ದೊಡ್ಡವರನ್ನು ಟೀಕಿಸಿದವರು, ದೊಡ್ಡವರಾಗೋದಿಲ್ಲ,: ಕೆ.ವಿಕಾಸ್ ಹೆಗ್ಡೆ
ಖರ್ಗೆ ವಿರುದ್ಧ ಆರ್.ಅಶೋಕ್ ಟೀಕೆಗೆ ಪ್ರತಿಕ್ರಿಯೆ
ಕುಂದಾಪುರ: ದೊಡ್ಡವರನ್ನು ಟೀಕಿಸಿದರೆ ನಾವು ಕೂಡ ದೊಡ್ಡವರಾಗುತ್ತಾರೆ ಎನ್ನುವ ಭ್ರಮೆಯಲ್ಲಿ ಇರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸದರೇ, ತಾನು ಕೂಡ ರಾಷ್ಟ್ರೀಯ ನಾಯಕನಾಗಬಹುದು ಎನ್ನುವ ಭ್ರಮೆಯಲ್ಲಿ ಇದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಲೇವಡಿ ಮಾಡಿದ್ದಾರೆ.
ಬಿಜೆಪಿ ಆಂತರಿಕ ಕಲಹದಲ್ಲಿ ಎಲ್ಲೂ ಸಲ್ಲದ ಆರ್.ಅಶೋಕ್, ವಿರೋಧ ಪಕ್ಷದ ನಾಯಕ ಸ್ಥಾನ ಕಳಚಿಕೊಳ್ಳುತ್ತದೆ ಎನ್ನುವ ಆತಂಕದಲ್ಲಿ, ಖರ್ಗೆ ಅವರನ್ನು ಟೀಕಿಸಿ, ವರಿಷ್ಠರನ್ನು ಮೆಚ್ಚಿಸಿ, ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾದ ಬಳಿಕ ರಾಜ್ಯದ ಜನರ ಹಿತಾಸಕ್ತಿಗಾಗಿ ಕನಿಷ್ಠ ಪ್ರಯತ್ನವನ್ನು ಮಾಡದ ಅಶೋಕ್ ಅವರಿಗೆ, ರಾಜ್ಯದ ಅಭಿವೃದ್ಧಿಗಾಗಿ ಸುದೀರ್ಘ ಅವಧಿಯಲ್ಲಿ ಅನೇಕ ಕೊಡುಗೆಗಳನ್ನು ನೀಡಿರುವ ಹಿಂದುಳಿದ ವರ್ಗದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸುವ ಯಾವ ನೈತಿಕತೆಯೂ ಇಲ್ಲ.
ಮುಖ್ಯಮಂತ್ರಿಗಳ ನೆರಳಿನಂತೆ ಇರುವ ವಿರೋಧ ಪಕ್ಷದ ನಾಯಕರಾಗಿ, ರಾಜ್ಯದ ಅಭಿವೃದ್ಧಿಗಾಗಿ ಅವರ ಪ್ರಯತ್ನದಿಂದ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಸರ್ಕಾರದ ಒಂದೆರಡು ಯೋಜನೆಗಳನ್ನು ಹೆಸರಿಸಲಿ. ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದಿಂದ ಒಪ್ಪಿಗೆ ದೊರಕಿಸುವಲ್ಲಿ ಅವರು ಮಾಡಿರುವ ಪ್ರಯತ್ನಗಳ ವಿವರವನ್ನು ಜನರ ಮುಂದಿಡಲಿ. ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ರಾಜ್ಯದ ಪ್ರತಿನಿಧಿಗಳಾಗಿರುವ ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ಎಷ್ಟು ಬಾರಿ ಪ್ರಾಮಾಣಿಕವಾಗಿ ಚರ್ಚೆ ನಡೆಸಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೋಮುವಾದವನ್ನು ಬೆಂಬಲಿಸುವ ಪಕ್ಷದ ನಾಯಕರನ್ನು ನಿಯಂತ್ರಿಸಲಾಗದ ಆರ್.ಅಶೋಕ್ ಅವರು ಪ್ರತಿಪಕ್ಷ ನಾಯಕರಾಗಿ ಸಾಧಿಸಿರೋದು ಶೂನ್ಯ ಎಂದು ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಪಾಲಿನ ಬಾಕಿ ಹಣದ ಕುರಿತು ತುಟಿ ಬಿಚ್ಚದ ಅಶೋಕ್ ಅವರು, ಸ್ವಪಕ್ಷೀಯರಿಂದಲೇ ಟೀಕೆಗೆ ಒಳಗಾದವರು ಎನ್ನುವುದನ್ನು ಮರೆಯಬಾರದು. ಸಂವಿಧಾನದಲ್ಲಿ ಹೇಳಿರುವಂತೆ ಶಾಸಕಾಂಗ ವ್ಯವಸ್ಥೆಯಲ್ಲಿ ಅತ್ಯಂತ ಗೌರವದ ಹುದ್ದೆಯಾಗಿರುವ ವಿಧಾನಸಭೆಯ ಸ್ಪೀಕರ್ ಅವರನ್ನು ಬಹಿರಂಗವಾಗಿ ಟೀಕಿಸುವ ಸ್ವಪಕ್ಷೀಯ ಶಾಸಕರನ್ನು ನಿಯಂತ್ರಿಸಲಾಗದ ಅವರು, ಖರ್ಗೆಯಂತಹ ಸಜ್ಜನ ರಾಜಕಾರಣಿಯನ್ನು ಟೀಕಿಸುವ ಮೊದಲು ಹತ್ತು ಬಾರಿ ಆಲೋಚಿಸಲಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.