ಧರ್ಮಸ್ಥಳ:ರೈತರ ನೆಮ್ಮದಿಗಾಗಿ ಕೆರೆಗಳ ಪುನಶ್ಚೇತನ – ಕುಮಾರಸ್ವಾಮಿ

Spread the love

ಧರ್ಮಸ್ಥಳ:ರೈತರ ನೆಮ್ಮದಿಗಾಗಿ ಕೆರೆಗಳ ಪುನಶ್ಚೇತನ – ಕುಮಾರಸ್ವಾಮಿ

ಧರ್ಮಸ್ಥಳ: ಬರದ ಛಾಯೆ ನೀಗಿ ರಾಜ್ಯದ ರೈತರು ನೆಮ್ಮದಿಯಿಂದ ಬದುಕು ನಡೆಸುವಂತಾಗಬೇಕು. ಇದಕ್ಕಾ ಗಿಯೇ ರಾಜ್ಯದ ಸಮಸ್ತ ಕೆರೆಕಟ್ಟೆಗಳ ಪುನಶ್ಚೇತನ ಮಾಡುವ ಉದ್ದೇಶ ದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಜೊತೆಗೂಡಿ ‘ಕೆರೆ ಸಂಜೀವಿನಿ’ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಧರ್ಮಸ್ಥಳದ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿ ಷೇಕದ ಅಂಗವಾಗಿ ಶನಿವಾರ ನಡೆದ ಸಮಾರಂಭದಲ್ಲಿ ಚತುಷ್ಪಥ ರಸ್ತೆ ಉದ್ಘಾಟನೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಹಾಗೂ ಸಣ್ಣ ನೀರಾವರಿ ಇಲಾಖೆಯ ಕೆರೆ ಸಂಜೀವಿನಿ ಯೋಜನೆಯಡಿ ಜಂಟಿಯಾಗಿ 100 ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಕ್ರಮದ ಒಡಂಬಡಿಕೆ ವಿನಿಮಯ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಕೆರೆಗಳ ರಕ್ಷಣೆಯಿಂದ ರೈತ ಸಮೂಹ ವನ್ನು ಸಂಕಷ್ಟದಿಂದ ರಕ್ಷಿಸ ಬಹುದು ಎಂಬುದು ತಮ್ಮ ಸರ್ಕಾರದ ಅಚಲವಾದ ನಿಲುವು. ಆ ಮೂಲಕ ನಾಡಿನ ಜನತೆಗೆ ಶಕ್ತಿ ತುಂಬಲು ಸಾಧ್ಯವಿದೆ. ಈ ಯೋಜನೆಯು ಕರ್ನಾಟಕ ವನ್ನು ಜಲ ಸಮೃದ್ಧ ರಾಜ್ಯವ ನ್ನಾಗಿ ಮಾಡುತ್ತದೆ ಎಂಬ ನಂಬಿಕೆ ಇದೆ. ಧರ್ಮಸ್ಥಳ ಕ್ಷೇತ್ರದ ಕರ್ತೃತ್ವ ಶಕ್ತಿ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ಷೇತ್ರವು ತೋರುವ ಬದ್ಧತೆ ಇದಕ್ಕೆ ಕಾರಣ ಎಂದರು.

ಹಿಂದೂ ಮತ್ತು ಜೈನ ಧರ್ಮದ ಸಮನ್ವಯ ಕೇಂದ್ರವಾಗಿರುವ ಧರ್ಮಸ್ಥಳ ಸರ್ವ ಧರ್ಮ ಸಮನ್ವಯದ ಸ್ಥಳ. ಕನ್ನಡ ಸಂಸ್ಕೃತಿ ಮತ್ತು ಜೈನ ಸಂಸ್ಕೃತಿಗಳು ಒಂದರೊಳಗೆ ಒಂದು ಹಾಸು ಹೊಕ್ಕಾಗಿವೆ. ಇಂತಹ ಶ್ರೀಮಂತ, ಸಮೃದ್ಧ ಸಂಸ್ಕೃತಿಯ ಮುಂದುವರಿಕೆ ಯೇ ಧರ್ಮಸ್ಥಳ ಎಂದು ಹೇಳಿದರು.

ಎಸ್‌ಕೆಡಿಆರ್‌ಡಿಪಿ ಮೂಲಕ ಶ್ರೀ ಕ್ಷೇತ್ರವು ಲಕ್ಷಾಂತರ ಕುಟುಂಬಗಳ ಬದು ಕನ್ನು ಬದಲಿಸಿದೆ. ಸಾವಿರಾರು ಗ್ರಾಮಗಳ ಪುನಶ್ಚೇತನಕ್ಕೆ ಈ ಯೋಜನೆ ನಾಂದಿ ಹಾಡಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಿಸುವ ದಿಸೆಯಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯಕ್ರಮಗಳು ಅಗಾಧವಾದ ಪರಿಣಾಮ ಬೀರಿವೆ. ಕೆರೆ ಸಂಜೀವಿನಿ ಯೋಜನೆ ಕೂಡ ಗ್ರಾಮಗಳ ಬದುಕು ಬದಲಿಸುವಲ್ಲಿ ಯಶಸ್ವಿಯಾಗಲಿದೆ ಎಂದರು.

‘ನಾನು ಮಂಡಿಸಿದ ಬಜೆಟ್‌ ನಾಡಿನ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ. ಕೃಷಿಕರಿಗೆ ಶಕ್ತಿ ದೊರಕುವ ನಂಬಿಕೆ ಬಂದಿದೆ. ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿ ಮತ್ತು ನಾಡಿನ ಎಲ್ಲ ಜನರ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ದೊರೆಯಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಬೇಡುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ಕ್ರಾಂತಿಕಾರಿ ಯೋಜನೆ: ‘ಕೇವಲಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ‘ಕೆರೆ ಸಂಜೀವಿನಿ ಯೋಜನೆಯು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕ್ರಾಂತಿಕಾರಿ ಕಾರ್ಯಕ್ರಮ ಆಗಲಿದೆ. ಎಸ್‌ಕೆಡಿಆರ್‌ಡಿಪಿ ಮೂಲಕ ಹಳ್ಳಿಗಳಲ್ಲಿ ದ್ವೇಷ ತೊಡೆದು, ಒಗ್ಗಟ್ಟಿನ ಬದುಕನ್ನು ರೂಪಿಸಲು ಧರ್ಮಸ್ಥಳ ಕ್ಷೇತ್ರ ಕಾರಣವಾಯಿತು. ಅದೇ ರೀತಿಯಲ್ಲಿ ಕೆರೆ ಸಂಜೀವಿನಿಯ ಮೂಲಕ ಹಸಿರು ಕರ್ನಾಟಕದ ನಿರ್ಮಾಣಕ್ಕೆ ಬುನಾದಿ ಹಾಕಿದೆ’ ಎಂದರು.

ವ್ಯಕ್ತಿ, ಜಾತಿ, ಧರ್ಮದ ನೆಲೆಯಲ್ಲಿ ಗೊಂದಲ ಬಿತ್ತುವ, ದ್ವೇಷ ಹಬ್ಬಿಸುವ ಕೆಲಸಕ್ಕೆ ತೆರೆ ಬೀಳಬೇಕಿದೆ. ಪರಧರ್ಮ ಮತ್ತು ಪರ ವಿಚಾರಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಮುಖ್ಯ. ಸಂಪತ್ತಿನ ಲಾಲಸೆ ಕೊನೆಯಾಗಬೇಕಿದೆ. ಈ ಮಹಾಮಸ್ತಕಾಭಿಷೇಕವು ಅಂತಹ ಬದಲಾವಣೆಯ ಸಂದೇಶವನ್ನು ಜಗತ್ತಿಗೆ ಸಾರಲಿ ಎಂದು ಹೇಳಿದರು.

ಕೆರೆ ಸಂರಕ್ಷಣೆಗೆ ಹೆಜ್ಜೆ: ಎಸ್‌ಕೆಡಿ ಆರ್‌ಡಿಪಿ ಜೊತೆ ಒಡಂಬಡಿಕೆಗೆ ಸಹಿ ಹಾಕಿದ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಮಾತನಾಡಿ, ‘ಎಸ್‌ಕೆಡಿಆರ್‌ಡಿಪಿ ಜೊತೆಗೂಡಿ 100 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು ₹ 28 ಕೋಟಿ ವೆಚ್ಚದ ಯೋಜನೆ. ₹ 11.24 ಕೋಟಿಯನ್ನು ಇಲಾಖೆ ಭರಿಸುತ್ತದೆ. ₹ 16.7 ಕೋಟಿಯನ್ನು ಎಸ್‌ಕೆಡಿಆರ್‌ಡಿಪಿ ಭರಿಸುತ್ತದೆ’ ಎಂದು ವಿವರಿಸಿದರು.

ಕೆರೆಗಳ ಸಂರಕ್ಷಣೆಯ ಮೂಲಕ ಕೃಷಿ ಕ್ಷೇತ್ರವನ್ನು ಸಶಕ್ತಗೊಳಿಸಬೇಕಿದೆ. ಈ ಉದ್ದೇಶದಿಂದ ಇಲಾಖೆಯು ಇಂತಹ ಕಾರ್ಯಕ್ರಮ ರೂಪಿಸಿದೆ. ಸರ್ಕಾರದ ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ನೀರು ಬಳಕೆದಾರರನ್ನು ಈ ಯೋಜನೆಯಡಿ ತರಲಾಗುತ್ತಿದೆ ಎಂದರು.

ಮಹಾಮಸ್ತಕಾಭಿಷೇಕದ ಅಂಗ ವಾಗಿ ಅಂಚೆ ಇಲಾಖೆಯು ರೂಪಿಸಿರುವ ಲಕೋಟೆಯನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಬಿಡುಗಡೆ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯರಾದ ಬಿ.ಎಂ.ಫಾರೂಕ್‌, ಎಸ್‌.ಎಲ್‌.ಭೋಜೇಗೌಡ, ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಐಜಿಪಿ ಅರುಣ್‌ ಚಕ್ರವರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆರ್‌.ಸೆಲ್ವಮಣಿ, ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಬಾಬು, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯುಂಜಯ ಸ್ವಾಮಿ, ಡಿ.ಹರ್ಷೇಂದ್ರಕುಮಾರ್‌ ವೇದಿಕೆಯಲ್ಲಿದ್ದರು.

ಜನರ ಪ್ರೀತಿ ಗಳಿಸಿದ ನಾಯಕ

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜನರ ಪ್ರೀತಿ ಗಳಿಸಿದ ನಾಯಕ. ಅವರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಜನರು ಅವರನ್ನು ಪ್ರೀತಿಸುತ್ತಾರೆ. ಕುಮಾರಸ್ವಾಮಿ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂಬ ಭರವಸೆ ಜನರಲ್ಲಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಕುಮಾರಸ್ವಾಮಿ ಒಳ್ಳೆಯ ಬಜೆಟ್‌ ನೀಡಿರುವುದು ಸಂತೋಷ ತಂದಿದೆ. ಎಲ್ಲರಿಗೂ ಅನುಕೂಲ ಮಾಡಿಕೊಡುವ ಭರವಸೆ ಹುಟ್ಟಿಸಿದ್ದಾರೆ. ಅವರಿಗೆ ಎಲ್ಲ ಆತಂಕಗಳು ದೂರವಾಗಲಿ. ಕೆಲಸ ಮಾಡಲು ಅವಕಾಶ ದೊರಕಲಿ ಎಂದು ಮಂಜುನಾಥಸ್ವಾಮಿಯಲ್ಲಿ ನಾನು ಬೇಡುತ್ತೇನೆ’ ಎಂದರು.

‘ಬದುಕು ಮತ್ತು ಬದಕಲು ಬಿಡು’ ಎಂಬುದು ಜೈನ ಧರ್ಮ ಸಾರುವ ದೊಡ್ಡ ಸಂದೇಶ. ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕದ ಮೂಲಕ ಅಂತಹ ಸಂದೇಶ ಸಾರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.


Spread the love