ದ.ಕ., ಉಡುಪಿ ಜಿಲ್ಲೆ ಹೆದ್ದಾರಿ ಪ್ರಾಧಿಕಾರದ ಕೆಲಸ ಅವೈಜ್ಞಾನಿಕ: ಐವನ್ ಡಿ’ಸೋಜಾ
ಮಂಗಳೂರು: ಕರಾವಳಿ ಭಾಗದಲ್ಲಿ ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ರಸ್ತೆಗಳೆಲ್ಲವೂ ಅವೈಜ್ಞಾನಿಕ, ಅಪೂರ್ಣ ಹಾಗೂ ರಾಷ್ಟ್ರೀಯ ಹೆದ್ದಾರಿ ನೀತಿಗಳಿಗೇ ವಿರುದ್ಧವಾದುದು. ಹಾಗಾಗಿ ಈ ಬಗ್ಗೆ ಕೇಂದ್ರ ಸರಕಾರ ತನಿಖಾ ತಂಡ ರಚಿಸಿ ತನಿಖೆ ನಡೆಸ ಬೇಕು. ಶ್ವೇತ ಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಹೆದ್ದಾರಿ ನಿರ್ಮಾಣದ ವೇಳೆ ಗುಣ ಮಟ್ಟವನ್ನು ಕಾದಾಡಿಲ್ಲ. ಎಲ್ಲಾ ಫೈ ಓವರ್ ಗಳೂ ವಿಫಲವಾಗಿವೆ. ರಸ್ತೆ ಕಾಮಗಾರಿ ಕಳಪೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳನ್ನು ತಾನು ನೀಡ ಬಲ್ಲೆ. ಕೇರಳದ ರಸ್ತೆಗಳು ಇದಕ್ಕಿಂತ ಎಷ್ಟೋ ಉತ್ತಮವಾಗಿವೆ. ಹವಾಮಾನ ಪರಿಸ್ಥಿತಿಯನ್ನು ನೋಡಿಕೊಂಡು ರಸ್ತೆ ನಿರ್ಮಾಣ ಮಾಡಬೇಕಾಗಿದೆ ಎಂದರು.
ಸುರತ್ಕಲ್ ನಲ್ಲಿ ಟೋಲ್ ಸಂಗ್ರಹ ನಿಲ್ಲಿಸಿದ್ದರಿಂದ ರಸ್ತೆ ದುರಸ್ತಿಗೆ ಹಣ ಇಲ್ಲ ಎಂದು ಸಂಸದರು ಹೇಳಿಕೆ ನೀಡಿರುವುದು ಖಂಡನೀಯ. ಈ ಮಾತನ್ನು ಅವರು ಸಂಸತ್ತಿನಲ್ಲಿ ಹೇಳಲಿ ಎಂದರು. ಕರಾವಳಿಯ ಮೂವರೂ ಸಂಸದರು ಸೇರಿ ಹೆದ್ದಾರಿ ದುರಸ್ತಿಗೆ ಕ್ರಮ ವಹಿಸ ಬೇಕೆಂದು ಒತ್ತಾಯಿಸಿದರು.