ನವೆಂಬರ್ 28 ರಂದು ಮಂಗಳೂರಿಗೆ ಪ್ರಧಾನಿ ಆಗಮನ : ಅಗತ್ಯ ಸಿದ್ಧತೆಗಳ ಪರಿಶೀಲನೆ

Spread the love

ನವೆಂಬರ್ 28 ರಂದು ಮಂಗಳೂರಿಗೆ ಪ್ರಧಾನಿ ಆಗಮನ : ಅಗತ್ಯ ಸಿದ್ಧತೆಗಳ ಪರಿಶೀಲನೆ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಉಡುಪಿಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆಗೆ ಹಿರಿಯ ಅಧಿಕಾರಿಗಳ ಸಭೆ ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯಿತು.

ಹಿರಿಯ ಎಸ್.ಪಿ.ಜಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ವಿಮಾನ ನಿಲ್ದಾಣದ ಅಧಿಕಾರಿಗಳು, ಸಿ.ಐ.ಎಸ್.ಎಫ್, ಪೊಲೀಸ್ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನವೆಂಬರ್ 28 ರಂದು ಬೆಳಿಗ್ಗೆ 8:15ಕ್ಕೆ ನವದೆಹಲಿಯಿಂದ ಹೊರಡುವ ಪ್ರಧಾನಮಂತ್ರಿಗಳು 11:05 ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ನಂತರ ವಾಯುಪಡೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ನಿರ್ಗಮಿಸಲಿದ್ದಾರೆ.

ಉಡುಪಿಯ ಕಾರ್ಯಕ್ರಮದ ಬಳಿಕ ಅಪರಾಹ್ನ 2:10 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಗೋವಾಕ್ಕೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಎಲ್ಲಾ ರೀತಿಯ ಅತ್ಯುನ್ನತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು. ಆ್ಯಂಬುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ವಾಹನ ಸೇರಿದಂತೆ ಸೌಲಭ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಎಸ್.ಪಿ.ಜಿ ಅಧಿಕಾರಿಗಳು ಸೂಚಿಸಿದರು.

ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಸುಸ್ಥಿತಿಯಲ್ಲಿ ಇಡಬೇಕು. ಅಗತ್ಯ ಬಿದ್ದರೆ ಬಳಸಲು ಸಕ್ರ್ಯೂಟ್ ಹೌಸ್ ಹಾಗೂ ಉನ್ನತ ಆಸ್ಪತ್ರೆಯನ್ನು ಸನ್ನದ್ದವಾಗಿಡಲು ಸೂಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಡಿಸಿಪಿಗಳು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments