ನಾಪತ್ತೆಯಾದ ಮೀನುಗಾರರ ಬಗ್ಗೆ ಸುಳಿವು – ಗೃಹ ಸಚಿವರ ಹೇಳಿಕೆ ಸತ್ಯಕ್ಕೆ ದೂರ – ಯಶ್ಪಾಲ್ ಸುವರ್ಣ

Spread the love

ನಾಪತ್ತೆಯಾದ ಮೀನುಗಾರರ ಬಗ್ಗೆ ಸುಳಿವು – ಗೃಹ ಸಚಿವರ ಹೇಳಿಕೆ ಸತ್ಯಕ್ಕೆ ದೂರ – ಯಶ್ಪಾಲ್ ಸುವರ್ಣ

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟಿನ ಕುರಿತು ಸುಳಿವು ಲಭಿಸಿದೆ ಎಂದು ರಾಜ್ಯದ ಗೃಹ ಸಚಿವರು ಹೇಳಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ದಕ ಮತ್ತು ಉಡುಪಿ ಜಿಲ್ಲಾ ಮೀನುಗಾರ ಫೇಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದ್ದಾರೆ.

ಅವರು ಶುಕ್ರವಾರ ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿಶೇಷವಾದ ಪ್ರಯತ್ನಗಳು ಮುಂದುವರೆದಿದ್ದು ವಿಶೇಷವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಮೀನುಗಾರರ ಪತ್ತೆ ನಿಟ್ಟಿನಲ್ಲಿ ಅವರು ಹಲವಾರು ತಂಡಗಳನ್ನು ರಚಿಸಿ ಪತ್ತೆ ಕಾರ್ಯವನ್ನು ಅವರು ಅವರ ವ್ಯಾಪ್ತಿಯಲ್ಲಿ ನಡೆಸುತ್ತಿದ್ದ ಆ ತಂಡಗಳಲ್ಲಿ ನಮ್ಮ ಮೀನುಗಾರರನ್ನು ಕೂಡ ಸೇರಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ ಆದರೆ ಇದುವರೆಗೆ ಯಾವುದೇ ರೀತಿಯ ನಿಖರ ಸುಳಿವು ನಮಗೆ ಲಭಿಸಿಲ್ಲ. ಈಗಾಗಲೇ ರಾಜ್ಯದ ಗೃಹಮಂತ್ರಿಗಳು ಸುಳಿವು ಲಭ್ಯವಾಗಿದೆ ಎಂದು ಹೇಳಿರುವ ಕುರಿತು ಕೆಲವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಆದರೆ ಅದು ಸತ್ಯಕ್ಕೆ ದೂರವಾದ ಸಂಗತಿ. ಬೋಟಿನಲ್ಲಿ ಹಲವಾರು ರೀತಿಯ ವಸ್ತುಗಳು ಇರುತ್ತದೆ ಅಲ್ಲದೆ ಸುಮಾರು 10000ಕ್ಕೂ ಮಿಕ್ಕಿದ ಡಿಸೇಲ್ ಕೂಡ ಇರುತ್ತದೆ. ಒಂದು ವೇಳೆ ಏನಾದರೂ ಅನಾಹುತ ಉಂಟಾದಲ್ಲಿ ಆ ಡಿಸೇಲ್ ಆದರೂ ಮೇಲೆ ಬರಬೇಕಾಗಿತ್ತು ಆದರೆ ಅಂತಹ ಯಾವುದೇ ರೀತಿಯ ಕುರುಹು ಕೂಡ ಲಭ್ಯವಾಗಿಲ್ಲ.

ಈಗಾಗಲೇ ನಾವು ದೇಶದ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿಯನ್ನು ಕೂಡ ಸಲ್ಲಿಸಿದ್ದು ಅವರೂ ಕೂಡ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ದೇಶದಲ್ಲಿ ಇರುವ ಯಾವುದೇ ರೀತಿಯ ಉನ್ನತ ತಂತ್ರಜ್ಷಾನದಿಂದ ಹುಡುಕಾಟ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳೀದ್ದಾರೆ.

ನಿನ್ನೆಯ ದಿನ ರಾಜ್ಯದ ಕ್ಯಾಬಿನೆಟ್ ಸಭೆ ನಡೆದಿದ್ದು ಅದರಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದು ಕೂಡಲೇ ಮುಂಬೈ ಮತ್ತು ಗೋವಾ ರಾಜ್ಯದ ಗೃಹಮಂತ್ರಿಗಳ ಜೊತೆ ಸಭೆ ನಡೆಸಲು ತೀರ್ಮಾನ ಕೂಡ ಮಾಡಲಾಗಿದೆ. ಸ್ಥಳೀಯ ಮೀನುಗಾರರು, ಪೋಲಿಸ್ ಹಾಗೂ ಕೋಸ್ಟ್ ಗಾರ್ಡ್ ಅವರುಗಳನ್ನ ಸೇರಿಸಿ ಸಭೆ ನಡೆಸಿ ಇನ್ನಷ್ಟು ತೀವ್ರರೀತಿಯಲ್ಲಿ ಹುಡುಕಾಟ ನಡೆಸುವ ಕುರಿತು ಕೂಡ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.

ಮೀನುಗಾರಿಕೆ ದೇಶದ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಕೊಡುಗೆ ನೀಡಿದ ಕ್ಷೇತ್ರವಾಗಿದೆ. ಈ ಘಟನೆಯ ಬಳಿಕ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು ಇದರಿಂದ ದಿನಕ್ಕೆ 8 ರಿಂದ 10 ಕೋಟಿ ರೂಗಳ ನಷ್ಟವನ್ನು ಅನುಭವಿಸುತ್ತಿದ್ದೇವೆ. ಮುಂದೆ ನಾಳೆಯಿಂದ ಹಂತ ಹಂತವಾಗಿ ಮೀನುಗಾರಿಕೆಗೆ ತೆರಳುವ ಕುರಿತು ಶುಕ್ರವಾರ ಸಂಜೆ ಮೀನುಗಾರರ ಸಂಘ ಸಭೆ ಸೇರಿ ನಿರ್ಣಯ ಕೈಗೊಳ್ಳಲಿದೆ ಇದೆ ವೇಳೆ ಬೋಟ್ ಹಾಗೂ ಮೀನುಗಾರರ ಪತ್ತೆ ಕಾರ್ಯ ಕೂಡ ಆದಷ್ಟು ಶೀಘ್ರವಾಗಿ ನಡೆಯಬೇಕು ಎಂದರು.


Spread the love