ಡಿಜಿಟಲ್ ಅರೆಸ್ಟ್ ಹಣ ವರ್ಗಾವಣೆ ಪ್ರಕರಣ : ಪೊಲೀಸರ ತ್ವರಿತ ಕಾರ್ಯಾಚರಣೆ; ಸಂತ್ರಸ್ತೆ ಕಳೆದುಕೊಂಡ ಹಣ ವಶಕ್ಕೆ

Spread the love

ಡಿಜಿಟಲ್ ಅರೆಸ್ಟ್ ಹಣ ವರ್ಗಾವಣೆ ಪ್ರಕರಣ : ಪೊಲೀಸರ ತ್ವರಿತ ಕಾರ್ಯಾಚರಣೆ; ಸಂತ್ರಸ್ತೆ ಕಳೆದುಕೊಂಡ ಹಣ ವಶಕ್ಕೆ

ಮಂಗಳೂರು : ಡಿಜಿಟಲ್ ಅರೆಸ್ಟ್ ಪ್ರಕರಣವೊಂದರಲ್ಲಿ ಪೊಲೀಸರ ತ್ವರಿತ ಕಾರ್ಯಾಚರಣೆಯ ಮೂಲಕ ಸಂತ್ರಸ್ತೆಯು ಕಳೆದುಕೊಂಡಿದ್ದ ಹಣವನ್ನು ಸಂತ್ರಸ್ತೆಗೆ ಹಸ್ತಾಂತರಿಸಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿಗಳಾದ ಮಿಥುನ್ ಹಾಗೂ ರವಿಶಂಕರ್ ಅವರ ಸಮ್ಮುಖದಲ್ಲಿ ಸಂತ್ರಸ್ತೆಗೆ ಆಕೆ ಕಳೆದುಕೊಂಡಿದ್ದ 17 ಲಕ್ಷ ರೂ.ಗಳ ಹಣದ ಸಾಂಕೇತಿಕ ವರ್ಗಾವಣೆ ನಡೆಯಿತು.

ಬಳಿಕ ಸುದ್ದಿಗೋಷ್ಟಿಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಮಿಥುನ್, ಅ. 23ರಂದು ಬಿಜೈ ನಿವಾಸಿ 79ರ ಹರೆಯದ ಮಹಿಳೆಗೆ ಪೊಲೀಸ್ ಸಮಸ್ತ್ರದಲ್ಲಿದ್ದ ವ್ಯಕ್ತಿ ವಾಟ್ಸಾಪ್ ಕರೆ ಮಾಡಿ ಮಹಿಳೆಯ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ ಎಂದು ಬಂಧನದ ಬೆದರಿಕೆಯೊಡ್ಡಿದ್ದಾನೆ.

ಬಂಧನದಿಂದ ಪಾರಾಗಲು ಸಂತ್ರಸ್ತೆ ಹಣವನ್ನು ಠೇವಣಿ ಮಾಡುವಂತೆ ಹಾಗೂ ಪರಿಶೀಲನೆ ಬಳಿಕ ಹಣವನ್ನು ವರ್ಗಾಯಿಸುವುದಾಗಿ ತಿಳಿಸಿದ್ದಲ್ಲದೆ, ಈ ವಿಷಯ ಯಾರಿಗೂ ತಿಳಿಸದಂತೆ ಭಯ ಹುಟ್ಟಿಸಿ ಸುಮಾರು 5 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್‌ನಲ್ಲಿ ಮಹಿಳೆಯನ್ನು ಇರಿಸಲಾಗುತ್ತದೆ. ವಾಟ್ಸಾಪ್ ಕರೆಯಲ್ಲಿ ಡಿಜಿಟಲ್ ಅರೆಸ್ಟ್‌ನಲ್ಲಿದ್ದ ಸಮಯದಲ್ಲೇ ಮಹಿಳೆ ಉಳಿತಾಯ ಮಾಡಿದ್ದ 17 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಶಾಖೆಗೆ ತೆರಳಿ ಆರೋಪಿಯ ಖಾತೆಗೆ ಸಂಜೆ 3 ಗಂಟೆಯ ವೇಳೆಗೆ ವರ್ಗಾಯಿಸುತ್ತಾರೆ.

ಅದೇ ದಿನ ಸಂಜೆ ಸುಮಾರು 6 ಗಂಟೆಯ ವೇಳೆಗೆ ತಮ್ಮ ಫ್ಲ್ಯಾಟ್‌ನ ಮಹಿಳೆ ಜತೆ ವಿಚಾರ ತಿಳಿಸಿದಾಗ, ಆಕೆ ಸಂತ್ರಸ್ತೆ ಮಹಿಳೆಯ ಜತೆಗೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ. ತಕ್ಷಣ ಠಾಣಾ ಠಾಣಾಧಿಕಾರಿ 1930 ಸಹಾಯವಾಣಿ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ 17 ಲಕ್ಷ ರೂ.ಗಳನ್ನು ಬ್ಲಾಕ್ ಮಾಡಿಸಿ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ ಹಣ ಇರುವ ಬಗ್ಗೆ ದೃಢಪಡಿಸುತ್ತಾರೆ. ಅ. 24ರಂದು ಹಣ ಬಿಡುಗಡೆಗೆ ಮಾಹಿತಿಯೊಂದಿಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ಬಳಿಕ ಎರಡು ದಿನ ಸಾರ್ವತ್ರಿಕ ರಜೆ ಇದ್ದ ಕಾರಣ ಅ. 27ರಂದು ನ್ಯಾಯಾಲಯ ಹಣ ಬಿಡುಗಡೆಗೆ ಆದೇಶ ನೀಡಿದೆ. ಆ ಆದೇಶದಂತೆ ಸಂತ್ರಸ್ತೆಯ ಖಾತೆಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿದರು.

ಈ ಪ್ರಕರಣದಲ್ಲಿ ತ್ವರಿತ ಗತಿಯಲ್ಲಿ ಸಂತ್ರಸ್ತೆ ದೂರು ನೀಡಿದ ಕಾರಣ ಕ್ಷಿಪ್ರ ಗತಿಯ ಕಾರ್ಯಾಚರಣೆಯ ಮೂಲಕ ಪೊಲೀಸರು ಸಂತ್ರಸ್ತೆಯ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರ ಖಾತೆಗೆ ವರ್ಗಾವಣೆಯಾಗುತ್ತಿದ್ದ ಹಣವನ್ನು ತಡೆಯಲು ಸಾಧ್ಯವಾಯಿತು. ಈ ಮೂಲಕ ಪೂರ್ಣ ಹಣ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಇಂತಹ ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರು ಅಂಜಿಕೆ, ಭಯದಿಂದಾಗಿ ದೂರು ನೀಡುವಾಗ ತಡವಾಗುವ ಕಾರಣ ಈ ರೀತಿ ಸೈಬರ್ ಖದೀಮರಿಂದ ದೋಚಲಾಗುವ ಹಣವನ್ನು ವಶಪಡಿಸಲು ಕಷ್ಟವಾಗುತ್ತದೆ ಎಂದವರು ಹೇಳಿದರು.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಈ ವರ್ಷ 8 ಪ್ರಕರಣಗಳಲ್ಲಿ 8ಕೋಟಿ ರೂ.ಗಳನ್ನು ಸೈಬರ್ ಖದೀಮರು ದೋಚಿದ್ದಾರೆ. ಈವರೆಗೆ ಇದರಲ್ಲಿ 35.98 ಲಕ್ಷ ರೂ.ಗಳನ್ನು ವಶಪಡಿಸಲಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರಿಕರು ಹೆಚ್ಚಾಗಿ ಬಲಿಪಶುಗಳಾಗುತ್ತಿದ್ದಾರೆ. ವಾಟ್ಸಾಪ್ ಕರೆಗಳ ಮೂಲಕ ಅಪರಿಚಿತ ವ್ಯಕ್ತಿಗಳು ಕರೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಒತ್ತಾಯಿಸಿದಾಗ ವಿಚಲಿತರಾಗದೆ, ಭಯಗೊಳ್ಳದೆ ಕರೆ ಕಟ್ ಮಾಡಿ ತಕ್ಷಣ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದವರು ಹೇಳಿದರು.

ದೇಶದ ಕಾನೂನು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಡಿಜಿಟಲ್ ಅರೆಸ್ಟ್ ಎಂಬ ಪ್ರಕ್ರಿಯೆ ಇರುವುದಿಲ್ಲ, ಪೊಲೀಸರು, ನ್ಯಾಯಾಧೀಶರು, ಸಿ.ಬಿ.ಐ, ಇ.ಡಿ ಹಾಗೂ ಇನ್ನಿತರ ಕಾನೂನು ಜಾರಿ ಸಂಸ್ಥೆಗಳ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಯಾವುದೇ ಕಾನೂನು ಪ್ರಕ್ರಿಯಯನ್ನು ನಡೆಸುವುದಿಲ್ಲ.

ಇದೇ ರೀತಿ ಡಿಜಿಟಲ್ ಹೂಡಿಕೆ ಹಗರಣಗಳು ಈಗಾಗಲೇ ಹೆಚ್ಚುತ್ತಿದ್ದು, ಷೇರು ಮಾರುಕಟ್ಟೆ ಹೂಡಿಕೆ ಆರ್‌ಬಿಐ/ಸೆಬಿಯ ಮಾನ್ಯತೆ ಪಡೆದಿದೆಯೋ ಇಲ್ಲವೋ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳದೇ ಯಾವುದೋ ಅಪರಿಚಿತರಿಂದ ಪರಿಚಿತವಾದ ಡಿಮ್ಯಾಟ್ ಅಕೌಂಟ್ ಇಲ್ಲದ ನಕಲಿ ಶೇರ್ ಮಾರ್ಕೆಟ್ /ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಮೋಸವಾಗುತ್ತಿದೆ. ಈ ಬಗ್ಗೆ ಮನೆ ಮನೆ ಪೊಲೀಸ್ ಅಲ್ಲದೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೂಲಕವೂ ಪೊಲೀಸರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಪಿ ಮಿಥುನ್ ತಿಳಿಸಿದರು.


Spread the love
Subscribe
Notify of

0 Comments
Inline Feedbacks
View all comments