ಡಾ. ರಾಜ್‍ಕುಮಾರ್ ಸರ್ವಕಾಲಕ್ಕೂ ಸಲ್ಲುವ ಮೇರುನಟ 

Spread the love

ಡಾ. ರಾಜ್‍ಕುಮಾರ್ ಸರ್ವಕಾಲಕ್ಕೂ ಸಲ್ಲುವ ಮೇರುನಟ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಚಿತ್ರರಂಗದ ಮೇರುನಡ ಪದ್ಮಭೂಷಣ ಡಾ. ರಾಜ್ ಕುಮಾರ್ 90 ನೇ ಜನ್ಮ ದಿನಾಚರಣೆಯನ್ನು ಮಂಗಳವಾರ ವಾರ್ತಾ ಇಲಾಖೆ ಸಭಾಂಗಣದಲ್ಲಿ  ಆಚರಿಸಲಾಯಿತು.

ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಪರದೆಯ ಮೇಲೆ ಅದ್ಭುತ ಚೈತನ್ಯವನ್ನು ಹೊಂದಿದ ಹಾಗೂ  ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು  ಮೆಟ್ಡಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು ಎಂದು ತನ್ನ ಅಂತರಾಳದ ಧ್ವನಿಯಲ್ಲಿ ಕನ್ನಡ ಪ್ರೇಮವನ್ನು ತೋರಿಸಿಕೊಟ್ಟ ಅತ್ಯದ್ಭುತ ನಟ ಡಾ ರಾಜ್ ಕುಮಾರ್ ಎಂದು ಹೇಳಿದರು . ದಾಸ ಸಾಹಿತ್ಯ ಕೀರ್ತನೆ ಭಾವಗೀತೆಗಳಿಗೆ ತನ್ನ ಇಂಪಿನ ಕಂಠದ ಗಾನದ ಮೂಲಕ ಎಲ್ಲರನ್ನೂ ಸೆಳೆಯುವ ಅಪ್ರತಿಮ ಕಲಾವಿದನ ಜನ್ಮದಿನಾಚರಣೆಯನ್ನು ಆಚರಿಸುವ ಸರ್ಕಾರದ ತೀರ್ಮಾನಕ್ಕೆ ಅಭಿನಂದಿಸಬೇಕು ಎಂದರು.

ಈಗಿನ ನಾಯಕರು ಒಂದೆರಡೂ ಬಾರಿ ಪರದೆಯಲ್ಲಿ ಮಿಂಚಿದರೆ ಡಾ. ರಾಜ್‍ಕುಮಾರ್ ಎಲ್ಲಾ ಕಾಲದಲ್ಲಿಯೂ ಮಿಂಚಿದ ಅಪರೂಪದ ವ್ಯಕ್ತಿಯಾಗಿದ್ದರು . ಅಲ್ಲದೇ ಕೆಲವು ನಟರು ಚಿತ್ರರಂಗ ಹಾಗೂ ತಮ್ಮ ವೈಯಕ್ತಿಕ ಬದುಕಿಗೆ ಮಾತ್ರ ಸೀಮಿತವಾಗಿರುತ್ತಾರೆ ಆದರೆ ರಾಜ್‍ಕುಮಾರ್‍ರವರು ಕನ್ನಡ ನಾಡುನುಡಿಗೆ ಅಪಾರವಾದ ಕೊಡುಗೆಯನ್ನು ನೀಡಿ ಅನೇಕ ಜನಪರ ಕಾರ್ಯಗಳಲ್ಲಿ ಹಾಗೂ ಚಳುವಳಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರಲ್ಲಿ ಪ್ರಮುಖರು  ಎಂದು ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.

ಒಬ್ಬ ಕಲಾವಿದನಾಗಿರದೇ ಜನಪರ ವ್ಯಕ್ತಿಯಾಗಿ ಎಲ್ಲಾ ರಂಗದಲ್ಲಿಯೂ ತೊಡಗಿಸಿಕೊಂಡು ಜನರ ಅಚ್ಚುಮೆಚ್ಚಿನ ಕಲಾವಿದನನ್ನು ಸ್ಮರಿಸುವ ದಿನವೇ ಸುದಿನ ಎಂದು ಹೇಳಿದರು . ಅಂತಿಮವಾಗಿ  ಕನ್ನಡದ ಉಳಿವಿಗೆ ಆತ್ಮಸಾಕ್ಷಿಯಿಂದ ಸೂಕ್ತ ಅಭ್ಯರ್ಥಿಯನ್ನು ಆರಿಸಿ ಮತದಾನದಲ್ಲಿ ಭಾಗವಹಿಸಲು ಕರೆಕೊಟ್ಟರು

ಮಂಗಳೂರು ತಾಲೂಕು ಕೃಷಿ ಸಹಾಯಕ ನಿರ್ದೇಶಕ  ನಾಗರಾಜ್ ಮಾತನಾಡಿ, ರಾಜ್‍ಕುಮಾರ್ ಒಬ್ಬ ಸರಳವ್ಯಕ್ತಿಯಾಗಿ ಎಲ್ಲರೂ ನಾಚಿಸುವಂತಹ ವ್ಯಾಕರಣ ಬದ್ಧವಾದ  ವಾಕ್ಚಾತುರ್ಯವನ್ನು ಮೈಗೂಡಿಸಿಕೊಂಡವರು. ಇದು ಇಡೀ ನಾಡಿಗೆ ಸಂದ ಗೌರವವಾಗಿದ್ದು ಅವರಿಂದ ಕನ್ನಡವನ್ನು ಕಲಿಯಬೇಕು ಎಂದು ಗುಣಗಾನ ಮಾಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ  ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ. ಎ ಖಾದರ್ ಶಾ ಸ್ವಾಗತಿಸಿದರು.


Spread the love