ಡೀಸೆಲ್ ಮತ್ತು ಫರ್ನಿಶ್ ಆಯಿಲ್ ಕಳ್ಳತನ ಜಾಲ ಪತ್ತೆ: ಓರ್ವನ ಸೆರೆ
ಮಂಗಳೂರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಎಂಬಲ್ಲಿ ಅಕ್ರಮವಾಗಿ ಡೀಸೆಲ್ ಮತ್ತು ಫರ್ನಿಶ್ ಆಯಿಲ್ ಸಂಗ್ರಹಿಸಿಟ್ಟ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಡೀಸೆಲ್, ಫರ್ನಿಶ್ ಆಯಿಲ್ ಹಾಗೂ ಇತರ ಉತ್ಪನ್ನಗಳನ್ನು ವಶಪಡಿಸಿಕೊಂಡಿರುತ್ತಾರೆ.

ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಎಂಬಲ್ಲಿ ಅಕ್ರಮವಾಗಿ ಡೀಸೆಲ್, ಫರ್ನಿಶ್ ಆಯಿಲ್ ಕಳ್ಳತನ ಮಾಡಿ ಸಂಗ್ರಹಿಸಿಟ್ಟ ಬಗ್ಗೆ ಮಾಹಿತಿಯ ಆಧಾರದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಸುರತ್ಕಲ್ ಪೊಲೀಸರು ದಾಳಿ ನಡೆಸಿ ಈ ಕೃತ್ಯದಲ್ಲಿ ಭಾಗಿಯಾದ.
ಸಂತೋಷ್, ಪ್ರಾಯ (36), ತಂದೆ: ಬಾಲಕೃಷ್ಣ, ವಾಸ: ಕುಳಾಯಿಗುಡ್ಡೆ ಮನೆ, ಕುಳಾಯಿ, ಮಂಗಳೂರು
ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಸದ್ರಿ ಸ್ಥಳದಲ್ಲಿ ದೊರೆತ 10 ಬ್ಯಾರೆಲ್ ಫರ್ನಿಶ್ ಆಯಿಲ್, 2 ಬ್ಯಾರೆಲ್ ಡೀಸೆಲ್, 3ಟ್ಯಾಂಕರ್ ಗಳು, 2 ದ್ವಿಚಕ್ರ ವಾಹನಗಳು, ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಸ್ವಾಧೀನಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 20 ಲಕ್ಷ ಆಗಬಹುದು. ಈ ದಂಧೆಯನ್ನು ಆರೋಪಿಯು ಎಂ. ಆರ್.ಪಿ.ಎಲ್ ನಿಂದ ಡೀಸೆಲ್ ಹಾಗೂ ಫರ್ನಿಶ್ ಆಯಿಲ್ ಗಳನ್ನು ತುಂಬಿಕೊಂಡು ಬರುವ ಟ್ಯಾಂಕರ್ ಗಳಿಂದ ಅದರ ಚಾಲಕರ ಜೊತೆ ಸೇರಿ ಕಳ್ಳತನ ಮಾಡಿ ನಂತರ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐಯವರಾದ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಹಾಗೂ ಸುರತ್ಕಲ್ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಜಿ ರಾಮಕೃಷ್ಣ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.













