ದ.ಕ.ಜಿಲ್ಲಾ ಬಂದ್ಗೆ ಕರೆ ನೀಡಿದ್ದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯ ಹಿನ್ನೆಲೆಯಲ್ಲಿ ಮೇ 2ರಂದು ದ.ಕ.ಜಿಲ್ಲಾ ಬಂದ್ಗೆ ಕರೆ ನೀಡಿದ್ದ ಸಂಘಪರಿವಾರದ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯ ಹೊರಾಂಗಣದಲ್ಲಿ ಶರಣ್ ಪಂಪ್ವೆಲ್ ಮಾಧ್ಯಮಗೋಷ್ಠಿ ನಡೆಸಿ ಮೇ 2ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ದ.ಕ.ಜಿಲ್ಲಾ ಬಂದ್ಗೆ ಕರೆ ನೀಡಿದ್ದಲ್ಲದೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ನಗರದ ಬಹುತೇಕ ಕಡೆ ಸ್ಥಬ್ಧವಾಗಿತ್ತು. ಕೆಲವು ಅಂಗಡಿ ಮುಂಗಟ್ಟು ಮುಚ್ಚಿತ್ತು.
ಶರಣ್ ಪಂಪ್ವೆಲ್ನ ಪ್ರಚೋದನಕಾರಿ ಹೇಳಿಕೆಯಿಂದ ಆತನ ಬೆಂಬಲಿಗರು ನಗರದ ವಿವಿಧ ಕಡೆಗಳಲ್ಲಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿ ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಹಾಗಾಗಿ ಸಾರ್ವಜನಿಕ ಅಶಾಂತಿಯನ್ನು ಉಂಟು ಮಾಡಿದ್ದರಿಂದ ಶರಣ್ ಪಂಪ್ವೆಲ್ ವಿರುದ್ಧ ಸೆ.353 (2), 196 (1)(ಬಿ),49,324(2)(4)(5)ರಂತೆ ಪ್ರಕರಣ ದಾಖಲಿಸಲಾಗಿದೆ.