ನಕ್ಷತ್ರದಲ್ಲಿ ಗೋದಲಿ ನಿರ್ಮಿಸಿ ಕ್ರಿಸ್ಮಸ್ ಸಂದೇಶ ಸಾರುತ್ತಿರುವ ಕಿನ್ನಿಮೂಲ್ಕಿಯ ರೊಕ್ಕಿ ಡಾಯಸ್

Spread the love

ನಕ್ಷತ್ರದಲ್ಲಿ ಗೋದಲಿ ನಿರ್ಮಿಸಿ ಕ್ರಿಸ್ಮಸ್ ಸಂದೇಶ ಸಾರುತ್ತಿರುವ ಕಿನ್ನಿಮೂಲ್ಕಿಯ ರೊಕ್ಕಿ ಡಾಯಸ್

ಉಡುಪಿ: ಯೇಸುವಿನ ಜನನದ ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದೆ. ಇಡೀ ಜಗತ್ತು ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿ ತೊಡಗಿಕೊಂಡಿದೆ. ಪ್ರತಿಯೊಂದು ಮನೆ ಚರ್ಚುಗಳ ಪಕ್ಕದಲ್ಲಿ ಯೇಸುವಿನ ಜನನದ ಸಂದೇಶ ಸಾರುವ ಗೋದಲಿಯ ನಿರ್ಮಾಣದ ಭರದಿಂದ ಸಾಗುತ್ತಿದೆ. ಕಳೆದ 20 ವರ್ಷಗಳಿಂದ ಉಡುಪಿಯಲ್ಲೊಬ್ಬರು ಬೃಹತ್ ಗಾತ್ರದ ನಕ್ಷತ್ರದಲ್ಲಿಯೇ ಗೋದಲಿಯನ್ನು ರಚಿಸಿ ಸಾರ್ವಜನಿಕ ಸ್ಥಳದಲ್ಲಿ ನೇತಾಡಿಸಿ ಜನರಿಗೆ ಯೇಸುವಿನ ಜನದ ಸಂದೇಶವನ್ನು ಇದರ ಮೂಲಕ ಸಾರುವ ಕೆಲಸ ಮಾಡಿಕೊಂಡು ಬಂದಿರುತ್ತಾರೆ.

ಉಡುಪಿ ಕಿನ್ನಿಮೂಲ್ಕಿಯ ಸ್ವಾಗತ ಗೋಪುರದ ಬಳಿಯ ನಿವಾಸಿಗಳಾದ ರೊಕ್ಕಿ ಮತ್ತು ವಿಲ್ಮಾ ಡಾಯಸ್ ಅವರು ಕಳೆದ 20 ವರ್ಷಗಳಿಂದ ಇಂತಹ ಒಂದು ವಿಶೇಷ ನಕ್ಷತ್ರವನ್ನು ಸತಃ ತಾವೇ ನಿರ್ಮಾಣ ಮಾಡಿ ಅದರ ಒಳಗಡೆ ಯೇಸುವಿನ ಜನನದ ಸಂದೇಶ ಸಾರುವ ಕ್ರಿಸ್ಮಸ್ ಕ್ರಿಬ್ ಅಥವಾ ಗೋದಲಿಯನ್ನು ನಿರ್ಮಿಸಿದ್ದಾರೆ. ಅದನ್ನು ತಮ್ಮ ಮನೆಯ ಕಂಪೌಂಡಿನ ಹೊರಗಡೆ ಸಾರ್ವಜನಿಕವಾಗಿ ನೇತು ಹಾಕಿದ್ದು ಪ್ರತಿನಿತ್ಯ ನೂರಾರು ಮಂದಿ ಇದನ್ನು ವೀಕ್ಷಿಸಿ ಸಂತೋಷಪಡುತ್ತಿದ್ದಾರೆ.

ಸುಮಾರು 18 ವರ್ಷಗಳ ಕಾಲ ವಿದೇಶದಲ್ಲಿದ್ದ ರೊಕ್ಕಿ ಡಾಯಸ್ ಅವರು ಅಲ್ಲಿನ ಸೇವೆಯನ್ನು ಮುಗಿಸಿ 25 ವರ್ಷಗಳಿಂದ ಕಿನ್ನಿಮೂಲ್ಕಿಯಲ್ಲಿ ನೆಲೆಸಿದ್ದು, ಪತ್ನಿ ವಿಲ್ಮಾ ಡಾಯಸ್ ಕೂಡ ವೃತ್ತಿಯಲ್ಲಿ ವಕೀಲರು. ಕ್ರಿಸ್ಮಸ್ ಸಮಯದಲ್ಲಿ ಮನೆಯಲ್ಲಿಯೇ ಇಂತಹ ಬೃಹತ್ ಗಾತ್ರದ ನಕ್ಷತ್ರವನ್ನು ನಿರ್ಮಿಸುವುದು ಇವರ ಒಂದು ಹವ್ಯಾಸವಾಗಿದೆ.

ಸಂಪೂರ್ಣವಾಗಿ ಬಿದಿರಿನ ಕೋಲುಗಳನ್ನು ಬಳಸಿದ ನಕ್ಷತ್ರ 7 ಫೀಟ್ ಎತ್ತರವನ್ನು ಹೊಂದಿದೆ. ಬಿದಿರಿನ ಕೋಲುಗಳಿಂದ ನಕ್ಷತ್ರಾಕಾರದಲ್ಲಿ ರಚಿಸಿ ಬಿಳಿಯ ಗ್ಲಾಸ್ ಪೇಪರ್ ಬಳಸಿಕೊಂಡು ನಿರ್ಮಿಸಿರುವ ನಕ್ಷತ್ರದ ಮಧ್ಯದ ಭಾಗದಲ್ಲಿ ಯೇಸು ಕ್ರಿಸ್ತನ ಜನನದ ಸಂದೇಶ ಸಾರುವ ಗೋದಲಿಯನ್ನು ಕೂಡ ನಿರ್ಮಿಸಿದ್ದಾರೆ. ಅಲ್ಲದೆ ನಕ್ಷತ್ರದ ಎಲ್ಲಾ ರೆಕ್ಕೆಗಳಲ್ಲೂ ಕೂಡ ಲೈಟ್ ಅಳವಡಿಸಿದ್ದು ರಾತ್ರಿಯ ಸಮಯದಲ್ಲಿ ಆಕರ್ಷಕವಾಗಿ ಕಾಣುತ್ತದೆ.

ಪ್ರತಿಯೊಬ್ಬರು ಇಂದು ರೆಡಿಮೇಡ್ ವಸ್ತುಗಳಿಗೆ ಮಾರು ಹೋಗುತ್ತಿದ್ದು, ನಾವೇ ಮನೆಯಲ್ಲಿ ಸ್ವತಃ ಇಂತಹ ಗೋದಲಿ, ನಕ್ಷತ್ರವನ್ನು ನಿರ್ಮಿಸಿ ತೂಗು ಹಾಕಿದರೆ ಇದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ ಎನ್ನುತ್ತಾರ ರೊಕಿ ವಿಲ್ಮಾ ಡಾಯಸ್ ದಂಪತಿಗಳು.


Spread the love