ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗಾಗಿ ಮತ ಎಣಿಕೆಗೆ ಅಗತ್ಯ ಸಿದ್ಧತೆ: ಸಸಿಕಾಂತ್ ಸೆಂಥಿಲ್

Spread the love

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗಾಗಿ ಮತ ಎಣಿಕೆಗೆ ಅಗತ್ಯ ಸಿದ್ಧತೆ: ಸಸಿಕಾಂತ್ ಸೆಂಥಿಲ್

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗಾಗಿ ನಗರದ ಎನ್ಐಟಿಕೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದ್ದು, ಇದೇ 23 ರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಎಂಟು ಹಾಲ್‌ಗಳಿದ್ದು, ಒಟ್ಟು 14 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪೋಸ್ಟಲ್ ಬ್ಯಾಲೆಟ್, ಎಲೆಕ್ಟ್ರಾನಿಕ್ ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆಯನ್ನು ಮೊದಲೇ ಮಾಡಲಾಗುತ್ತಿದೆ. ವಿವಿಧ ಪಕ್ಷಗಳ ಏಜೆಂಟರು, ಅಧಿಕಾರಿಗಳ ಸಮ್ಮುಖದಲ್ಲಿ ಬೆಳಿಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ ಎಂದರು.

ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 18 ಸುತ್ತಿನಲ್ಲಿ ನಡೆಯಲಿದ್ದು, ಮೂಡುಬಿದಿರೆ ಕ್ಷೇತ್ರದ ಎಣಿಕೆ 16 ಸುತ್ತು, ಮಂಗಳೂರು ಕ್ಷೇತ್ರದ ಎಣಿಕೆ 15, ಪುತ್ತೂರು ಕ್ಷೇತ್ರದ ಎಣಿಕೆ 16 ಹಾಗೂ ಸುಳ್ಯ ಕ್ಷೇತ್ರದ ಎಣಿಕೆ 17 ಸುತ್ತಿನಲ್ಲಿ ನಡೆಯಲಿದೆ ಎಂದು ಹೇಳಿದರು.

ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದಲ್ಲಿ 18 ಮಂದಿ ಎಣಿಕೆ ಮೇಲ್ವಿಚಾರಕರು, 18 ಮಂದಿ ಸಹಾಯಕರು, 18 ಮಂದಿ ಮೈಕ್ರೋ ವೀಕ್ಷಕರು, 16 ಮಂದಿ ಗ್ರೂಪ್‌ ಡಿ ಸಿಬ್ಬಂದಿ ಸೇರಿದಂತೆ ಒಟ್ಟು 70 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದರು.

ಮತ ಎಣಿಕೆಗೆ ಸಂಬಂಧಿಸಿದ ಎಲ್ಲ ಅಂಕಿ- ಅಂಶಗಳನ್ನು ಸುವಿಧಾ ಪೋರ್ಟಲ್ ಮೂಲಕವೇ ನೀಡಲಾಗುವುದು ಎಂದ ಅವರು, ಮತ ಎಣಿಕೆ ಸಂದರ್ಭದಲ್ಲಿ ಅಧಿಕಾರಿಯ ನಿರ್ದೇಶನ ಇಲ್ಲದೇ, ಭದ್ರತಾ ಸಿಬ್ಬಂದಿ ಕೇಂದ್ರವನ್ನು ಪ್ರವೇಶಿಸುವಂತಿಲ್ಲ ಎಂದು ತಿಳಿಸಿದರು.

ಮೂರು ಹಂತದ ತಪಾಸಣೆ: ಮತ ಎಣಿಕೆ ಕೇಂದ್ರದಲ್ಲಿ ರಾಜಕೀಯ ಪಕ್ಷಗಳ ಏಜೆಂಟರು, ಮತ ಎಣಿಕೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮದ ಪ್ರತಿನಿಧಿಗಳು, ಅಭ್ಯರ್ಥಿಗಳನ್ನು ಹೊರತು ಪಡಿಸಿ, ಬೇರೆ ಯಾವ ವ್ಯಕ್ತಿಗಳಿಗೂ ಅವಕಾಶವಿಲ್ಲ ಎಂದು ತಿಳಿಸಿದರು.

ಮತ ಎಣಿಕೆ ಕೇಂದ್ರದ ಸುತ್ತ ಮೂರು ಹಂತದ ತಪಾಸಣೆ ಮಾಡಲಾಗುವುದು. ಮೊದಲ ಹಂತದಲ್ಲಿಯೇ ವಾಹನಗಳಿಗೆ ನಿರ್ಬಂಧ ವಿಧಿಸಲಾಗುವುದು. ಎರಡನೇ ಹಂತದಲ್ಲಿ ಮಾಧ್ಯಮದ ಪ್ರತಿನಿಧಿಗಳನ್ನು ಹೊರತುಪಡಿಸಿ, ಬೇರೆ ಯಾವ ವ್ಯಕ್ತಿಗಳಿಗೂ ಮೊಬೈಲ್‌, ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಮೂರು ಹಂತದಲ್ಲಿ ತಪಾಸಣೆ ನಡೆಸಿದ ಬಳಿಕ ಸಂಬಂಧಿಸಿದವರನ್ನು ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುವುದು ಎಂದು ಹೇಳಿದರು.

ಸಂಚಾರ ಬದಲಾವಣೆ: ಸುರತ್ಕಲ್‌ ಎನ್‌ಐಟಿಕೆ ಮುಂಭಾಗದಲ್ಲಿ ಜನದಟ್ಟಣೆ ಆಗದಂತೆ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಂದೀಪ ಪಾಟೀಲ ತಿಳಿಸಿದರು.

ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುವ ಭಾರಿ ವಾಹನಗಳಿಗೆ ಕೆಪಿಟಿ ಅಥವಾ ಕೂಳೂರಿನಿಂದ ಮಾರ್ಗ ಬದಲಾಯಿಸಲಾಗಿದ್ದು, ಕಾವೂರು ಜಂಕ್ಷನ್‌, ಬಜ್ಪೆ, ಕಟೀಲ್‌, ಕಿನ್ನಿಗೋಳಿ, ಮೂಲ್ಕಿ ಮಾರ್ಗವಾಗಿ ಉಡುಪಿಗೆ ತೆರಳಬಹುದು. ಉಡುಪಿಯಿಂದ ಮಂಗಳೂರಿಗೆ ಬರುವ ಭಾರಿ ವಾಹನಗಳಿಗೆ ಹೆದ್ದಾರಿ ಮೂಲಕವೇ ಸಂಚರಿಸಲು ಅವಕಾಶ ನೀಡಲಾಗುವುದು. ಸಾರಿಗೆ ಬಸ್‌ಗಳು ಹೆದ್ದಾರಿಯಲ್ಲಿಯೇ ಸಂಚರಿಸಬಹುದಾಗಿದ್ದು, ಎನ್‌ಐಟಿಕೆ ಮುಂಭಾಗದಲ್ಲಿ ನಿಲುಗಡೆ ಕಲ್ಪಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಸುರತ್ಕಲ್‌ನಿಂದ ಉಡುಪಿ ಕಡೆಗೆ ತೆರಳುವ ದ್ವಿಚಕ್ರ ಹಾಗೂ ಲಘು ವಾಹನಗಳು ತಡಂಬೈಲ್‌ ಕ್ರಾಸ್‌ ಮೂಲಕ ಎನ್‌ಐಟಿಕೆ ಲೈಟ್‌ ಹೌಸ್‌, ರೆಡ್‌ರಾಕ್‌ ಕ್ರಾಸ್‌ನಲ್ಲಿ ಎಡಕ್ಕೆ ತಿರುಗಿ ಮುಕ್ಕ ಮೂಲಕ ಉಡುಪಿಗೆ ಸಂಚರಿಸಬೇಕು. ಉಡುಪಿಯಿಂದ ಮಂಗಳೂರು ಕಡೆಗೆ ತೆರಳುವ ದ್ವಿಚಕ್ರ ಹಾಗೂ ಲಘು ವಾಹನಗಳು ಚೇಳ್ಯಾರು ಕ್ರಾಸ್‌ನಿಂದ ಎಡಕ್ಕೆ ಬಂದು, ಮುಂಚೂರು ಕ್ರಾಸ್‌ನಲ್ಲಿ ಹೆದ್ದಾರಿಗೆ ಸೇರಬೇಕು ಎಂದು ವಿವರಿಸಿದರು.

ಮತ ಎಣಿಕೆ ಸಂದರ್ಭದಲ್ಲಿ ಸಿಎಪಿಎಫ್ ತುಕಡಿ, 5 ಕೆಎಸ್‌ಆರ್‌ಪಿ ತುಕಡಿ, 12 ಸಿಎಆರ್ ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಂದೀಪ ಪಾಟೀಲ ತಿಳಿಸಿದರು.

ಇಬ್ಬರು ಡಿಸಿಪಿಗಳು, 6 ಜನ ಎಸಿಪಿಗಳು, 17 ಇನ್‌ಸ್ಪೆಕ್ಟರ್‌ಗಳು, 48 ಸಬ್‌ ಇನ್‌ಸ್ಪೆಕ್ಟರ್‌ಗಳು, 66 ಎಎಸ್‌ಐ, 112 ಹೆಡ್‌ ಕಾನ್‌ಸ್ಟೆಬಲ್‌, 224 ಕಾನ್‌ಸ್ಟೆಬಲ್‌ಗಳನ್ನು ಮತ ಎಣಿಕೆ ಕೇಂದ್ರದಲ್ಲಿ ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ, ಡಿಸಿಪಿಗಳಾದ ಹನುಮಂತ್ರಾಯ, ಲಕ್ಷ್ಮಿಗಣೇಶ್ ಇದ್ದರು.


Spread the love