ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ರೂ 500 ಕೋಟಿ ಅನುದಾನ ನೀಡಲು ಸಿಎಂ ಗೆ ಮನವಿ – ಮಂಜುನಾಥ ಪೂಜಾರಿ
ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವದ ಅಂಗವಾಗಿ ಡಿ.3ರಂದು ಕೊಣಾಜೆ ಮಂಗಳಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶ್ರೀಮಹಾಗುರುವಿನ ಮಹಾ ಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ ಶತಮಾನೋತ್ಸವ ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಈ ವೇಳೆ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ರೂ 500 ಕೋಟಿ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಹೇಳಿದರು.

ಕರ್ನಾಟಕದ ಮುಖ್ಯಮಂತ್ರಿಗಳ ಸಾಲಿನಲ್ಲಿ ಶೋಷಿತ ಸಮುದಾಯದವರ ಶ್ರೇಯೋಭಿವೃದ್ಧಿಗಾಗಿ ‘ಅಭಿನವ ದೇವರಾಜ ಆರಸ್’ ಎನ್ನುವ ಗೌರವಕ್ಕೆ ಪಾತ್ರರಾದವರು ತಾವು ನೆನೆಗುದಿಗೆ ಬಿದ್ದಿದ್ದ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ ಹಿಂದುಳಿದ ಸಮಾಜದ 26 ಪಂಗಡಗಳಲ್ಲಿ ಹರ್ಷವನ್ನು ಮೂಡಿಸಿರುತ್ತೀರಿ. ಪ್ರಸ್ತುತ ಈ 26 ಪಂಗಡಗಳ ಅಭಿವೃದ್ಧಿಗೆ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದು ಅದು ಇಂತಿದೆ.
1. ಶಿಕ್ಷಣ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣವನ್ನು ದೊರಕಿಸುವಲ್ಲಿ ಅಭಿವೃದ್ಧಿ ನಿಗಮ ಶ್ರಮಿಸಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ವೃತ್ತಿ ಮಾರ್ಗದರ್ಶನ ತರಬೇತಿ, ಐಎಎಸ್, ಐಪಿಎಸ್ ಉನ್ನತ ಶಿಕ್ಷಣಕ್ಕೆ ತರಬೇತಿ ಇತ್ಯಾದಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
2. ಉದ್ಯೋಗ: ಸ್ವ ಉದ್ಯೋಗ ನಡೆಸಲು ತರಬೇತಿ ಮತ್ತು ಸಾಲ ಸೌಲಭ್ಯ, ಸಮುದಾಯಗಳ ಕುಲಕಸುಬಾಗಿರುವ ನೀರಾ ಉತ್ಪಾದನೆ, ಶೇಂದಿ ಇಳಿಸುವ ಬಗ್ಗೆ ತರಬೇತಿಯನ್ನು ನೀಡಿ ಆಧುನಿಕ ಸ್ಪರ್ಶವನ್ನು ನೀಡುವುದು. ನಾಟಿ ವೈದ್ಯ ಮತ್ತು ಆಯುರ್ವೇದಕ್ಕೆ ಪ್ರೋತ್ಸಾಹವನ್ನು ನೀಡುವುದು.
3. ಉದ್ಯಮ: ಕಲ್ಪರಸ ತಯಾರಿ ಉದ್ಯಮ ಹಾಗೂ ಪ್ರವಾಸೋದ್ಯಮ, ಸೇವಾಧರಿತ ಉದ್ಯಮ ಮತ್ತು ಇನ್ನಿತರ ಉದ್ಯಮ ಸ್ಥಾಪನೆಗೆ ಸಬ್ಸಿಡಿಯೊಂದಿಗೆ ಸರ್ವ ಸಹಕಾರ ನೀಡುವುದು. ಹೆಚ್ಚು ಉದ್ಯೋಗ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದು. ಕುಲಕಸುಬಾದ ಶೇಂದಿ, ಕಲ್ಪರಸ ತಯಾರಿ ಉದ್ಯಮದ ಮೌಲ್ಯ ವರ್ಧನೆಗಾಗಿ (R&D) Research And Development Centre ಸ್ಥಾಪಿಸುವುದು, ಡಿಜಿಟಲಿಕರಣದ ಮಾಹಿತಿ ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರಗಳನ್ನು ತೆರೆಯುವುದು.
4. ಧಾರ್ಮಿಕ: ಸಮುದಾಯದ ಹಿರಿಯರು ಆರಾಧಿಸಿಕೊಂಡು ಬರುತ್ತಿರುವ ಗರಡಿಗಳ ಅರ್ಚಕರಿಗೆ ಮತ್ತು ಸಮುದಾಯಕ್ಕೆ ಸಂಬಂಧಿಸಿದ ಧಾರ್ಮಿ ಕೇಂದ್ರದ ಅರ್ಚಕರು ಮತ್ತು ಸಹಾಯಕರಿಗೆ ಮಾಸಾಸನ ನೀಡುವುದು. 60 ವರ್ಷದ ನಂತರ ಪಿಂಚಣಿ ಸೌಲಭ್ಯವನ್ನು ಒದಗಿಸುವುದು.
5. ಮಹಿಳಾ ಸಬಲೀಕರಣ: ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಮತ್ತು ಸ್ವ ಉದ್ಯೋಗ ಕೈಗೊಳ್ಳಲು ಪೂರಕವಾಗಿರುವ ತರಬೇತಿಯನ್ನು ನೀಡುವುದು. ಮಹಿಳಾ ಗುಂಪುಗಳನ್ನು ರಚಿಸಿ ಕನಿಷ್ಠ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು.
6. ಉತ್ತರ ಕರ್ನಾಟಕ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
7. ಕ್ರೀಡೆ, ಸಿನೆಮಾ ಇನ್ನಿತರ ಕಲೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಧನೆ ಮಾಡಿದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವುದು.
8. ಕಲೆ, ಕ್ರೀಡೆ, ಸಾಹಿತ್ಯ, ಶಿಕ್ಷಣ, ಜಾನಪದ, ನಾಟಿವೈದ್ಯ ಇನ್ನಿತರ ಕ್ಷೇತ್ರಗಳಲ್ಲಿ ಸಮಾಜದ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ನಗದು ಪುರಸ್ಕಾರದೊಂದಿಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡುವುದು.
9. ಶೇಂದಿ ಮತ್ತು ಕಲ್ಪರಸ ತಯಾರಿಕೆಯಲ್ಲಿ ನಿರತರಾಗಿರುವ ಆಕಸ್ಮಿಕ ಅಪಘಾತ ಉಂಟಾದಾಗ ಅವಲಂಬಿತ ಕುಟುಂಬಕ್ಕೆ ಪರಿಹಾರ ನೀಡುವುದು.
9. ಆಯುರ್ವೇದಕ್ಕೆ ಸಂಬಂಧಿಸಿದ ಗಿಡಮೂಲಿಕೆಗಳನ್ನು ಮತ್ತು ಶೇಂದಿ ಮ ಕಲ್ಪರಸ ಉತ್ಪಾದನೆಯ ಬೆಳೆಗಳನ್ನು ರೈತರಿಗೆ ಬೆಳೆಸಲು ಅದಕ್ಕೆ ಸಂಬಂಧಿಸಿದ ಗಿಡಗಳ ಪಾಂಟ್ರೇಶನ್‌ಗೆ ಉತ್ತೇಜನ ನೀಡುವುದು.
10. ನಾರಾಯಣಗುರುಗಳ ಸಾಮರಸ್ಯದ ಸಂದೇಶಗಳನ್ನು ಕರ್ನಾಟಕದ ಎಲ್ಲೆಡೆ ಪ್ರಚಾರ ಮಾಡುವುದು.
ಸುದ್ದಿಗೋಷ್ಠಿಯಲ್ಲಿ ಅಶೋಕ್ ಪೂಜಾರಿ ಬೀಜಾಡಿ, ಡಾ. ಸಂತೋಷ್ ಕುಮಾರ್, ಮಹೇಶ್ ಅಂಚನ್ ಉಪಸ್ಥಿತರಿದ್ದರು.












