಿಸಿದರೆ, ಇದರ ಹಿಂದೆ ಯಾರೆಲ್ಲ ಇದ್ದಾರೆ? ಯಾರ ಕೈವಾಡ ಇರುಬಹುದು? ಎಂಬ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ದೂರು ಸಲ್ಲಿಸಿದ್ದಾರೆ.