ದೆಹಲಿಯಲ್ಲಿ ಇಸ್ರೇಲ್‌ ರಾಯಭಾರಿ ಭೇಟಿಯಾದ ಸಂಸದ ಕ್ಯಾ. ಬ್ರಿಜೇಶ್ ಚೌಟ

Spread the love

ದೆಹಲಿಯಲ್ಲಿ ಇಸ್ರೇಲ್‌ ರಾಯಭಾರಿ ಭೇಟಿಯಾದ ಸಂಸದ ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ಇಸ್ರೇಲ್ ಮಾದರಿಯ ಕೃಷಿ ಅಭಿವೃದ್ದಿ, ತಂತ್ರಜ್ಞಾನ ಅಳವಡಿಕೆ, ನೀರಾವರಿ ನಿರ್ವಹಣೆ ಸೇರಿದಂತೆ ಅತ್ಯಾಧುನಿಕ ಸುಸ್ಥಿರ ಕೃಷಿಯನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಳವಡಿಸಲು ಇಸ್ರೇಲ್ ಮಾದರಿಯ ಬೆಂಬಲ ಬಯಸಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಸ್ರೇಲ್‌ನ ರಾಯಭಾರಿ ರಿಯೂವೆನ್ ಅಜಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಚಿತ್ರಣವನ್ನು ಪರಿವರ್ತಿಸುವ ಮಹತ್ವಕಾಂಕ್ಷೆ ಗುರಿಯನ್ನು ಹೊಂದಿರುವ ಕ್ಯಾ. ಚೌಟ ಅವರು ನವದೆಹಲಿಯಲ್ಲಿ ಇಂದು ಇಸ್ರೇಲ್‌ನ ರಾಯಭಾರಿ ಅವರೊಂದಿಗೆ ಮಾತುಕತೆ ವೇಳೆ ಇಸ್ರೇಲ್ ಮತ್ತು ದಕ್ಷಿಣ ಕನ್ನಡದ ನಡುವೆ ಕೇಂದ್ರೀಕೃತ ಸಹಕಾರವನ್ನು ಕೋರಿದ್ದಾರೆ. ಜಿಲ್ಲೆಯಲ್ಲಿ ಅಡಿಕೆ, ಗೋಡಂಬಿ, ತೆಂಗಿನಕಾಯಿ, ರಬ್ಬರ್‌ ಮುಂತಾದ ಉತ್ತಮ ಗುಣಮಟ್ಟದ ರಫ್ತು-ಆಧಾರಿತ ಬೆಳೆಗಳನ್ನು ಉತ್ಪಾದಿಸಲಾಗುತ್ತಿದ್ದು ಇದಕ್ಕೆ ಪೂರಕವಾಗಿ ರೈತರಿಗೆ ಸಾಲ ಮತ್ತು ಕೃಷಿ ಸಂಪನ್ಮೂಲಗಳನ್ನು ಒದಗಿಸುವ ಸುವ್ಯವಸ್ಥಿತ ಸಹಕಾರಿ ಕೃಷಿ ಸಂಘಗಳ ಉತ್ತಮ ಜಾಲವನ್ನು ಹೊಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತ 2047ರ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯ ದೃಷ್ಟಿಕೋನವನ್ನು ಹೊಂದಿದೆ. ಇದಕ್ಕೆ ಪೂರಕವಾಗುವಂತೆ ಕರಾವಳಿ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದ ಕೃಷಿ ಪರಿಸರ ವ್ಯವಸ್ಥೆಯಲ್ಲಿನ ಸುಧಾರಣೆಗಾಗಿ ತಂತ್ರಜ್ಞಾನ, ನೀರಾವರಿ ನಿರ್ವಹಣೆ, ಉತ್ತಮ ಕೊಯ್ಲು ಪದ್ಧತಿ ಮತ್ತು ಸುಸ್ಥಿರ ಕೃಷಿಯಲ್ಲಿನ ಇಸ್ರೇಲ್ ದೇಶದ ಪರಿಣಿತಿಯನ್ನು ಅಳವಡಿಸಲು ಸಹಕಾರ ಬಯಸುತ್ತಿದ್ದೇವೆ. ಇದಕ್ಕಾಗಿ ರೊಬೊಟಿಕ್ಸ್, ಡ್ರೋನ್‌ಗಳು ಮತ್ತು ಎಐ-ಆಧಾರಿತ ಕೃಷಿ ನಿರ್ವಹಣಾ ವ್ಯವಸ್ಥೆಗಳಂತಹ ಸುಧಾರಿತ ತಂತ್ರಜ್ಞಾನ ಮತ್ತು ಜಾಗತಿಕವಾಗಿ ಮೆಚ್ಚುಗೆ ಪಡೆದ ಇಸ್ರೇಲ್ ನ ನೀರಾವರಿ ನಿರ್ವಹಣಾ ತಂತ್ರಗಳನ್ನು ಪರಿಚಯಿಸುವಂತೆ ಕ್ಯಾ. ಚೌಟ ಕೋರಿದ್ದಾರೆ. ಇದರೊಂದಿಗೆ ಜಿಲ್ಲೆಯ ಹವಾಮಾನ ಮತ್ತು ಭೂಪ್ರದೇಶಕ್ಕೆ ಅನುಗುಣವಾಗಿ ಹೊಸ, ರಫ್ತು-ಆಧಾರಿತ ವಾಣಿಜ್ಯ ಬೆಳೆಯಾಗಿ ಕಾಫಿ ಕೃಷಿಯಲ್ಲಿ ತಂತ್ರಜ್ಞಾನ ಸಹಕಾರವನ್ನು ಬಯಸಿರುವುದಾಗಿ ತಿಳಿಸಿದ್ದಾರೆ.

ಮಾತುಕತೆಯ ವೇಳೆ, ಸ್ಥಳೀಯ ರೈತರೊಂದಿಗೆ ತೊಡಗಿಸಿಕೊಳ್ಳಲು ಇಸ್ರೇಲ್‌ನ ಕೃಷಿ-ತಂತ್ರಜ್ಞಾನ ಕಂಪನಿಗಳು, ನಿಯೋಗಗಳು ಜಿಲ್ಲೆಗೆ ಭೇಟಿ ನೀಡುವಂತೆ ಸಂಸದರು ಇಸ್ರೇಲ್ ರಾಯಭಾರಿ ಮುಖೇನ ಆಹ್ವಾನ ನೀಡಿದ್ದಾರೆ. ರಾಯಭಾರಿ ಅಜಾರ್ ಅವರು ಕ್ಯಾ. ಚೌಟ ಅವರ ಪ್ರಸ್ತಾಪವನ್ನು ಸ್ವಾಗತಿಸಿದ್ದು, ಭಾರತದಲ್ಲಿ ಸುಸ್ಥಿರ ಮತ್ತು ತಂತ್ರಜ್ಞಾನ-ಚಾಲಿತ ಕೃಷಿಗೆ ಬೆಂಬಲ ನೀಡುವ ಇಸ್ರೇಲ್‌ನ ನಿಲುವಿಗೆ ಅನುಗುಣವಾಗಿ ಎಲ್ಲ ರೀತಿಯ ಸಹಕಾರವನ್ನು ನೀಡಲು ಬದ್ದರಾಗಿರುವುದಾಗಿ ಭರವಸೆ ನೀಡಿದ್ದಾರೆ. ಇದು ಭಾರತ-ಇಸ್ರೇಲ್ ನಡುವಿನ ಸಂಬಂಧಗಳನ್ನು ತಳಮಟ್ಟದಲ್ಲಿ ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಇಸ್ರೇಲ್ ನ ನಿಯೋಗ ಜಿಲ್ಲೆಗೆ ಭೇಟಿ ನೀಡುವುದಾದರೆ ಅದಕ್ಕೆ ಪೂರಕವಾಗಿರುವ ಎಲ್ಲಾ ರೀತಿಯ ಸಹಕಾರವನ್ನು ಸಂಸದನ ನೆಲೆಯಲ್ಲಿ ನೀಡಲು ಸಿದ್ದನಿರುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments