ನ.1ರಂದು ಲೇಡಿಗೋಷನ್ ಆಸ್ಪತ್ರೆಯಲ್ಲಿ ಕಾರುಣ್ಯ ಯೋಜನೆ ಉದ್ಘಾಟನೆ
ಮಂಗಳೂರು: ಮಂಗಳೂರಿನ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಜೊತೆಗಾರರಿಗೆ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆಯ ಉದ್ಘಾಟನೆ ನವೆಂಬರ್ 1ರಂದು ಸಂಜೆ 4.00 ಗಂಟೆಗೆ ಲೇಡಿಗೋಷನ್ ಆಸ್ಪತ್ರೆಯ ಯೋಗಾಭ್ಯಾಸ ಧ್ಯಾನ ಕೇಂದ್ರದಲ್ಲಿ ನಡೆಯಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಯೋಜನೆಗೆ ಚಾಲನೆ ನೀಡಲಿದ್ದು, ಶಾಸಕರಾದ ಡಿ.ವೇದವ್ಯಾಸ ಕಾಮತ್, ಐವನ್ ಡಿಸೋಜ, ಮಂಜುನಾಥ ಭಂಡಾರಿ, ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಅವರಿಗೆ `ಕರುಣಾಳು ಕನ್ನಡಿಗ’ ಗೌರವಾರ್ಪಣೆ ನಡೆಯಲಿದೆ. ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುಜಾಹ್ ಮೊಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ನವೆಂಬರ್ ತಿಂಗಳ ಆಹಾರದ ಪ್ರಾಯೋಜಕತ್ವವನ್ನು ದುಬಾಯಿಯ ಅಲ್ ಫಾರಿಸ್ ಇಕ್ಯುಪ್ಮೆಂಟ್ ರೆಂಟಲ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಎಚ್.ಡಬ್ಲ್ಯು. ಪಿಂಟೊ ವಹಿಸಿದ್ದಾರೆ.
ಎಂಫ್ರೆಂಡ್ಸ್ ವತಿಯಿಂದ ನಿರಂತರ ಎಂಟು ವರ್ಷಗಳಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆಗಾರರಿಗೆ ಪ್ರತಿದಿನ ರಾತ್ರಿಯ ಊಟ ನೀಡಲಾಗುತ್ತಿದೆ. ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ `ಕರುಣೆಯ ತೊಟ್ಟಿಲು- ಕ್ಲೋತ್ ಬ್ಯಾಂಕ್’ ಸೇವೆ ಆರಂಭಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಎರಡು ವರ್ಷಗಳಿಂದ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ `ಕ್ಲಾಸ್ ಆನ್ ವೀಲ್’ ಎಂಬ ಸುಸಜ್ಜಿತ ಬಸ್ ಮೂಲಕ ಕಂಪ್ಯೂಟರ್‌ನ ಮೂಲ ಶಿಕ್ಷಣ ನೀಡಲಾಗುತ್ತಿದೆ. ಅಶಕ್ತರಿಗೆ ಗಾಲಿ ಕುರ್ಚಿ, ವಾಕರ್, ಕೃತಕ ಕಾಲು, ಔಷಧ, ರೋಗಿಗಳು ಮತ್ತು ಮೃತದೇಹಗಳ ಸಾಗಾಟಕ್ಕೆ ಆ್ಯಂಬುಲೆನ್ಸ್ ವೆಚ್ಚ ಮತ್ತಿತರ ಸೇವೆ ನೀಡಲಾಗುತ್ತಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ತಿಳಿಸಿದ್ದಾರೆ.













