ನ್ಯಾಯ ದ್ರಾರಿದ್ರ್ಯದ ದೇಶದಲ್ಲಿ ಹುಟ್ಟಿರುವುದಕ್ಕಾಗಿ ಪರಿತಪಿಸುತಿರುವ ಹಿರಿಯರು

Spread the love

ನ್ಯಾಯ ದ್ರಾರಿದ್ರ್ಯದ ದೇಶದಲ್ಲಿ ಹುಟ್ಟಿರುವುದಕ್ಕಾಗಿ ಪರಿತಪಿಸುತಿರುವ ಹಿರಿಯರು

ಉಡುಪಿ: ಕರ್ನಾಟಕ ಹಿರಿಯ ನಾಗರಿಕ ಪೋಷಣೆ ಮತ್ತು ಸಂರಕ್ಷಣೆಯ ಕಾಯಿದೆಯಡಿ ನ್ಯಾಯ ಮಂಡಳಿಗಳು ನೀಡಿರುವ ಆದೇಶವನ್ನು ಅನುಷ್ಠಾನ ಮಾಡಬೇಕಾಗಿರುವ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಹಿರಿಯರಿಗೆ ನ್ಯಾಯ ಮರೀಚಿಕೆಯಾಗಿದೆ ಎಂದು ಉಡುಪಿ ಮಾನವ ಹಕ್ಕಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಹೇಳಿದರು.

ಅವರು ಗುರುವಾರ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಹಿರಿಯ ನಾಗರೀಕರ ರಕ್ಷಣೆಗಾಗಿ ಭಾರತ ಸರಕಾರ ಪ್ರಬಲ ಕಾಯಿದೆಯೊಂದನ್ನು ರಚಿಸಿ ದಶಕವೊಂದು ಕಳೆದಿದೆ. ಈ ಕಾಯಿದೆಯ ಕುರಿತು ಇತ್ತೀಚೆಗೆ ಸಾಕಷ್ಟು ಜನ ಜಾಗೃತಿ ರೂಪಣೆಯಾಗಿದ್ದರೂ ನ್ಯಾಯಮಂಡಳಿಗಳಿಂದ ಸೂಕ್ತ ಆದೇಶಗಳು ಹೊರಡುತಿದ್ದರೂ ಹಿರಿಯರ ಗೋಳು ನಿಂತಿಲ್ಲ. ಪ್ರತಿ ಉಪ ವಿಭಾಗದಲ್ಲಿ ರಚಿತವಾಗಿರುವ ನ್ಯಾಯಮಂಡಳಿಗಳು ಹಿರಿಯರ ಪರವಾಗಿ ನೀಡುತ್ತಿರುವ ಆದೇಶಗಳನ್ನು ಅನುಷ್ಠಾನ ಮಾಡಬೇಕಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೆವಿನ್ಯೂ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಕಛೇರಿಗಳ ಸಮನ್ವಯದ ಕೊರತೆಯಿಂದಾಗಿ ಹಿರಿಯ ಜೀವಿಗಳಿಗೆ ನ್ಯಾಯವೆಂಬುದು ಮರೀಚಿಕೆಯಾಗಿದೆ.

ಮೊದಮೊದಲು ಹಿರಿಯ ನಾರೀಕರ ರಕ್ಷಣಾ ನ್ಯಾಯ ಮಂಡಳಿಗಳಲ್ಲಿ ದೂರು ದಾಖಲಿಸಲು ಮಾರ್ಗದರ್ಶನ ಕೋರಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ಬರುತ್ತಿದ್ದ ಹಿರಿಯ ಜೀವಗಳು ಇದೀಗ ವರ್ಷಗಟ್ಟಲೆ ಬಾಕಿ ಇರುವ ಆದೇಶಗಳ ಅನುಷ್ಠಾನಕ್ಕೆ ಸಹಕರಿಸ ಬೇಕೆಂದು ಉಡುಪಿಯತ್ತ ಧಾವಿಸುತಿದ್ದಾರೆ.

ಈ ರೀತಿ ನ್ಯಾಯ ಯಾಚಿಸಿ ಪ್ರತಿಷ್ಠಾನವನ್ನು ಸಂಪರ್ಕಿಸಿದ 23 ಹಿರಿಯರಲ್ಲಿ 8 ಮಂದಿ ಈಗಾಗಲೇ ಇಹಲೋಕವನ್ನು ತ್ಯೆಜಿಸಿದರೆ ಉಳಿದವರು ನ್ಯಾಯ ನಿರೀಕ್ಷಣೆಯಲ್ಲಿ ಜೀವ ಹಿಡಿದು ಬದುಕುಳಿದಿದ್ದಾರೆ.

ಇದೀಗ 80ರ ಹರೆಯದಲ್ಲಿರುವ ಗಿರಿಜಕ್ಕ ಬಳೆಗಾರ ಜನಾಂಗದವಳು. ಆಕೆಗೆ ಮಕ್ಕಳಿಲ್ಲ-ಮರಿಯಿಲ್ಲ, ಬಳೆ ಮಾರಲು ಆಕೆಗೆ ಅಂಗಡಿಯೂ ಇರಲಿಲ್ಲ, ಬೀದಿ ಬೀದಿತಿರುಗಿ ಸಂತೆ-ಜಾತ್ರೆಗಳಿಗೆ ಹೋಗಿ ಬಳೆ ಮಾರಿ ಗಳಿಸಿದ ಎರಡುಲಕ್ಷ ರೂಪಾಯಿಗಳನ್ನು ಮಂಗಳೂರಿನ ಕದ್ರಿ ಸಹಕಾರಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಲ್ಲಿಟ್ಟಿದ್ದಳು. ತನ್ನ ಕೊನೆಗಾಲದಲ್ಲಿ ಉಪಯೋಗಕ್ಕೆ ಬಂದಿತು ಎಂಬ ಆಸೆಯಲ್ಲಿ ದಿನಗಳೆಯುತಿದ್ದಳು.

ಎಲ್ಲಿಂದಲೋ ಬಂದ ರಾಮಪೂಜಾರಿ ಈ ವೃದ್ದೆಯ ಸ್ನೇಹಗಳಿಸಿ “ಗಿರಿಜಕ್ಕ ನೀವು ನನ್ನ ತಾಯಿ ಇದ್ದಂತೆ ಕೊನೆಗಾಲದಲ್ಲಿ ನಾನೇ ನೋಡಿಕೊಳ್ಳುತಿದ್ದೇನೆ” ಎಂದು ಆಶ್ವಾಸನೆ ನೀಡಿ ಆಕೆಯ ಆಜೀವ ಉಳಿತಾಯವನ್ನೇಲ್ಲ ಲಪಟಾಯಿಸಿದ, ಬಡ್ಡಿನೀಡುತ್ತೇನೆ, ಬೇಕಾದಾಗಲೆಲ್ಲ ಅಸಲನ್ನೂ ನೀಡುತ್ತೇನೆ ಎಂದು ಮಾತು ನೀಡಿ ಕೊನೆಗೆ ಪುಡಿಗಾಸನ್ನೂ ಕೊಡಲಿಲ್ಲ!

ವಕೀಲರೋರ್ವರ ಸಹಾಯದಿಂದ 2014ರಲ್ಲಿ ಮಂಗಳೂರಿನ ಸಿವಿಲ್ ನ್ಯಾಯಲಯದಲ್ಲಿ ಗಿರಿಜಕ್ಕ ಹೋಡಿದ ದಾವೆ 2016ರಲ್ಲಿ ಇತ್ಯಾರ್ಥವಾಯಿತು. ಬಡ್ಡಿಸಹಿತ 2,20,00/- ರೂಗಳನ್ನು ನೀಡುವಂತೇ ನ್ಯಾಯಾಧೀಶರೂ ಆದೇಶಿಸಿದರು. ತನ್ನ ಹಣ ಪಡೆಯಲು ಸುಮಾರು 10 ತಿಂಗಳ ಕಾಲ ಪರದಾಡಿದ ಗಿರಿಜಕ್ಕ ಕೊನೆಗೆ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದಳು. ಮಧುಮೇಹ, ರಕ್ತದೊತ್ತಡದಿಂದ ಬಳಲುತಿದ್ದ ಗಿರಿಜಕ್ಕನಿಗೆ ಸಹಿಹಾಕಲೂ ಸಾಧ್ಯವಾಗುವಿದಿಲ್ಲವೆಂದು ಗಮನಿಸಿದ ನಾವು ಸಂಘಟನೆಯ ವತಿಯಿಂದಲೇ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿದೆವು.

ಇದೀಗ ಮಂಗಳೂರಿನ ಉಪ ವಿಭಾಗಾದಿಕಾರಿಯವರು ಆಕೆಯ ಹಣ ತೆಗೆಸಿಕೊಡುವಂತೆ ಕೊಣಾಜೆಯ ಪೋಲಿಸ ಠಾಣೆಗೆ ಆದೇಶ ನೀಡಿ ಆರು ತಿಂಗಳುಗಳೇ ಕಳೆದಿವೆ. ಇದೀಗ ಮರಣ ಶಯ್ಯೆಯಲ್ಲಿರುವ ಗಿರಿಜಕ್ಕ ಆದೇಶ ಪಾಲನೆಯಾಗದಿರುವುದನ್ನು ಗಮನಿಸಿ. “ನನ್ನ ಔಷದಿಗಾದರೂ ಹಣಕೊಡಿಸಿ. ಒಂದು ವೇಳೆ ಹಣ ನನಗೆ ಸಿಗದಿದ್ದರೂ ಚಿಂತಿಲ್ಲ ರಾಮ ತಿನ್ನಬಾರದು. ದಯವಿಟ್ಟು  ಅ ಹಣವನ್ನು ಅನಾಥಶ್ರಮಕ್ಕಾದರೂ ಕೊಡಿಸಿ ಎನ್ನುತಿದ್ದಾಳೆ.

ಅದರಂತೆ ಮಂಡ್ಯದ ನಿವೃತ್ತ ಪ್ರಾಂಶುಪಾಲ ಡಿ.ಶಿವಣ್ಣ ಎಂವರು ಪತ್ನಿ ಹಾಗೂ ಮಕ್ಕಳಿಂದ ಮನೆಯಿಂದ ಹೊರ ಹಾಕಲ್ಪಟ್ಟು ಈ ಕುರಿತು ತನ್ನ ಪರವ ಕಾಯಿದೆಯಲ್ಲಿ ಆದೇಶ ಆಗಿದ್ದರೂ ಕೂಡ ನ್ಯಾಯ ಸಿಗದೆ ಅಲೆದಾಡುತ್ತಿದ್ದಾರೆ.

ಪತ್ನಿ ಹಾಗೂ ಆಕೆಯ ಮನೆಯವರು ಸೇರಿ ತನ್ನಿಂದ ಹಣ ಪಡೆದು ವಾಪಾಸು ಕೊಡದೆ ಬಳಿಕ ಮನೆಯಿಂದ ಹೊರಹಾಕಿದರು. ಈ ಕುರಿತು ಮಂಡ್ಯ ಎಸಿ ಕೋರ್ಟಿನಲ್ಲಿ ದೂರು ನೀಡಿದ ಬಳಿಕ ಅಲ್ಲಿ ಮನೆ ಖಾಲಿ ಮಾಡಿಸಿಕೊಡುವಂತೆ ಆದೇಶ ನೀಡಲಾಯಿತು. ಈ ಕುರಿತು ಎಲ್ಲಾ ಹಿರಿಯ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿದರೂ ನನಗೆ ನ್ಯಾಯ ಸಿಕ್ಕಲ್ಲ ಎಂದು ನೋವು ತೋಡಿಕೊಂಡರು.


Spread the love